ಕಾಲ್ತುಳಿತಕ್ಕೂ ಮೊದಲು ಆಗಿದ್ದೇನು? – TTD ಮೈಮರೆತಿದ್ದು ಎಲ್ಲಿ?
ತಿಮ್ಮಪ್ಪನಿಗೆ ಅಪಚಾರ ಎಸಗಿದ್ದು ಯಾರು?
ತಿರುಪತಿ ತಿಮ್ಮಪ್ಪ.. ಹಿಂದೂ ಧರ್ಮದ ಪವಿತ್ರ ಕ್ಷೇತ್ರ.. ಈ ಕ್ಷೇತ್ರವನ್ನ ಭೂ ವೈಕುಂಠವೆಂದು ಕರೆಯುತ್ತಾರೆ.. ಆದ್ರೆ ಇಂತಹ ಪವಿತ್ರ ಕ್ಷೇತ್ರದಲ್ಲಿ ಅಪಚಾರ ನಡೆದು ಹೋಗಿದೆ. ಭಾರಿ ದುರಂತ ನಡೆದಿದೆ.. ಕಾಲ್ತುಳಿತದಲ್ಲಿ 6 ಜನ ಸಾವನ್ನಪ್ಪಿದ್ರೆ, 60ಕ್ಕೂ ಹೆಚ್ಚು ಜನ ಸಾವಿನ ಮನೆ ಸೇರಿದ್ದಾರೆ.
ಅಂದಹಾಗೇ ಜನವರಿ 10ರಿಂದ ಪ್ರಾರಂಭವಾಗುವ 10 ದಿನಗಳ ವೈಕುಂಠ ದ್ವಾರ ದರ್ಶನಕ್ಕಾಗಿ ದೇಶಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ತಿರುಪತಿಗೆ ಆಗಮಿಸಿದ್ದರು. ಆದರೆ ವೈಕುಂಠ ದ್ವಾರ ದರ್ಶನಕ್ಕೆ ಎಲ್ಲರಿಗೂ ಅವಕಾಶವಿಲ್ಲ. ಇದಕ್ಕಾಗಿ ಜನ ಟಿಕೆಟ್ ಪಡೆಯಬೇಕು. ಹೀಗಾಗಿ ವೈಕುಂಠ ಏಕಾದಶಿ ನಿಮಿತ್ತ ತಿರುಪತಿಯ 94 ಕೇಂದ್ರಗಳಲ್ಲಿ ಸರ್ವದರ್ಶನಂ ಟೋಕನ್ ನೀಡಲು ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದೆ. ಹಾಗೇ ಬುಧವಾರ ಟೋಕನ್ ವಿತರಣಾ ಕೌಂಟರ್‌ಗಳ ಮುಂದೆ ಸಾವಿರಾರು ಜನರು ನಿಂತಿದ್ದರು. ಗುರುವಾರ ಮುಂಜಾನೆ 5 ಗಂಟೆಗೆ ಟೋಕನ್ ವಿತರಣೆ ಟೈಂ ಪಿಕ್ಸ್ ಆಗಿತ್ತು. ಆದರೆ ಟೋಕನ್ ವಿತರಣಾ ಕೇಂದ್ರಗಳ ಮುಂದೆ ಬುಧವಾರ ಬೆಳಿಗ್ಗೆ 5 ಗಂಟೆಯಿಂದಲೇ ಜನರು ಕ್ಯೂನಲ್ಲಿ ನಿಂತಿದ್ದರು. ರಾಮನಾಯ್ಡು ಶಾಲೆಯ ಟೋಕನ್ ಕೇಂದ್ರದ ಬಳಿ ನಿಂತಿದ್ದ ಮಹಿಳೆಯೊಬ್ಬರು ಅಸ್ವತ್ಥರಾಗುತ್ತಾರೆ. ಆ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ಗೇಟ್ ತೆರೆಯಲಾಗುತ್ತೆ. ಈ ವಿಚಾರ ತಿಳಿಯದ ಭಕ್ತರು ಟಿಕೆಟ್ ವಿತರಣೆಗಾಗಿ ಗೇಟ್ ತೆರೆಯುತ್ತಿದ್ದಾರೆ ಎಂದು ಭಾವಿಸಿ ಒಮ್ಮೆಲೆ ಒಳಗೆ ನುಗ್ಗಿದರು. ಈ ವೇಳೆ 200ರಿಂದ 300 ಜನ ಏಕಾಏಕಿ ಗೇಟ್ ನೊಳಗೆ ನುಗ್ಗಿದಾಗ ಅಲ್ಲಿದ್ದ ಬೆರಳೆಣಿಕೆಯಷ್ಟು ಪೊಲೀಸರಿಗೂ ಅವರನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಇದು ಕಾಲ್ತುಳಿತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ
ಹಣ ಇದ್ದವರಿಗೆ ದರ್ಶನ, ಬಡವರಿಗೆ ನರಕ!!
ದೇಶದಲ್ಲಿ ಶ್ರೀಮಂತ ದೇವರು ಎನಿಸಿಕೊಂಡ ತಿರುಪತಿ ತಿಮ್ಮಪ್ಪನಿಗೆ ಅಸಂಖ್ಯಾತ ಭಕ್ತರ ಬಳಗವಿದೆ. ಬಡವ ಶ್ರೀಮಂತ ಎನ್ನದೇ ದೇಶ ವಿದೇಶಗಳಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತದೆ. ವಿಶೇಷವಾಗಿ ವೈಕುಂಠ ದ್ವಾರ ದರ್ಶನ ಪಡೆಯುವುದು ಎಂದರೆ ಪುಣ್ಯದ ಕೆಲಸ ಎನ್ನುವುದು ಲಕ್ಷಾಂತರ ಭಕ್ತರ ನಂಬಿಕೆ ಆಗಿದೆ. ಸುಮಾರು ಏಳು ಲಕ್ಷ ಭಕ್ತರಿಗೆ ವೈಕುಂಠ ದ್ವಾರ ದರ್ಶನದ ಟಿಕೆಟ್ ಸಿಗಬೇಕು. ಅದು ಹತ್ತು ದಿನದ ಅವಧಿಯಲ್ಲಿ ದರ್ಶನ ಪಡೆಯಲು ಟಿಕೆಟ್ ಸಿಕ್ಕರೆ ಅದು ಆ ಭಕ್ತನ ಫುಣ್ಯ ಎನ್ನಬಹುದು. ಈ ಟಿಕೆಟ್ ಪಡೆಯಲು ಒಂದು ಅಥವಾ ಎರಡು ದಿನಕ್ಕೂ ಮುಂಚಿತವಾಗಿ ತಿರುಪತಿಗೆ ಭಕ್ತರು ಆಗಮಿಸುತ್ತಾರೆ. ಇದಕ್ಕಾಗಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಕಾಯುತ್ತಾರೆ. ಕಾಸು ಇದ್ದವರಿಗೆ ಶ್ರೀಮಂತ ದೇವರ ದರ್ಶನ ಸುಲಭ. ತ್ವರಿತವಾದ ದರ್ಶನಕ್ಕಾಗಿ ಹಾಗೂ ಭಕ್ತರ ಬೇಡಿಕೆಯ ಅನುಗುಣವಾಗಿ ಟಿಟಿಡಿ ವಿಐಪಿ ದರ್ಶನದ ಟಿಕೆಟ್‌ಗಳನ್ನು ನೀಡುತ್ತದೆ. ಈ ಟಿಕೆಟ್‌ಗಳನ್ನು ಉಚಿತವಾಗಿ ನೀಡಲಾಗುವುದಿಲ್ಲ. ಬದಲಿಗೆ 10,000 ಅಥವಾ ಅದಕ್ಕಿಂತ ಹೆಚ್ಚಿನ ದೇಣಿಗೆ ಪಡೆಯುವ ಮೂಲಕ ವಿಐಪಿ ಬ್ರೇಕ್ ದರ್ಶನ ಟಿಕೆಟ್‌ಗಳನ್ನು ನೀಡಲಾಗುತ್ತದೆ. ಹೀಗೆ ಹಣವಿರುವ ಶ್ರೀಮಂತರು ದೇಣಿಗೆ ನೀಡಿ ಶಿಫಾರಸು ಪತ್ರಗಳನ್ನು ಪಡೆಯುತ್ತಾರೆ. ಅಲ್ಲದೆ ಹೆಚ್ಚುವರಿ ಹಣವನ್ನು ನೀಡಿದರೇ ಅಂದುಕೊಂಡ ದಿನವೇ ದರ್ಶನ ಪಡೆಯಬಹುದು. ಇದಕ್ಕಾಗಿ ಆನ್‌ಲೈನ್‌ನಲ್ಲೂ ಟಿಕೆಟ್ ನೊಂದಣಿ ಮಾಡಿಕೊಳ್ಳಬಹುದು. ಹಣವಿದ್ದವರು ಮನೆಯಲ್ಲಿ ಕುಳಿತು ದೇವರ ದರ್ಶನಕ್ಕೆ ಆರಾಮದಾಯಕವಾಗಿ ಟಿಕೆಟ್ ಪಡೆಯುತ್ತಾರೆ. ಆದರೆ ಬಡವರು ಮಾತ್ರ ಗಂಟೆಗಟ್ಟಲೆ ಸರಿತಿ ಸಾಲಿನಲ್ಲಿ ನಿಂತರೂ ಕೂಡ ಅವರಿಗೆ ಟಿಕೆಟ್ ಸಿಗುವುದು ಕಷ್ಟವಿದೆ. ಎಷ್ಟೋ ಜನ ಟಿಕೆಟ್ ಸಿಗದೆ ನಿರಾಸೆರಾಗಿರುವುದು ಇದೆ. ಆದರೆ ಗಂಟೆಗಟ್ಟಲೆ ಕಾದರೂ ದರ್ಶನ ಪಡೆಯದೆ ವಾಪಸ್ಸ ಹೋಗಲು ಮನಸ್ಸು ಮಾಡದ ಸಾಮಾನ್ಯ ಭಕ್ತರು ಶತಾಯಗತಾಯ ದರ್ಶನ ಟಿಕೆಟ್ ಪಡೆಯಲು ಮುಂದಾಗಿ ಕಾಲ್ತುಳಿತಕ್ಕೆ ಒಳಗಾಗಿ ಪ್ರಾಣ ಕಳೆದುಕೊಳ್ಳುತ್ತಾರೆ. ವಿಐಪಿ ಟಿಕೆಟ್ ಪಡೆದವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಇತ್ತ ಸಾಮಾನ್ಯ ಭಕ್ತರಿಗೆ ಟಿಕೆಟ್ ಕೈತಪ್ಪುತ್ತದೆ. ಇದರಿಂದ ಭಕ್ತರಿಗೆ ಮೋಸ ಆಗುತ್ತಿದೆ. ದುಡ್ಡಿನ ಆಸೆಗೆ ದೇವಸ್ಥಾನಗಳಲ್ಲಿ ನಡೆಯುತ್ತಿರುವ ಈ ರೀತಿಯ ತಾರತಮ್ಯ ನಿಲ್ಲಬೇಕು. ಎಲ್ಲರಿಗೂ ಒಂದೇ ರೀತಿಯಾಗಿ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು
ತಿಮ್ಮಪ್ಪನ ಸನ್ನಿಧಿಯಲ್ಲಿ ಅಪಚಾರ ಮಾಡಿದ್ದು ಯಾರು?
ಅದ್ರಲ್ಲೂ ಇದು ಹೊಸ ವರ್ಷದ ಮೊದಲ ತಿಂಗಳು.. ವರ್ಷವೆಲ್ಲಾ ಚೆನ್ನಾಗಿ ಇರಲಿ ಅಂತ ಕೇಳಿಕೊಳ್ಳೋಕೆ ತಿಮ್ಮಪ್ಪನ ಹತ್ರ ಹೋಗ್ತಾರೆ.. ಹೀಗಾಗಿ ಈ ಟೈಂನಲ್ಲಿ ಜನ ಜಾಸ್ತಿ ಇರ್ತಾರೆ. ಹಾಗೇ ವೈಕುಂಠ ದ್ವಾರ ದರ್ಶನ ಇರೋದ್ರಿಂದ ಭಕ್ತರ ಸಂಖ್ಯೆ ಹೆಚ್ಚಿರುತ್ತೆ. ಇದೆಲ್ಲಾ ಗೊತ್ತಿದ್ದು, ಟಿಟಿಡಿ ಆಡಳಿತ ಮಂಡಳಿ ನಿರ್ಲಕ್ಷ್ಯ ಮಾಡ್ತಾ ಅನ್ನೋ ಪ್ರಶ್ನೆ ಎದ್ದಿದೆ. ಈ ಹಿಂದೆ ನಾವೆಲ್ಲಾ ಟಿಡಿಡಿಯಲ್ಲಿ ಸರಿ ಮಾಡಿದ್ದೇವೆ.. ಎಷ್ಟೇ ಜನ ಭಕ್ತರು ಬಂದ್ರೂ ಎಲ್ಲಾ ಸರಿ ಮಾಡ್ತೀವಿ ಅಂತ ಹೇಳಿದ್ರು. ಆದ್ರೆ ಯಾವುದೂ ಸರಿ ಮಾಡಿಲ್ಲ ಅನ್ನೋಕೆ ಈಗ ನಡೆದಿರೋ ಘಟನೆಗಳೇ ಪ್ರತ್ಯಕ್ಷ ಸಾಕ್ಷಿ . ಪ್ರತಿ ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರವನ್ನು ಆಂಧ್ರಪ್ರದೇಶ ಸರ್ಕಾರ ಘೋಷಣೆ ಮಾಡಿದೆ. ಸರ್ಕಾರದ ಪರಿಹಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಭಕ್ತರು ಒಂದು ಕೋಟಿ ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ. .