ಕಲಾತಪಸ್ವಿ ಡಾ.ರಾಜ್​ಗಿಂದು 94ನೇ ಹುಟ್ಟುಹಬ್ಬ – ಅಭಿಮಾನಿಗಳ ‘ಅಪ್ಪಾಜಿ’ ಬಗ್ಗೆ ನಿಮಗೆಷ್ಟು ಗೊತ್ತು?

ಕಲಾತಪಸ್ವಿ ಡಾ.ರಾಜ್​ಗಿಂದು 94ನೇ ಹುಟ್ಟುಹಬ್ಬ – ಅಭಿಮಾನಿಗಳ ‘ಅಪ್ಪಾಜಿ’ ಬಗ್ಗೆ ನಿಮಗೆಷ್ಟು ಗೊತ್ತು?

ಹಾಡಲು ನಿಂತ್ರೆ ಕೋಗಿಲೆಯೂ ನಾಚುವಂಥ ಸ್ವರ. ಅಭಿನಯದಲ್ಲಿ ಮೇರು ಪರ್ವತ. ಒಂದೊಂದು ಸಿನಿಮಾ ಕೂಡ ಜಗತ್ತಿಗೆ ಹಿಡಿದ ಕನ್ನಡಿಯಂತೆ. ಯಾಕಂದ್ರೆ ಡಾ. ರಾಜ್ ಕುಮಾರ್ ಅಂದ್ರೆ ಅದು ಅಂದ್ರೆ ಬರೀ ಹೆಸರಾಗಿರಲಿಲ್ಲ. ಅದೊಂದು ಶಕ್ತಿ, ಅದು ಕನ್ನಡದ ಪ್ರತಿಧ್ವನಿ, ಕನ್ನಡಿಗರಿಗಾಗಿ, ಕನ್ನಡಿಗರಿಂದ, ಕನ್ನಡಕ್ಕಾಗಿ ಬಾಳಿ ಬದುಕಿದ ಮೇರುನಟ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಮೈಲುಗಲ್ಲು ಮೂಡಿಸಿದ ಹೆಮ್ಮೆಯ ಕನ್ನಡಿಗ ವರನಟ ಡಾ.ರಾಜಕುಮಾರ್. ಅಭಿಮಾನಿಗಳನ್ನ ದೇವರು ಎಂದೇ ಕರೆಯುತ್ತಿದ್ದ ಆ ಕಲಾತಪಸ್ವಿಯ 94ನೇ ಹುಟ್ಟುಹಬ್ಬ ಇವತ್ತು.

ಡಾ.ರಾಜ್ ಕುಮಾರ್. ಅಭಿಮಾನಿಗಳಿಂದ ಅಣ್ಣಾವ್ರು, ಅಪ್ಪಾಜಿ ಅಂತಾನೇ ಕರೆಸಿಕೊಳ್ಳುತ್ತಿದ್ದ ಬಂಗಾರದ ಮನುಷ್ಯ. ಅಣ್ಣಾವ್ರು ಹುಟ್ಟಿದ್ದು 1929ರ ಏಪ್ರಿಲ್ 24ರಂದು. ಇವತ್ತು 94ನೇ ಹುಟ್ಟುಹಬ್ಬ. ಹೀಗಾಗಿ ಅಭಿಮಾನಿಗಳೆಲ್ಲಾ ಪ್ರೀತಿಯ ಅಪ್ಪಾಜಿಯ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ. ಬಹುಮುಖ ಪ್ರತಿಭೆ ಹೊಂದಿದ್ದ ಡಾ.ರಾಜ್ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ವರ್ಣನೆಗೆ ನಿಲುಕದ್ದು. ಎಂಥದ್ದೇ ಪಾತ್ರವಿದ್ರೂ ಜೀವ ತುಂಬಬಲ್ಲ ಖ್ಯಾತ ನಟ. ಅಷ್ಟಕ್ಕೂ ಅಣ್ಣಾವ್ರ ಸಿನಿಯಾನ ಹೇಗಿತ್ತು. ಅವರ ಜೀವನ, ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.

ಚಾಮರಾಜನಗರದ ಸಿಂಗಾನಲ್ಲೂರು ಎಂಬ ಕುಗ್ರಾಮದ ಪುಟ್ಟ ಬಾಲಕ ಮುತ್ತುರಾಜ. ಅದೇ ಮುತ್ತುರಾಜ ಮುಂದೆ ಡಾ.ರಾಜಕುಮಾರನನ್ನಾಗಿ ಮಾಡಿದ್ದು ಇದೇ ಅಭಿಮಾನಿ ದೇವರುಗಳು. ಡಾ.ರಾಜ್ ಕುಮಾರ್ ಹುಟ್ಟಿದ್ದು 1929, ಏಪ್ರಿಲ್ 24ರಂದು. ಪುಟ್ಟಸ್ವಾಮಯ್ಯ ಹಾಗೂ ಲಕ್ಷ್ಮಮ್ಮ ದಂಪತಿ ಹಿರಿಮಗ ಈ ‘ಗಾಜನೂರು ಗಂಡು’. ಬಡತನ, ಅನಕ್ಷರಸ್ಥ ಕುಟುಂಬದಲ್ಲಿ ಜನಿಸಿದ ಡಾ.ರಾಜ್ ಓದಿದ್ದು ನಾಲ್ಕನೇ ಕ್ಲಾಸ್. ಆದರೆ ಸಾಧನೆ ಮಾತ್ರ ಶಿಖರದಷ್ಟು.

ಬದುಕು ಬದಲಿಸಿದ ‘ಬೇಡರ ಕಣ್ಣಪ್ಪ’

ಅಣ್ಣಾವ್ರ ಬದುಕು ಬದಲಿಸಿದ್ದೇ ಬೇಡರ ಕಣ್ಣಪ್ಪ ಸಿನಿಮಾ. ಮೊದಲು ಕೆಲವೊಂದಿಷ್ಟು ನಾಟಕಗಳಲ್ಲಿ ಚಿಕ್ಕಪುಟ್ಟ ಪಾತ್ರ ಮಾಡಿದ ರಾಜ್, 1954ರಲ್ಲಿ ಬೇಡರ ಕಣ್ಣಪ್ಪ ಚಿತ್ರದಲ್ಲಿ ಕಣ್ಣಪ್ಪನ ಪಾತ್ರ ಮಾಡಿದ್ರು. ಅಲ್ಲಿಗೆ ‘ಮುತ್ತುರಾಜ್’ ಎಂಬ ಹಳ್ಳಿ ಹೈದನ ಬದುಕೇ ಬದಲಾಯಿತು. ‘ಮುತ್ತುರಾಜ’ ಕನ್ನಡಿಗರ ಮನೆ ಮನೆಯ ‘ರಾಜಕುಮಾರ’ನಾಗಿ ಬೆಳೆದ್ರು. ಬೇಡರ ಕಣ್ಣಪ್ಪನಿಂದ ಶುರುವಾದ ರಾಜ್ ಸಿನಿ ಪಯಣ ತಡೆಯಿಲ್ಲದೇ ಸಾಗಿತು. ಬೇಡರ ಕಣ್ಣಪ್ಪನಿಂದ ಶಬ್ದವೇದಿವರೆಗೂ ರಾಜ್ ಮುಟ್ಟಿದ್ದೆಲ್ಲವೂ ಚಿನ್ನ, ಅಭಿನಯಿಸಿದ್ದೆಲ್ಲವೂ ಚೆನ್ನ. ಬೇಡರ ಕಣ್ಣಪ್ಪ, ಓಹಿಲೇಶ್ವರ, ಭೂಕೈಲಾಸ, ರಣಧೀರ ಕಂಠೀರವ, ದಶಾವತಾರ, ಭಕ್ತ ಕನಕದಾಸ, ವಿಜಯನಗರದ ವೀರಪುತ್ರ, ಇಮ್ಮಡಿ ಪುಲಕೇಶಿ, ಹುಲಿಯ ಹಾಲಿನ ಮೇವು, ವೀರ ಕೇಸರಿ, ಶ್ರೀಕೃಷ್ಣ ದೇವರಾಯ, ಮಂತ್ರಾಲಯ ಮಹಾತ್ಮೆ, ಸತ್ಯಹರೀಶ್ಚಂದ್ರ, ಸನಾದಿ ಅಪ್ಪಣ್ಣ, ಬೀದಿ ಬಸವಣ್ಣ, ಬಂಗಾರದ ಮನುಷ್ಯ, ಜೇಡರಬಲೆ, ಮೇಯರ್ ಮುತ್ತಣ್ಣ, ಭಲೇಜೋಡಿ, ಗೋವಾದಲ್ಲಿ ಸಿಐಡಿ 999, ಕಸ್ತೂರಿ ನಿವಾಸ, ಹೊಸಬೆಳಕು, ಕವಿರತ್ನ ಕಾಳಿದಾಸ, ಸಿಪಾಯಿ ರಾಮು, ಶಂಕರ್ ಗುರು, ಬಂಗಾರದ ಪಂಜರ, ಭಕ್ತ ಪ್ರಹ್ಲಾದ, ದಾರಿತಪ್ಪಿದ ಮಗ, ಭಾಗ್ಯವಂತರು, ಆಪರೇಷನ್ ಡೈಮಂಡ್ ರಾಕೆಟ್, ಗಂಧದಗುಡಿ, ಶಬ್ದವೇದಿ… ಹೀಗೆ ರಾಜ್ ಅಭಿನಯಿಸಿದ್ದು ಒಂದೇ, ಎರಡೇ… ಬರೋಬ್ಬರಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ರಾಜ್ ನಟಿಸಿದ್ದಾರೆ.

‘ಬಂಗಾರದ ಮನುಷ್ಯ’ನ ಮಾದರಿ ಸಿನಿಮಾಗಳು.

ಅಷ್ಟಕ್ಕೂ ರಾಜ್ ಕುಮಾರ್ ಬರೀ ಸಂಭಾವನೆಗಾಗಿ ಮಾತ್ರ ನಟಿಸುತ್ತಿರಲಿಲ್ಲ. ತಮ್ಮ ಪಾತ್ರದ ಮೂಲಕ ಸಂದೇಶ ಸಾರುತ್ತಿದ್ದರು. ಬಂಗಾರದ ಮನುಷ್ಯದ ಮಾದರಿ ಯುವಕ ರಾಜೀವ, ಕಸ್ತೂರಿ ನಿವಾಸದ ತ್ಯಾಗಮೂರ್ತಿ, ಭಕ್ತಕನಕ ದಾಸ ಸಿನಿಮಾದ ಭಕ್ತ, ಭಕ್ತ ಪ್ರಹ್ಲಾದದ ರಾಕ್ಷಸ ಹಿರಣ್ಯ ಕಷ್ಯಪ, ಇಮ್ಮಡಿ ಪುಲಕೇಶಿ, ಶ್ರೀಕೃಷ್ಣ ದೇವರಾಯನ ರಾಜ, ದೇವತೆ, ರಾಕ್ಷಸ, ಶ್ರೀಮಂತ, ಬಡವ, ವೈದ್ಯ, ಮೇಯರ್, ಮುಗ್ಧ, ಹುಚ್ಚ, ಅಪ್ಪ, ಪುಂಡ ಮಗ, ಸಾಹುಕಾರ, ಆಳು, ಶಿಕ್ಷಕ, ಪ್ರೇಮಿ, ವಿರಹಿ, ತ್ಯಾಗಿ, ಪೊಲೀಸ್ ಅಧಿಕಾರಿ, ರೈತ, ಸಂಪತ್ತಿಗೆ ಸವಾಲು ಹಾಕುವ ಆಂಗ್ರಿ ಯಂಗ್ ಮ್ಯಾನ್.. ಹೀಗೆ ನೂರಾರು ಪಾತ್ರ ಮಾಡಿದ್ದ ಬಹುಶಃ ರಾಜ್ ಒಬ್ಬರೇ ಇರಬೇಕು. ಆಡು ಮುಟ್ಟದ ಸೊಪ್ಪಿಲ್ಲ, ರಾಜ್ ಅಭಿನಯಿಸದ ಪಾತ್ರವಿಲ್ಲ ಅನ್ನೋದು ಇಡೀ ಭಾರತೀಯ ಚಿತ್ರರಂಗಕ್ಕೇ ಗೊತ್ತಿರೋ ವಿಚಾರ.

ಕುಡಿಯಲ್ಲ.. ಸಿಗರೇಟ್ ಸೇದಲ್ಲ.. ರೇಪ್ ಮಾಡಲ್ಲ

ಕಲಾವಿದ ಅಂದ ಮೇಲೆ ಎಲ್ಲಾ ರೀತಿಯ ಪಾತ್ರಗಳನ್ನ ಮಾಡಬೇಕಾಗುತ್ತದೆ. ಆದ್ರೆ ಅಂತಹ ಪಾತ್ರಗಳನ್ನ ಅಣ್ಣಾವ್ರು ಆಯ್ಕೆ ಮಾಡಿಕೊಳ್ಳುತ್ತಿರಲಿಲ್ಲ. ಯಾಕಂದ್ರೆ ಆ ಪಾತ್ರಗಳು ಸಮಾಜಕ್ಕೆ ಕೆಟ್ಟ ಸಂದೇಶ ನೀಡಬಾರದು ಅನ್ನೋ ಕಳಕಳಿ ರಾಜ್ ಕುಮಾರ್ ಅವ್ರಿಗಿತ್ತು. ಹೀಗಾಗಿಯೇ ಸಿನಿಮಾಗಳಲ್ಲಿ ರಾಜ್ ಕುಡಿದಿಲ್ಲ, ಸಿಗರೇಟ್ ಸೇದಿಲ್ಲ, ರೇಪ್ ಸೀನ್, ಕಿಸ್ಸಿಂಗ್ ಸೀನ್ ಗಳಲ್ಲಿ ನಟಿಸಿಲ್ಲ. ಅದೆಷ್ಟೇ ಸಂಭಾವನೆ ಕೊಟ್ಟರೂ ನಾನು ಇಂತ ಪಾತ್ರಗಳಲ್ಲಿ ನಟಿಸಲ್ಲ ಅಂತ ಪ್ರೊಡ್ಯೂಸರ್ ಗಳಿಗೆ ಖಡಕ್ ಆಗಿಯೇ ಹೇಳ್ತಿದ್ದರಂತೆ. ಮತ್ತೊಂದು ವಿಶೇಷ ಅಂದ್ರೆ ಪಾತ್ರಗಳಿಗೆ ಜೀವ ತುಂಬುವ ರಾಜ್, ಆ ಪಾತ್ರಕ್ಕಾಗಿ ತಪ್ಪಸ್ಸೇ ಮಾಡ್ತಿದ್ರು. ಇದಕ್ಕೊಂದು ಚಿಕ್ಕ ಉದಾಹರಣೆ ಅಂದ್ರೆ ‘ಮಂತ್ರಾಲಯ ಮಹಾತ್ಮೆ’ ಸಿನಿಮಾ. ಅಸಲಿಗೆ ರಾಜ್ ನಾನ್ ವೆಜ್ ಪ್ರಿಯ. ನಾಟಿ ಕೋಳಿ ಸಾರು, ಮುದ್ದೆ ಅಂದ್ರೆ ಅವರಿಗೆ ಪಂಚಪ್ರಾಣ. ಹೀಗಿದ್ದರು ‘ಮಂತ್ರಾಲಯ ಮಹಾತ್ಮೆ’ಯ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಪಾತ್ರಕ್ಕಾಗಿ ರಾಜ್ ನಾನ್ ವೆಜ್ ತ್ಯಜಿಸಿದ್ದರು. ಪಾತ್ರ ಒಪ್ಪಿಕೊಂಡ ದಿನದಿಂದಲೇ ಶೂಟಿಂಗ್ ಮುಗಿಯೋ ತನಕ ಕೋಳಿ ಸಾರಿನ ಜೊತೆ ರಾಜ್ ಟೂ ಬಿಟ್ಟಿದ್ರು!

ಸಕಲಕಲಾವಲ್ಲಭ ಡಾ.ರಾಜ್

ಡಾ.ರಾಜ್ ಬರೀ ನಟರೊಂದೇ ಅಲ್ಲ, ಗಾಯಕರಾಗಿಯೂ ಪ್ರಸಿದ್ಧರು. ತಮ್ಮ ಗಾಯನಕ್ಕಾಗೇ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ನಟ ಡಾ.ರಾಜ್. ‘ಸಂಪತ್ತಿಗೆ ಸವಾಲ್’ ಸಿನಿಮಾದ ಹಾಡಿನಿಂದ ಶುರುವಾದ ರಾಜ್ ಗಾಯನಯಾತ್ರೆ ಕೊನೆಯವರೆಗೂ ಸಾಗುತ್ತಲೇ ಇತ್ತು. ಬರೀ ತಮ್ಮೊಬ್ಬರಿಗೆ ಅಷ್ಟೇ ದನಿ ನೀಡಿಲ್ಲ. ಕನ್ನಡದ ಅದೆಷ್ಟೋ ಹಿರಿ-ಕಿರಿಯ ನಟರಿಗೆ ದನಿಯಾಗಿದ್ದು ಗಾನಗಂಧರ್ವನ ಹೆಚ್ಚುಗಾರಿಕೆ. ತಮ್ಮ ಕಂಠಸಿರಿಗಾಗೇ ‘ಜೀವನಚೈತ್ರ’ ಸಿನಿಮಾದ ‘ನಾದಮಯ’ ಹಾಡಿಗೆ ರಾಷ್ಟ್ರಪ್ರಶಸ್ತಿ ಪಡೆದು, ಇಡೀ ಲೋಕವೇ ತಿರುಗಿ ನೋಡುವಂತೆ ಮಾಡಿದ್ದರು. ಇನ್ನೊಂದು ವಿಶೇಷ ಅಂದ್ರೆ ಅದೆಷ್ಟೋ ಹಾಡು ಹಾಡಿ, ಅದೆಷ್ಟೋ ಸ್ಟಾರ್ ನಟರಿಗೆ ದನಿ ನೀಡಿದ್ದ ಖ್ಯಾತ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವ್ರಿಗೂ ದನಿಯಾಗಿದ್ದು ನಮ್ಮ ರಾಜಣ್ಣ.

ಅಣ್ಣಾವ್ರಿಗೆ ಒಲಿದು ಬಂದವು ಸಾಲು ಸಾಲು ಪ್ರಶಸ್ತಿ

ರಾಜ್ ಕುಮಾರ್ ಯಾವಾಗಲೂ ಪ್ರಶಸ್ತಿಗಳನ್ನು ಹುಡುಕಿಕೊಂಡು ಹೋದವ್ರಲ್ಲ, ಬದಲಾಗಿ ಅವರ ಪ್ರತಿಭೆಯನ್ನು ನೋಡಿ ಪ್ರಶಸ್ತಿಗಳೇ ಹುಡುಕಿಕೊಂಡು ಬಂದಿವೆ. ಇವರಿಗಾಗಿಯೇ ಅದೆಷ್ಟೋ ಪ್ರಶಸ್ತಿಗಳು ಹುಟ್ಟಿಕೊಂಡಿವೆ. ಹೂವಿನ ಜೊತೆ ನಾರು ಸ್ವರ್ಗ ಸೇರಿತು ಎನ್ನುವಂತೆ ರಾಜ್ ಕುಮಾರ್ ಗೆ ಪ್ರಶಸ್ತಿ ನೀಡಿದ ಮೇಲೆಯೇ ಆ ಪ್ರಶಸ್ತಿಗಳಿಗೆ ಒಂದು ಹೆಸರು ಬಂದಿದೆ ಅಂದರೆ ಅತಿಶಯೋಕ್ತಿಯೇನಲ್ಲ. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಕರ್ನಾಟಕ ರತ್ನ, ಅತ್ಯುತ್ತಮ ಗಾಯಕ ರಾಷ್ಟ್ರ ಪ್ರಶಸ್ತಿ, ಅಮೆರಿಕಾದ ಕೆಂಟಕಿ ಕರ್ನಲ್ ಪ್ರಶಸ್ತಿ, ನಾಡೋಜ, ಗೌರವ ಡಾಕ್ಟರೇಟ್ ಸೇರಿದಂತೆ ರಾಜ್ಯ, ದೇಶ, ವಿದೇಶದ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಪ್ರಶಸ್ತಿ ಈ ವಿಜಯನಗರದ ವೀರಪುತ್ರನ ಕೀರ್ತಿ ಕಿರೀಟ ಸೇರಿದೆ.

ಬಿರುದುಗಳ ಸರದಾರ

ಬಹುಶಃ ರಾಜ್ ಕುಮಾರ್ ಅವ್ರಿಗೆ ಇರುವಷ್ಟು ಬಿರುದುಗಳು ಬೇರೆ ಯಾವ ನಟನಿಗೂ ಸಿಕ್ಕಿಲ್ಲ, ಸಿಗೋದೂ ಇಲ್ಲ. ಕನ್ನಡಿಗರ ಕಣ್ಮಣಿ, ನಟ ಸಾರ್ವಭೌಮ, ರಸಿಕರ ರಾಜ, ಯೋಗರಾಜ, ಗಾನಗಂಧರ್ವ, ವರನಟ, ಅಭಿಮಾನಿಗಳ ದೇವರು ಹೀಗೆ ನೂರಕ್ಕೂ ಹೆಚ್ಚು ಬಿರುದುಗಳು ರಾಜ್ ಅವ್ರಿಗಿವೆ. ಆದ್ರೆ ಜನ್ರು ಅವರನ್ನು ಪ್ರೀತಿಯಿಂದ ಕರೆದಿದ್ದು ಅಣ್ಣಾವ್ರು. ಅವ್ರೂ ಸಹ ಅಭಿಮಾನಿಗಳನ್ನು ಬರೀ ಅಭಿಮಾನಿಗಳು ಅಂತ ಕರೆಯದೇ ಅಭಿಮಾನಿ ದೇವರು ಅಂತ ಕರೆದು ಹೊಸ ಟ್ರೆಂಡ್ ಸೃಷ್ಟಿಸಿದ್ರು. ಈ ಮೂಲಕ ನೀವಿಲ್ಲದೇ ನಾವಿಲ್ಲ ಅನ್ನೋ ಸಂದೇಶ ಸಾರಿದ್ರು.

ಕನ್ನಡದ ತುಡಿತ.. ರಾಜಕೀಯದ ಬಗ್ಗೆ ನಿರಾಸಕ್ತಿ

ರಾಜಕುಮಾರ್ ಕನ್ನಡಕ್ಕಾಗೇ ಹುಟ್ಟಿದವರು ಅಂದ್ರೆ ತಪ್ಪಾಗೋದಿಲ್ಲ. ನಾಡು, ನುಡಿ, ನೆಲ-ಜಲಕ್ಕೆ ಧಕ್ಕೆ ಬಂದಾಗ ಹೋರಾಟದ ಮುಂಚೂಣಿಯಲ್ಲಿ ಇರ್ತಾ ಇದ್ದಿದ್ದು ಇದೇ ಅಣ್ಣಾವ್ರು. ಕರುನಾಡಿನ ಹಿರಿಯಣ್ಣನಾಗಿ ಗೋಕಾಕ್ ಚಳುವಳಿ ನಡೆಸಿದ್ದು, ಆ ಮೂಲಕ ಕನ್ನಡಿಗರ ದನಿಯಾಗಿದ್ದು ಈಗ ಇತಿಹಾಸ. ಕಾವೇರಿ ಹೋರಾಟ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಮುಂತಾದ ಹೋರಾಟಗಳಲ್ಲಿ ರಾಜ್ ಭಾಗಿಯಾಗಿ, ಹೋರಾಟಗಳನ್ನು ಯಶಸ್ವಿಯಾಗಿಸಿದ್ದರು. ಇನ್ನು ಶುದ್ಧ ಕನ್ನಡ ಅಂದ್ರೆ ಅದು ರಾಜ್ ಕುಮಾರ್ ಮಾತನಾಡೋ ಭಾಷೆ ಅನ್ನೋದು ಪ್ರತಿಯೊಬ್ಬ ಕನ್ನಡಿಗರು ಒಪ್ಪೋ ಮಾತು. ಹೀಗಿದ್ದ ರಾಜ್​ರನ್ನ ರಾಜಕೀಯಕ್ಕೆ ತರಲು ರಾಜಕೀಯ ಪಕ್ಷಗಳು ಕಾಯ್ತಾ ಇದ್ದವು. ಪಕ್ಕದ ರಾಜ್ಯ ಆಂಧ್ರದ ಎನ್.ಟಿ.ಆರ್. ತಮಿಳಿನ ಎಂಜಿಆರ್ ಸೇರಿದಂತೆ ಕೆಲ ಸೂಪರ್ ಸ್ಟಾರ್ ಗಳು ರಾಜಯಕೀಯ ರಂಗಕ್ಕೆ ಧುಮುಕಿ ಯಶಸ್ವಿಯೂ ಆಗಿದ್ರು. ಆದರೆ ಇವ್ರು ರಾಜಕೀಯವನ್ನು ಹತ್ತಿರಕ್ಕೂ ಬಿಟ್ಟುಕೊಂಡವ್ರಲ್ಲ. ಒಂದು ವೇಳೆ ರಾಜಕೀಯಕ್ಕೆ ಬಂದಿದ್ದರೆ ಸುಲಭವಾಗಿ ಗೆಲ್ಲಬಹುದಿತ್ತು. ಮನಸ್ಸು ಮಾಡಿದ್ರೆ ಸಿಎಂ ಕೂಡ ಆಗಬಹುದಿತ್ತು. ಆದ್ರೆ ಸಿನಿಮಾಗಾಗಿಯೇ ನಾನು ಹುಟ್ಟಿದ್ದು, ಕೊನೆ ಉಸಿರುರೋವರೆಗೂ ನಟಿಸುತ್ತೇನೆ ಅಂತಿದ್ದರು ರಾಜ್. ಹಾಗೇ ನಡೆದುಕೊಂಡರೂ ಕೂಡ.

ಕನ್ನಡಕ್ಕೆ ಕರಾಳ ದಿನ 2006ರ ಏಪ್ರಿಲ್ 12

ಕನ್ನಡಿಗರ ಕಣ್ಮಣಿ 2006ರ ಏಪ್ರಿಲ್ 12ರಂದು ತಮ್ಮ ಪಯಣ ಮುಗಿಸಿದ್ರು. ಆಗ ಅಭಿಮಾನಿಗಳು ಗಲಾಟೆ, ದೊಂಬಿ ನಡೆಸಿದ್ದು, ಗೋಲಿಬಾರ್ ಆಗಿದ್ದು, ಅಭಿಮಾನಿಗಳು ಪ್ರಾಣ ತ್ಯಜಿಸಿದ್ದು ಕರುನಾಡ ಇತಿಹಾಸದಲ್ಲಿ ಕಪ್ಪು ಚುಕ್ಕೆಗಳಾಗಿ ದಾಖಲಾಗಿವೆ. ಕನ್ನಡಿಗರ ಕಣ್ಮಣಿ 2006ರ ಏಪ್ರಿಲ್ 12ರಂದು ತಮ್ಮ ಅವತಾರ ಮುಗಿಸಿದ್ರು. ಆಗ ಅಭಿಮಾನಿಗಳು ಗಲಾಟೆ, ದೊಂಬಿ ನಡೆಸಿದ್ದು, ಗೋಲಿಬಾರ್ ಆಗಿದ್ದು, ಅಭಿಮಾನಿಗಳು ಪ್ರಾಣ ತ್ಯಜಿಸಿದ್ದು ಕರುನಾಡ ಇತಿಹಾಸದಲ್ಲಿ ಕಪ್ಪು ಚುಕ್ಕೆಗಳಾಗಿ ದಾಖಲಾಗಿವೆ.

ಏನೇ ಹೇಳಿ ಕಲಾವಿದರು ಸಾವಿರಾರು ಜನ ಹುಟ್ಟುತ್ತಾರೆ. ಆದ್ರೆ ಕಲಾವಿದರೆಲ್ಲ ರಾಜ್ ಕುಮಾರ್ ಆಗೋಕೆ ಸಾಧ್ಯನೇ ಇಲ್ಲ. ರಾಜ್ ಎಂಬುದು ಪ್ರತಿಭೆಗಳ ಸಾಗರ. ಅವರ ಬಗ್ಗೆ ಏನೇ ವರ್ಣಿಸಿದ್ರೂ, ಅವ್ರ ಬಗ್ಗೆ ಏನೇ ಬರೆದರೂ ಅದು ಬೊಗಸೆಯಲ್ಲಿ ನೀರು ಹಿಡಿದಷ್ಟೇ. ಪ್ರತಿ ಕನ್ನಡಿಗರ ಹೃದಯದಲ್ಲಿ, ಕನ್ನಡಿಗರ ಮನೆ-ಮನಗಳಲ್ಲಿ ರಾಜ್ ಎಂದಿಗೂ ಅಮರ. ಅವರ ನುಡಿ, ನಡೆ, ಅವರ ಸಿನಿಮಾ ಎಂದಿಗೂ ಅಜರಾಮರ. ಯಾಕೆಂದ್ರೇ ಕನ್ನಡಕ್ಕೊಬ್ರೇ ರಾಜ್…

suddiyaana