ಮಾತಾಡದೇ ಭಾವನೆಗಳ ಮೂಲಕವೇ ಮನ ಮುಟ್ಟಿದ ‘ಟೋಬಿ’ – ರಾಜ್ ಬಿ. ಶೆಟ್ಟಿ ಅಭಿನಯಕ್ಕೆ ಪ್ರೇಕ್ಷಕರ ಬಹುಪರಾಕ್
ನಟ ರಾಜ್ ಬಿ. ಶೆಟ್ಟಿ ಅವರು ಕನ್ನಡ ಚಿತ್ರರಂಗದಲ್ಲಿ ಒಂದು ಟ್ರೆಂಡ್ ಸೃಷ್ಟಿ ಮಾಡಿದ್ದಾರೆ. ಇದೀಗ ‘ಟೋಬಿ’ ಚಿತ್ರದ ಮೇಲೂ ಪ್ರೇಕ್ಷಕರ ನಿರೀಕ್ಷೆ ಸಾಕಷ್ಟಿತ್ತು. ಶುಕ್ರವಾರ ‘ಟೋಬಿ’ ಚಿತ್ರ ರಿಲೀಸ್ ಆಗಿದ್ದು, ಅಭಿಮಾನಿಗಳ ಮನಗೆದ್ದಿದೆ. ನಟನೆಯ ವಿಚಾರದಲ್ಲಿ ರಾಜ್ ಬಿ. ಶೆಟ್ಟಿ ಅವರು ‘ಟೋಬಿ’ ಪಾತ್ರದ ಮೂಲಕ ಮತ್ತೊಂದು ಹೆಜ್ಜೆ ಮೇಲೇರಿದ್ದಾರೆ.
ಇದನ್ನೂ ಓದಿ: ‘ಟೋಬಿ’ ಸಿನಿಮಾ ಟ್ರೈಲರ್‌ನಲ್ಲಿ ನಾನಾ ರೂಪ – ರಾಜ್.ಬಿ ಶೆಟ್ಟಿ ಲುಕ್ ನೋಡಿ ಬೆರಗಾದ ಅಭಿಮಾನಿಗಳು
ಬಾಲ್ಯದಲ್ಲಿಯೇ ಸಾಕಷ್ಟು ದೌರ್ಜನ್ಯಕ್ಕೆ ಒಳಗಾದ ಒಬ್ಬ ಬಾಲಕ. ಒಂದು ಹೆಸರು ಕೂಡ ಆತನಿಗೆ ಇಲ್ಲ. ಪೊಲೀಸರ ಲಾಠಿ ಏಟು, ಜನರ ಚುಚ್ಚು ಮಾತುಗಳು ಅವನಿಗೆ ನಿತ್ಯವೂ ತಪ್ಪಿದ್ದಲ್ಲ. ಬಳಿಕ ಅವನಿಗೆ ಆಶ್ರಯ ನೀಡಿದವರು ಟೋಬಿ ಅಂತ ಹೆಸರು ಇಡುತ್ತಾರೆ. ಕೋಪ ಬಂದರೆ ಆತ ಎಲ್ಲರನ್ನೂ ಚಚ್ಚಿ ಹಾಕುತ್ತಾನೆ. ದೊಡ್ಡವನಾದ ಮೇಲೂ ಅವನು ಭಯಂಕರ ಕೋಪಿಷ್ಠನಾಗಿಯೇ ಫೇಮಸ್ ಆಗುತ್ತಾನೆ. ಪ್ರೀತಿಪಾತ್ರರು ಹೇಳಿದರೆ ಮಾತ್ರ ಅವನು ಮಾತು ಕೇಳುತ್ತಾನೆ. ಇಂಥ ವ್ಯಕ್ತಿಯನ್ನು ಕೆಲವರು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ. ತನ್ನನ್ನು ಅವಕಾಶಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುವುದು ನಿಧಾನವಾಗಿ ಟೋಬಿಗೆ ಅರಿವಾಗುತ್ತದೆ. ಇದಾದ ನಂತರ ಮತ್ತೆ ಟೋಬಿ ಬದಲಾಗುತ್ತಾನೆ. ಟಗರಿನಂತೆ ಗುಮ್ಮಲು ಶುರುಮಾಡುತ್ತಾನೆ. ‘ಟೋಬಿ’ ಸಿನಿಮಾದಲ್ಲಿನ ಕೆಲ ಪಾತ್ರಗಳ ವಿಚಾರಕ್ಕೆ ಬಂದರೆ ‘ಗರುಡ ಗಮನ ವೃಷಭ ವಾಹನ’ ಚಿತ್ರದ ಕಥೆಯೂ ನೆನಪಾಗುತ್ತದೆ. ರಾಜ್ ಬಿ. ಶೆಟ್ಟಿ ಅವರ ಬೇರೆಲ್ಲಾ ಸಿನಿಮಾಗಳಿಗೆ ಹೋಲಿಸಿದರೆ ‘ಟೋಬಿ’ ಸಿನಿಮಾದಲ್ಲಿನ ಅವರ ಅಭಿನಯ ನಿಜಕ್ಕೂ ಸೂಪರ್. ಚಿತ್ರದ ಇನ್ನೊಂದು ಪ್ರಮುಖ ಅಂಶ ಎಂದರೆ ಟೋಬಿಗೆ ಮಾತು ಬರುವುದಿಲ್ಲ. ಆದರೆ ಅವನೊಳಗೆ ಸಾವಿರಾರು ಭಾವನೆಗಳಿವೆ. ಪ್ರೀತಿ, ದ್ವೇಷ, ಮಮತೆ, ಸಿಟ್ಟು, ಅಸಹಾಯಕತೆ ಮುಂತಾದ ಭಾವನೆಗಳನ್ನು ಆ ಪಾತ್ರ ಒಳಗೊಂಡಿದೆ. ಒಂದು ಅಕ್ಷರವನ್ನೂ ಮಾತನಾಡದೇ ಆ ಎಲ್ಲ ಭಾವನೆಗಳನ್ನು ಅಭಿವ್ಯಕ್ತಿಸುವ ಮೂಲಕ ರಾಜ್ ಬಿ. ಶೆಟ್ಟಿ ಅವರು ಗಮನ ಸೆಳೆಯುತ್ತಾರೆ.
ಈ ಸಿನಿಮಾದಲ್ಲಿ ರಾಜ್ ಮತ್ತು ಚೈತ್ರಾ ಅವರು ತಂದೆ-ಮಗಳ ಪಾತ್ರದಲ್ಲಿ ನಟಿಸಿದ್ದಾರೆ. ಇಲ್ಲಿ ಅಪ್ಪ-ಮಗಳ ಸೆಂಟಿಮೆಂಟ್ ಬೇರೆಯದೇ ರೀತಿಯಲ್ಲಿದೆ. ಜೆನ್ನಿ ಎಂಬ ಪಾತ್ರವನ್ನು ಬಹಳ ಸಮರ್ಥವಾಗಿ ಚೈತ್ರಾ ನಿಭಾಯಿಸಿದ್ದಾರೆ. ಸೆಕೆಂಡ್ ಹಾಫ್ನಲ್ಲಿ ಅವರ ಪಾತ್ರಕ್ಕೆ ಹೆಚ್ಚು ಸ್ಕೋಪ್ ಸಿಕ್ಕಿದೆ. ಟೋಬಿಯ ರೀತಿಯೇ ಪ್ರೇಕ್ಷಕರನ್ನು ಕಾಡುವಂತಹ ಇನ್ನೊಂದು ಪಾತ್ರ ಈ ಜೆನ್ನಿಯದ್ದು. ಇನ್ನುಳಿದಂತೆ ರಾಜ್ ದೀಪಕ್ ಶೆಟ್ಟಿ ಅವರು ಎರಡು ಶೇಡ್ ಇರುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಗೋಪಾಲ ದೇಶಪಾಂಡೆ, ಸಂಯುಕ್ತಾ ಹೊರನಾಡು ಅವರ ನಟನೆ ಕೂಡ ಇಷ್ಟವಾಗುತ್ತದೆ.
‘ಟೋಬಿ’ ಮೊದಲಾರ್ಧ ಕಥೆ ಬಹಳ ನಿಧಾನ ಗತಿಯಲ್ಲಿ ಸಾಗುತ್ತದೆ. ವೇಗದ ನಿರೂಪಣೆ ಬಯಸುವ ಪ್ರೇಕ್ಷಕರಿಗೆ ಇಲ್ಲಿ ತಾಳ್ಮೆಯ ಪರೀಕ್ಷೆ ಆಗುತ್ತದೆ. ದ್ವಿತೀಯಾರ್ಧದಲ್ಲಿ ಕೆಲವು ದೃಶ್ಯಗಳು ಪಟಪಟನೆ ಸಾಗುತ್ತವೆ. ಆಗ ಒಂದಷ್ಟು ವಿವರಗಳು ಮಿಸ್ಸಿಂಗ್ ಎನಿಸುವುದೂ ಉಂಟು.