ತಿರುಮಲ ಬೆಟ್ಟದಲ್ಲಿ ಕಾಡು ಪ್ರಾಣಿಗಳ ಹಾವಳಿ – ಇನ್ನುಮುಂದೆ ಮಕ್ಕಳನ್ನು ಕರೆದುಕೊಂಡು ಹೋಗುವವರಿಗೆ ಹೊಸ ರೂಲ್ಸ್!

ತಿರುಮಲ ಬೆಟ್ಟದಲ್ಲಿ ಕಾಡು ಪ್ರಾಣಿಗಳ ಹಾವಳಿ – ಇನ್ನುಮುಂದೆ ಮಕ್ಕಳನ್ನು ಕರೆದುಕೊಂಡು ಹೋಗುವವರಿಗೆ ಹೊಸ ರೂಲ್ಸ್!

ತಿರುಪತಿ: ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಟಿಟಿಡಿ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ದೇವಸ್ಥಾನಕ್ಕೆ ಕಾಲ್ನಡಿಗೆ ಮೂಲಕ ಹೋಗುವವರಿಗೆ ಹೊಸ ನಿಯಮವೊಂದನ್ನು ತಂದಿದೆ. ಅಷ್ಟೇ ಅಲ್ಲದೇ ಮಕ್ಕಳೊಂದಿಗೆ ಅಲಿಪಿರಿ, ತಿರುಮಲ ಮಾರ್ಗವಾಗಿ ಬೆಟ್ಟ ಹತ್ತುವ ಭಕ್ತರಿಗೆ ಸಮಯ ಬದಲಾವಣೆ ಮಾಡಲಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ತಿರುಮಲದಲ್ಲಿ 6 ವರ್ಷದ ಪುಟ್ಟ ಬಾಲಕಿ ಚಿರತೆ ದಾಳಿಗೆ ಬಲಿಯಾತ್ತು. ಈ ಬೆನ್ನಲ್ಲೇ ಟಿಟಿಡಿ ಎಚ್ಚೆತ್ತುಕೊಂಡಿದೆ.  ಕಾಲ್ನಡಿಗೆ ಮೂಲಕ ಬೆಟ್ಟ ಹತ್ತುವವರಿಗೆ ಹೊಸ ನಿಯಮ ತಂದಿದೆ. ತಿರುಮಲ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತುವ ಪ್ರತಿಯೊಬ್ಬ ಯಾತ್ರಾರ್ಥಿಗಳಿಗೆ ರಕ್ಷಣೆಗಾಗಿ ಸಿಬ್ಬಂದಿಯನ್ನು ಒದಗಿಸಲು ಮುಂದಾಗಿದೆ. ಅಷ್ಟೇ ಅಲ್ಲದೇ ಅಲಿಪಿರಿ ಮತ್ತು ಶ್ರೀವಾರಿ ಮೆಟ್ಟು ಪಾದಚಾರಿ ಮಾರ್ಗದಲ್ಲಿ ಬೆಳಗ್ಗೆ 5 ರಿಂದ ಮಧ್ಯಾಹ್ನ 2ರವರೆಗೆ ಮಾತ್ರ 15ವರ್ಷದ ಮಕ್ಕಳ ಜೊತೆ ಪೋಷಕರು ಬೆಟ್ಟ ಹತ್ತಲು ಅವಕಾಶ ನೀಡಲಾಗಿದೆ. ಹಿರಿಯರು ರಾತ್ರಿ 10 ಗಂಟೆಯವರೆಗೆ ಹೋಗಬಹುದು. ಘಾಟ್ ರಸ್ತೆಯಲ್ಲಿ ಸಂಜೆ 6 ಗಂಟೆಯವರೆಗೆ ಮಾತ್ರ ದ್ವಿಚಕ್ರ ವಾಹನಗಳಿಗೆ ಅನುಮತಿ ನೀಡಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ: ಕೇದಾರನಾಥದಲ್ಲಿ ಗುಡ್ಡಗಳು ಛಿದ್ರ.. ಬೃಹತ್ ಬಂಡೆಗಳು ಕುಸಿತ – ಶಿವನ ದರ್ಶನಕ್ಕೆ ತೆರಳಿದ್ದ 40 ಕನ್ನಡಿಗರಿಗೆ ಸಂಕಷ್ಟ

ಅಲಿಪಿರಿ ಮಾರ್ಗಮಧ್ಯೆ ಏಳನೇ ಮೈಲಿ ಬಳಿ ಮಕ್ಕಳಿಗೆ ಟ್ಯಾಗ್ ಹಾಕಲಾಗುತ್ತದೆ. ಅದರಲ್ಲಿ ಮಕ್ಕಳ ಹೆಸರು, ಪೋಷಕರ ವಿವರ, ಫೋನ್ ನಂಬರ್, ಪೊಲೀಸ್ ಟೋಲ್ ಫ್ರೀ ನಂಬರ್ ಇರಲಿದೆ. ಅಷೇ ಅಲ್ಲದೇ ಯಾತ್ರಾರ್ಥಿಗಳನ್ನು ಗುಂಪುಗಳಲ್ಲಿ ಕಳುಹಿಸಲು ನಿರ್ಧರಿಸಲಾಗಿದೆ.

ನರಭಕ್ಷಕ ಚಿರತೆಯನ್ನು ಅರಣ್ಯ ಸಿಬ್ಬಂದಿ ಸೆರೆ ಹಿಡಿದಿದ್ದರೂ ತಿರುಮಲದಲ್ಲಿ ಇನ್ನೂ ಐದು ಚಿರತೆಗಳು ಇವೆ ಎನ್ನಲಾಗಿದೆ. ಈ ಆತಂಕದ ಮಧ್ಯೆ 2000 ಮೆಟ್ಟಿಲ ಬಳಿ ಕರಡಿ ಕೂಡ ಕಾಣಿಸಿಕೊಂಡಿದೆ. ಹೀಗಾಗಿ ತಿರುಪತಿ ಮತ್ತು ತಿರುಮಲ ನಡುವೆ 500 ಕ್ಯಾಮೆರಾ ಸ್ಥಾಪಿಸಲಾಗುವುದು ಮತ್ತು ಅಗತ್ಯವಿದ್ದರೆ ಡ್ರೋನ್ ಕ್ಯಾಮೆರಾಗಳನ್ನು ಸಹ ಬಳಸಲಾಗುವುದು ಎಂದು ಟಿಟಿಡಿ ಮಾಹಿತಿ ನೀಡಿದೆ.

suddiyaana