ಟನ್ ಗಟ್ಟಲೆ ಚಿನ್ನ, 960 ಸ್ವತ್ತು.. ₹85,705 ಕೋಟಿ ಆಸ್ತಿ ಮೌಲ್ಯ – ವಿಶ್ವಕ್ಕೇ ಕುಬೇರ ತಿರುಪತಿ ತಿಮ್ಮಪ್ಪ

ಟನ್ ಗಟ್ಟಲೆ ಚಿನ್ನ, 960 ಸ್ವತ್ತು.. ₹85,705 ಕೋಟಿ ಆಸ್ತಿ ಮೌಲ್ಯ – ವಿಶ್ವಕ್ಕೇ ಕುಬೇರ ತಿರುಪತಿ ತಿಮ್ಮಪ್ಪ

ಕೋಟಿಗಟ್ಟಲೆ ಹಣ. ಲೆಕ್ಕಕ್ಕೆ ಸಿಗದಷ್ಟು ಚಿನ್ನಾಭರಣ. ದೇಶದ ಹತ್ತಾರು ಕಡೆ ಕೋಟಿ ಕೋಟಿ ಮೌಲ್ಯದ ಆಸ್ತಿ. ವಿಶ್ವದ ಅತಿ ಸಿರಿವಂತ ಹಿಂದೂ ದೇವಾಲಯ ಎಂಬ ಹೆಗ್ಗಳಿಕೆ ಪಡೆದಿರುವ ತಿರುಪತಿ ತಿಮ್ಮಪ್ಪನ ಖಜಾನೆ ನಿಜಕ್ಕೂ ಅಚ್ಚರಿ ಮೂಡಿಸುತ್ತೆ. ದೇಶಾದ್ಯಂತ ಹೊಂದಿರುವ 960 ಸ್ವತ್ತುಗಳ ಮೌಲ್ಯ 85,705 ಕೋಟಿ ರೂ. ಆಗಿದೆ. ಈ ಸ್ವತ್ತುಗಳ ಇಂದಿನ ಮಾರುಕಟ್ಟೆ ಮೌಲ್ಯವು ಒಂದೂವರೆ ಪಟ್ಟು ಹೆಚ್ಚಿದ್ದು, ಸುಮಾರು 2 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇಷ್ಟೊಂದು ಸಂಪತ್ತು ಹೊಂದಿದ ದೇಗುಲ ಜಗತ್ತಿನಲ್ಲೇ ಬೇರೆಲ್ಲೂ ಇಲ್ಲ.

ಇದನ್ನೂ ಓದಿ : ಪೌರ ಕಾರ್ಮಿಕ ಮಹಿಳೆಯರಿಗೆ ಒಲಿದ ಅದೃಷ್ಟ ಲಕ್ಷ್ಮೀ – ಲಾಟರಿಯಲ್ಲಿ 10 ಕೋಟಿ ಗೆದ್ದರು

ದೇಶಾದ್ಯಂತ ಭಕ್ತರನ್ನ ಹೊಂದಿರುವ ತಿರುಪತಿ ತಿಮ್ಮಪ್ಪನ  ಆಲಯಕ್ಕೆ ನಿತ್ಯ ಸಾವಿರಾರು ಜನ ಬರುತ್ತಾರೆ. ಕೆಲವೊಮ್ಮೆ ಜನದಟ್ಟಣೆ ಜಾಸ್ತಿ ಇದ್ದಾಗ ಎರಡು, ಮೂರು ದಿನ ಕ್ಯೂನಲ್ಲೇ ನಿಂತು ದೇವರ ದರ್ಶನ ಪಡೆದು ಬರುತ್ತಾರೆ. ಹೀಗೆ ಬರುವ ಭಕ್ತರು ಕಾಣಿಕೆ ರೂಪದಲ್ಲಿ ಹಣ, ಚಿನ್ನ, ಬೆಳ್ಳಿಯನ್ನು ನೀಡುತ್ತಾರೆ. ವಾರ್ಷಿಕವಾಗಿ 1,500ಕೋಟಿಗೂ ಅಧಿಕ ಹಣ ಹುಂಡಿ ಎಣಿಕೆಯಲ್ಲೇ ಸಿಗುತ್ತಿದೆ. ಹಾಗಾಗಿ ತಿಮ್ಮಪ್ಪನ ಆದಾಯದ ಬಗ್ಗೆ ಸಾಮಾನ್ಯವಾಗಿಯೇ ಕುತೂಹಲ ಮೂಡುತ್ತದೆ. ದೇಶದಲ್ಲೇ ಅಪಾರ ಭಕ್ತಗಣವನ್ನು ಹೊಂದಿರುವ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯ ಪ್ರತಿ ದಿನ ಕೋಟ್ಯಾಂತರ ರೂಪಾಯಿ ಆದಾಯಗಳಿಸುತ್ತಿದೆ. ಲಕ್ಷಾಂತರ ಮಂದಿ ಭಕ್ತಿ ದೇಶ ವಿದೇಶಗಳಿಂದ ಇಲ್ಲಿಗೆ ಭೇಟಿ ನೀಡಿ ದರ್ಶನ ಪಡೆಯುತ್ತಾರೆ. ಇದೀಗ ಸ್ವತಃ ಟಿಟಿಡಿ ಇಒ ಧರ್ಮಾರೆಡ್ಡಿಯವರೇ ತಿಮ್ಮಪ್ಪನ ಖಜಾನೆ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ.

ವಾರಣಾಸಿಯಲ್ಲಿ ನಡೆದ ಅಂತಾರಾಷ್ಟ್ರೀಯ ದೇಗುಲ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಧರ್ಮಾರೆಡ್ಡಿ, ತಿರುಮಲದ ಬಗ್ಗೆ ಹಲವು ಕೂತೂಹಲಕಾರಿ ಮಾಹಿತಿ ಹಂಚಿಕೊಂಡಿದ್ದಾರೆ. ಪವರ್​ ಪಾಯಿಂಟ್ ಪ್ರಸೆಂಟೇಷನ್ ಮೂಲಕ ತಿಮ್ಮಪ್ಪನ ಬಳಿ ಇರುವ ಚಿನ್ನ, ಹಣ, ಪ್ರಸಾದ ವಿತರಣೆಗೆ ಬಳಸುವ ವಸ್ತುಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಟಿಟಿಡಿಯಲ್ಲಿ 24,500 ನೌಕರರಿದ್ದು, 800 ಸಿಬ್ಬಂದಿ ದೇವಸ್ಥಾನದಲ್ಲಿ ಭಕ್ತರಿಗೆ ಸೇವೆ ಸಲ್ಲಿಸಲು ಪ್ರತಿದಿನ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು. ಶ್ರೀವಾರಿ ದೇವಸ್ಥಾನದಲ್ಲಿ ಪ್ರಸಾದ ತಯಾರಿಸಲು ವಾರ್ಷಿಕ 500 ಟನ್ ತುಪ್ಪವನ್ನು ಬಳಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಅಲ್ಲದೆ, ಟಿಟಿಡಿ ವ್ಯಾಪ್ತಿಯಲ್ಲಿ 600 ಎಕರೆ ಅರಣ್ಯ ಪ್ರದೇಶವಿದೆ. ತಿಮ್ಮಪ್ಪನ ಹೆಸರಿನಲ್ಲಿ ಬ್ಯಾಂಕ್ ನಲ್ಲಿ 17 ಸಾವಿರ ಕೋಟಿ ನಗದು, 11 ಟನ್ ಚಿನ್ನ ಕೂಡ ಜಮೆಯಾಗಿದೆ ಎಂದು ವಿವರಿಸಿದ್ದಾರೆ. ಅಂತಾರಾಷ್ಟ್ರೀಯ ಟೆಂಪಲ್ ಕಾನ್ಫರೆನ್ಸ್ ಪ್ರದರ್ಶನದಲ್ಲಿ 30 ದೇಶಗಳಿಂದ 1600 ಪ್ರತಿನಿಧಿಗಳು ಭಾಗವಹಿಸಿದ್ದರು. ಜೂನ್​ ತಿಂಗಳು 23 ಲಕ್ಷ ಮಂದಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ ಎಂದು ತಿರುಮಲ ತಿರುಪತಿ ದೇವಸ್ಥಾನಂ ಪ್ರಕಟಿಸಿದೆ. ಜೂನ್‌ನಲ್ಲಿ ಸ್ವಾಮಿ ಹುಂಡಿಯ ಆದಾಯ 116.14 ಕೋಟಿ ಎಂದು ಹೇಳಿದೆ. ಕಳೆದ ತಿಂಗಳು 1.06 ಕೋಟಿ ಲಡ್ಡೂ ಮಾರಾಟವಾಗಿದೆ. 10 ಲಕ್ಷಕ್ಕೂ ಹೆಚ್ಚು ಭಕ್ತರು ಮುಡಿ ಅರ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟಿಟಿಡಿ ವ್ಯಾಪ್ತಿಯಲ್ಲಿ 71 ದೇವಸ್ಥಾನಗಳು, 11 ಟ್ರಸ್ಟ್‌ಗಳು, 14 ಆಸ್ಪತ್ರೆಗಳು, 35 ಶಿಕ್ಷಣ ಸಂಸ್ಥೆಗಳು, 9 ವೇದ ಶಾಲೆಗಳು, ನಾಲ್ಕು ಗೋಶಾಲೆಗಳು, 300 ಮದುವೆ ಮಂದಿರಗಳು, 10 ದತ್ತಿ ಸಂಸ್ಥೆಗಳು, ನಾಲ್ಕು ಭಾಷೆಗಳಲ್ಲಿ ಶ್ರೀ ವೆಂಕಟೇಶ್ವರ ಭಕ್ತಿ ವಾಹಿನಿ, ಅನಾಥ ಮಕ್ಕಳಿಗಾಗಿ ಬಾಲಮಂದಿರ ಮತ್ತು ಟಿಟಿಡಿ ಅಡಿಯಲ್ಲಿ ಎರಡು ವಸ್ತುಸಂಗ್ರಹಾಲಯಗಳಿವೆ.

suddiyaana