ಟೈಟಾನಿಕ್ ಅವಶೇಷ ವೀಕ್ಷಣೆಗೆ ತೆರಳಿದ್ದ ಸಬ್‌ಮೆರಿನ್ ಛಿದ್ರ – ಐವರ ಸಾವಿಗೆ ಆಮ್ಲಜನಕ ಕೊರತೆ ಕಾರಣವಲ್ಲ!

ಟೈಟಾನಿಕ್ ಅವಶೇಷ ವೀಕ್ಷಣೆಗೆ ತೆರಳಿದ್ದ ಸಬ್‌ಮೆರಿನ್ ಛಿದ್ರ – ಐವರ ಸಾವಿಗೆ ಆಮ್ಲಜನಕ ಕೊರತೆ ಕಾರಣವಲ್ಲ!

ಅಟ್ಲಾಂಟಿಕ್ ಮಹಾಸಾಗರದಲ್ಲಿ ಮುಳುಗಿದ್ದ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ತೆರಳಿದ್ದ ಐವರು ದುರಂತ ಅಂತ್ಯ ಕಂಡಿದ್ದಾರೆ. ಕಳೆದ ಐದು ದಿನಗಳ ಹಿಂದೆ ಜಲಾಂತರ್ಗಾಮಿ ನೌಕೆ ಸ್ಪೋಟಗೊಂಡು ಛಿದ್ರ ಛಿದ್ರವಾಗಿದ್ದು, ಅದರ ಅವಶೇಷಗಳು ಪತ್ತೆಯಾಗಿವೆ.

ಒಂದು ಶತಮಾನಕ್ಕೂ ಹಿಂದೆ ದುರಂತಕ್ಕೀಡಾದ ಟೈಟಾನಿಕ್​ ಹಡಗಿನ ಅವಶೇಷ ವೀಕ್ಷಣೆಗೆಂದು ಐವರು ಬಿಲಿಯನೇರ್‌ಗಳು ತೆರಳಿದ್ದರು. ಜೂನ್‌ 18 ರಂದು ಟೈಟಾನಿಕ್ ಹಡಗು ಇರುವ ಕಡೆಗೆ ಧುಮುಕಲು ಪ್ರಾರಂಭಿಸಿದ ಸುಮಾರು 1 ಗಂಟೆ 45 ನಿಮಿಷಗಳ ನಂತರ ಟೈಟಾನ್​ ನೌಕೆ ತನ್ನ ಎಲ್ಲ ಸಂಪರ್ಕವನ್ನು ಕಡಿದುಕೊಂಡಿದೆ. ಈ ಜಲಾಂತರ್ಗಾಮಿ ನೌಕೆಯಲ್ಲಿ ತೆರಳಿದ್ದ ಐವರು ಬಿಲಿಯನೇರ್‌ ಇದ್ದರು.

ಇದನ್ನೂ ಓದಿ: ಟೈಟಾನಿಕ್‌ ನೋಡಲು ಹೋದ ಜಲಾಂತರ್ಗಾಮಿ ಸ್ಪೋಟ – ಬಿಲಿಯನೇರ್‌ಗಳ ದುರಂತ ಅಂತ್ಯ

ನಾಪತ್ತೆಯಾಗಿದ್ದ ಐವರ ಪತ್ತೆಗಾಗಿ ಇಡೀ ವಿಶ್ವವೇ ಪ್ರಾರ್ಥಿಸುತ್ತಿತ್ತು. ಅವರ ಪತ್ತೆಗಾಗಿ ಕಳೆದ ಭಾನುವಾರದಿಂದ ಯುಎಸ್​ ಮತ್ತು ಕೆನಡಾ ಕರಾವಳಿ ಪಡೆ ದಿನದ 24 ಗಂಟೆ ಯುಎಸ್​ ಕನೆಕ್ಟಿಕಟ್‌ ರಾಜ್ಯದ ಎರಡು ಪಟ್ಟು ಗಾತ್ರದ ಪ್ರದೇಶದಲ್ಲಿ ನಿರಂತರ ಕಾರ್ಯಚರಣೆ ನಡೆಸಿತ್ತು. ನೌಕೆಯಲ್ಲಿ 96 ಗಂಟೆಗೆ ಆಗುವಷ್ಟು ಆಮ್ಲಜನಕ ಪೂರೈಕೆ ಇತ್ತು. ಒಂದು ಕಡೆ ಆಮ್ಲಜನಕ ಖಾಲಿಯಾಗುತ್ತಿರುವ ಆತಂಕದ ನಡುವೆ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿತ್ತು. ಆದರೆ, ಕೊನೆಗೂ ಅವರ ಸುಳಿವು ಸಿಗಲೇ ಇಲ್ಲ. ಕೆನಾಡದ ನ್ಯೂಫೌಂಡ್​ಲ್ಯಾಂಡ್​ ಕರಾವಳಿ ಭಾಗದಿಂದ ಸುಮಾರು 400 ಮೈಲಿ ದೂರದಲ್ಲಿ ಟೈಟಾನಿಕ್ ಹಡಗಿನ ಅವಶೇಷಗಳು ಬಿದ್ದಿದ್ದು, ಅದರಲ್ಲಿದ್ದ ಐವರು ಮೃತಪಟ್ಟಿರುವುದು ಖಚಿತವಾಗಿದೆ.

ಜಲಾಂತರ್ಗಾಮಿ ಸ್ಪೋಟಕ್ಕೆ ಕಾರಣವೇನು?

ಟೈಟಾನ್​ ಹೆಸರಿನ ನೌಕೆಯು ನೀರಿನ ಸೆಳೆತಕ್ಕೆ ಸ್ಫೋಟಗೊಂಡು ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸಮುದ್ರದ ಆಳವಾಗಿ ಹೋದಂತೆ, ನೀರಿನ ಒತ್ತಡವು ಹೆಚ್ಚಾಗುತ್ತದೆ ಮತ್ತು ಕೆಳಕ್ಕೆ ತಳ್ಳುತ್ತದೆ. ಇದರಿಂದ ಜಲಾಂತರ್ಗಾಮಿ ನೌಕೆ ಸ್ಫೋಟಗೊಂಡಿದೆ ಎನ್ನಲಾಗುತ್ತಿದೆ. ಗುರುವಾರ ರಿಮೋಟ್​ ಕಂಟ್ರೋಲ್​ ವಾಹನದಲ್ಲಿ ನೀರಿನ ಅಡಿಯಲ್ಲಿ ಪತ್ತೆಯಾದ ಅವಶೇಷಗಳನ್ನು ಪರೀಕ್ಷಿಸಿದ ಬಳಿಕ ಯುಎಸ್​ ಕರಾವಳಿ ಪಡೆ ಈ ನಿರ್ಣಯಕ್ಕೆ ಬಂದಿದೆ. ಸಾಗರದ ಸುಮಾರು 1600 ಅಡಿ (488 ಮೀಟರ್​) ಆಳದಲ್ಲಿ ನಾಪತ್ತೆಯಾದ ಜಲಾಂತರ್ಗಾಮಿ ನೌಕೆಯ ಅವಶೇಷಗಳು ಪತ್ತೆಯಾಗಿವೆ.

ಅವಶೇಷ ಪತ್ತೆಗೂ ಮುನ್ನ ಕೇಳಿಸಿದ್ದ ಸದ್ದು ಯಾವುದು?

ಜಲಾಂತರ್ಗಾಮಿ ಅವಶೇಷ ಪತ್ತೆ ಮಾಡುವುದಕ್ಕೂ ಮುನ್ನ ಯುಎಸ್​ ಕರಾವಳಿ ಪಡೆ ಸಾಗರದ ಆಳದಲ್ಲಿ ಬಡಿಯುವ ಶಬ್ಧವನ್ನು ಗುರುತಿಸಿತ್ತು. ನೀರಿನ ಒಳಗಿನ ಶಬ್ಧವನ್ನು ಗುರುತಿಸುವ ಸೋನಾರ್​ ಅನ್ನು ರಕ್ಷಣಾ ಪಡೆಗಳು ಬಳಸಿದ್ದು, ನೌಕೆ ನಾಪತ್ತೆಯಾದ ಸ್ಥಳದಲ್ಲಿ ಪ್ರತಿ 30 ನಿಮಿಷಗಳಿಗೊಮ್ಮೆ ಬಡಿಯುವ ಶಬ್ದ ಕೇಳಿಬರುತ್ತಿದೆ ಎಂದು ತಿಳಿಸಿದ್ದವು. ಇದರಿಂದ ಐವರು ಇನ್ನು ಜೀವಂತವಾಗಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ, ಮತ್ತಷ್ಟು ಶೋಧ ಕಾರ್ಯ ನಡೆಸಿದಾಗ ಅಲ್ಲಿ ಕೇಳಿಬರುತ್ತಿದ್ದ ಶಬ್ದಕ್ಕೂ ನೌಕೆಗೂ ಸಂಬಂಧವಿಲ್ಲ ಎಂಬುದು ನಂತರದಲ್ಲಿ ಗೊತ್ತಾಗಿದೆ.

ನೌಕೆಯಲ್ಲಿದ್ದ ಐವರು ಯಾರು?

ಇನ್ನು ನಾಪತ್ತೆಯಾದ ಜಲಾಂತರ್ಗಾಮಿ​ ನೌಕೆಯಲ್ಲಿ ಯುನೈಟೆಡ್​ ಕಿಂಗ್​​ಡಮ್​ನ ಆಕ್ಷನ್ ಗ್ರೂಪ್ ಹೂಡಿಕೆ ಸಂಸ್ಥೆಯ ಸಂಸ್ಥಾಪಕ ಮತ್ತು ಸಾಹಸಪ್ರಿಯ ಹಮೀಶ್​ ಹರ್ಡಿಂಗ್​ (58), ಫ್ರೆಂಚ್ ಕಡಲ ತಜ್ಞ ಪೌಲ್​ ಹೆನ್ರಿ ನರ್ಜೋಲೆಟ್ (77), ವಾಷಿಂಗ್ಟನ್ ಮೂಲದ ಓಷನ್‌ಗೇಟ್ ಕಂಪನಿ ಎವೆರೆಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟಾಕ್ಟನ್ ರಶ್ (61), ಪಾಕಿಸ್ತಾನದ ಖ್ಯಾತ ಉದ್ಯಮಿ ಶಹಜಾದ ದಾವೂದ್​ (48) ಮತ್ತು ಆತನ ಪುತ್ರ ಸುಲೇಮಾನ್​ ದಾವೂದ್​ (19) ಇದ್ದರು.

ನಾಪತ್ತೆಯಾಗಿದ್ದ ಟೈಟಾನ್​ ಜಲಾಂತರ್ಗಾಮಿ ನೌಕೆಯನ್ನು ಕಾರ್ಬನ್​ ಫೈಬರ್​ ಮತ್ತು ಟೈಟಾನಿಯಂನಿಂದ ವಿನ್ಯಾಸ ಮಾಡಲಾಗಿತ್ತು. ಓರ್ವ ಪೈಲಟ್​ ಮತ್ತು ನಾಲ್ವರು ಸಿಬ್ಬಂದಿಯನ್ನು ಗರಿಷ್ಠ 4000 ಮೀಟರ್ ಆಳ (13,120 ಅಡಿ)ದವರೆಗೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿತ್ತು.

ಓಷನ್​ಗೇಟ್​ ವೆಬ್‌ಸೈಟ್‌ ಪ್ರಕಾರ, ನೌಕೆಯಲ್ಲಿದ್ದ ಆನ್‌ಬೋರ್ಡ್ ಸಿಸ್ಟಮ್, ಸಿಬ್ಬಂದಿಯ ಆರೋಗ್ಯವನ್ನು ಪತ್ತೆಹಚ್ಚಲು ಮತ್ತು ಪೈಲಟ್‌ಗೆ ಅವರೋಹಣವನ್ನು ಗುರುತಿಸಿ, ಸುರಕ್ಷಿತವಾಗಿ ಮೇಲ್ಮೈಗೆ ಮರಳಲು ಸಾಕಷ್ಟು ಸಮಯದ ಮುಂಚೆಯೇ ಆರಂಭಿಕ ಎಚ್ಚರಿಕೆಯನ್ನು ಪತ್ತೆಹಚ್ಚುವ ವ್ಯವಸ್ಥೆಯೂ ಇತ್ತು ಎಂದು ತಿಳಿಸಿದೆ.

suddiyaana