‘ಮೋದಿ ಧರಿಸಿರುವ ಉಡುಪು ಹೆಣ್ಣಿದ್ದೂ ಅಲ್ಲ, ಗಂಡಿದ್ದೂ ಅಲ್ಲ’ – ಕೀರ್ತಿ ಆಜಾದ್ ವಿವಾದಾತ್ಮಕ ಹೇಳಿಕೆ

‘ಮೋದಿ ಧರಿಸಿರುವ ಉಡುಪು ಹೆಣ್ಣಿದ್ದೂ ಅಲ್ಲ, ಗಂಡಿದ್ದೂ ಅಲ್ಲ’ – ಕೀರ್ತಿ ಆಜಾದ್ ವಿವಾದಾತ್ಮಕ ಹೇಳಿಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಶಿಲ್ಲಾಂಗ್‌ಗೆ ಭೇಟಿ ನೀಡಿದ್ದ ವೇಳೆ ಸಾಂಪ್ರದಾಯಿಕ ಖಾಸಿ ಉಡುಪನ್ನು ಧರಿಸಿದ್ದರು. ಈ ಉಡುಗೆ ಬಗ್ಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಮತ್ತು ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಮಾಡಿದ ಟ್ವೀಟ್ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.

ಕೀರ್ತಿ ಆಜಾದ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ನಲ್ಲಿ ಮಹಿಳಾ ಮಾಡೆಲ್ ಧರಿಸಿರುವ ‘ಮಲ್ಟಿ-ಫ್ಲೋರಲ್ ಕಸೂತಿ ಉಡುಗೆ’ಯ ಸ್ಕ್ರೀನ್ ಶಾಟ್ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಫೋಟೋವನ್ನು ಪೋಸ್ಟ್ ಮಾಡಿದ್ದರು. ಅಲ್ಲದೇ ಆ ಪೋಸ್ಟ್ ನಲ್ಲಿ ಗಂಡು ಅಲ್ಲ ಹೆಣ್ಣು ಅಲ್ಲ. ಫ್ಯಾಷನ್‌ನ ಆರಾಧಕ ಮಾತ್ರ ಎಂದು ಬರೆದುಕೊಂದ್ದಾರೆ. ಇದೀಗ ಈ ಟ್ವೀಟ್ ಗದ್ದಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಶಬರಿಮಲೆ ಯಾತ್ರೆ – 35 ದಿನಗಳಲ್ಲಿ 23 ಮಂದಿ ಹೃದಯಾಘಾತದಿಂದ ಸಾವು

‘ತೃಣಮೂಲ ನಾಯಕ ಮೇಘಾಲಯದ ಸಂಸ್ಕೃತಿಯನ್ನು ಅವಮಾನಿಸಿದ್ದಾರೆ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕಿಡಿಕಾರಿದ್ದಾರೆ. ಕೀರ್ತಿಆಜಾದ್ ಅವರು ಮೇಘಾಲಯದ ಸಂಸ್ಕೃತಿಯನ್ನು ಹೇಗೆ ಅಗೌರವಿಸುತ್ತಿದ್ದಾರೆ ಮತ್ತು ನಮ್ಮ ಬುಡಕಟ್ಟು ವೇಷಭೂಷಣಗಳನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂಬುದನ್ನು ನೋಡುವುದು ದುಃಖಕರವಾಗಿದೆ. ಈ ಬಗ್ಗೆ ಕೀರ್ತಿಆಜಾದ್ ಸ್ಪಷ್ಟೀಕರಣ ನೀಡಬೇಕು. ಅವರ ಈ ಮೌನವು ಬುಡಕಟ್ಟು ವೇಷಭೂಷಣಗಳನ್ನು ಅಪಹಾಸ್ಯ ಮಾಡುವುದೇ ಉದ್ದೇಶವಾಗಿತ್ತು. ನಿಮ್ಮ ಹೇಳಿಕೆಯ ಬಗ್ಗೆ ಜನರಿಗೆ ಅಸಮಾಧನ ಇದೆ. ಜನರ ಮುಂದೆ ನೀವು ಕ್ಷಮೆಯಾಚಿಸಬೇಕು ಎಂದು ಹೇಳಿದರು.

ಬಿಜೆಪಿಯ ರಾಜ್ಯಸಭಾ ಸಂಸದ ಸಮೀರ್ ಓರಾನ್ ಈ ಬಗ್ಗೆ ಕಿಡಿಕಾರಿದ್ದು, ತೃಣಮೂಲ ನಾಯಕನಿಗೆ ಜ್ಞಾನವಿಲ್ಲ. ಮೊದಲು ಪ್ರಧಾನಿ ಧರಿಸಿರುವ ಉಡುಗೆ ಬುಡಕಟ್ಟು ಜನಾಂಗದ್ದು ಎಂದು ತಿಳಿಯಬೇಕು ಎಂದು ಹೇಳಿದ್ದಾರೆ.

ಇದು ಸ್ತ್ರೀ ಅಥವಾ ಪುರುಷ ಉಡುಪು ಎಂದು ನಿಮಗೆ ಖಚಿತವಿಲ್ಲ ಎಂದು ಹೇಳುವ ನಿಮ್ಮ ಈ ಹೇಳಿಕೆ ನೀವು ಬುಡಕಟ್ಟು ವೇಷಭೂಷಣವನ್ನು ಅಗೌರವ ಮಾಡುತ್ತಿದ್ದೀರಿ. ನೀವು ಮತ್ತು ನಿಮ್ಮ ಪಕ್ಷವು ಆದಿವಾಸಿಗಳ ವಿರುದ್ಧ ರೋಗಶಾಸ್ತ್ರೀಯ ದ್ವೇಷದ ಸಾಬೀತಾದ ಇತಿಹಾಸವನ್ನು ಹೊಂದಿದ್ದೀರಿ ಎಂದು ಬಿಜೆಪಿ ಪರಿಶಿಷ್ಟ ಪಂಗಡ ಮೋರ್ಚಾ ಟ್ವೀಟ್ ಮಾಡಿದೆ. ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಕೀರ್ತಿ ಆಜಾದ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಹೇಳಿದೆ. ಕೀರ್ತಿ ಆಜಾದ್ ಅವರ ಈ ಹೇಳಿಕೆ ಹೆಣ್ಣಿನ ಘನತೆಗೆ ಧಕ್ಕೆಯಾಗಿದೆ ಎಂದು ಅರುಣಾಚಲ ಮುಖ್ಯಮಂತ್ರಿ ಪೆಮಾ ಖಂಡು ಹೇಳಿದ್ದಾರೆ.

suddiyaana