ಜಮ್ಮುವಿನ ಬಾಲಾಜಿ ದೇವಸ್ಥಾನ ಉದ್ಘಾಟನೆಗೆ ದಿನಾಂಕ ನಿಗದಿ – ಬಾಲಾಜಿ ದರ್ಶನಕ್ಕೆ ಯಾವಾಗಿಂದ ಅವಕಾಶ?

ಜಮ್ಮುವಿನ ಬಾಲಾಜಿ ದೇವಸ್ಥಾನ ಉದ್ಘಾಟನೆಗೆ ದಿನಾಂಕ ನಿಗದಿ – ಬಾಲಾಜಿ ದರ್ಶನಕ್ಕೆ ಯಾವಾಗಿಂದ ಅವಕಾಶ?

ತಿರುಮಲ ತಿರುಪತಿ ದೇವಸ್ಥಾನಗಳ ಟಸ್ಟ್‌ ವತಿಯಿಂದ ತಿರುಮಲದ ಮಾದರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಬಾಲಾಜಿ ದೇವಸ್ಥಾನದ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ. ಇದೀಗ ದೇವಸ್ಥಾನ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದೆ.

ಜಮ್ಮುವಿನ ಮಜೀನ್‌ ಪ್ರದೇಶದ ಶಿವಾಲಿಕ್‌ ಅರಣ್ಯದಲ್ಲಿ ನಿರ್ಮಾಣಗೊಳ್ಳುತ್ತಿರುವ ದೇವಾಲಯದ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದೆ. ಇದೀಗ ಈ ದೇವಾಲಯ ಜೂನ್‌ 8 ರಂದು ಉದ್ಘಾಟನೆಯಾಗಲಿದ್ದು, ಭಕ್ತರ ಪ್ರವೇಶಕ್ಕೆ ಮುಕ್ತವಾಗಲಿದೆ ಎಂದು ಟಿಟಿಡಿ ಹೇಳಿದೆ.

ಇದನ್ನೂ ಓದಿ: ತಿರುಪತಿಯಲ್ಲಿ ಭಕ್ತ ಸಾಗರ – 30 ಗಂಟೆ ಕಳೆದರೂ ಸಿಗದ ತಿಮ್ಮಪ್ಪನ ದರ್ಶನ!

ಸುಮಾರು 62 ಎಕರೆ ಪ್ರದೇಶದಲ್ಲಿ ಅಂದಾಜು 30 ಕೋಟಿ ರೂ. ವೆಚ್ಚದಲ್ಲಿ ತಿರುಪತಿ ಬಾಲಾಜಿ ದೇಗುಲ ನಿರ್ಮಿಸಲಾಗಿದೆ. ಇದು ಜಮ್ಮುವಿನಲ್ಲೇ ಅತ್ಯಂತ ದೊಡ್ಡ ದೇಗುಲವಾಗಲಿದೆ. ಅಲ್ಲದೇ ಈ ದೇವಾಲಯ ಜಮ್ಮು ಮತ್ತು ಕಾಶ್ಮೀರದಲ್ಲಿ ಧಾರ್ಮಿಕ ಮತ್ತು ತೀರ್ಥಯಾತ್ರೆ ಪ್ರವಾಸೋದ್ಯಮಕ್ಕೆ ಇಂಬು ನೀಡಲಿದೆ.

ʼದೇಗುಲ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಜೂ.3ರಿಂದ ಧಾರ್ಮಿಕ ಕಾರ್ಯಗಳು ಆರಂಭವಾಗಲಿದೆ. ಜೂ.8ರಿಂದ ದೇಗುಲ ಪ್ರವೇಶಕ್ಕೆ ಮುಕ್ತವಾಗಲಿದೆ. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಸಂಪೂರ್ಣ ಉಚಿತವಾಗಿರಲಿದೆ. ತಿರುಮಲದಲ್ಲಿ ಹೇಗೆ ಧಾರ್ಮಿಕ ವ್ಯವಸ್ಥೆ ಜಾರಿಯಲ್ಲಿದೆಯೋ ಅದೇ ರೀತಿ ಇಲ್ಲೂ ಧಾರ್ಮಿಕ ಕ್ರಿಯೆಗಳನ್ನು ನಡೆಸಲಾಗುತ್ತದೆ’ ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಟಾ ರೆಡ್ಡಿ ತಿಳಿಸಿದ್ದಾರೆ.

ʼಈ ದೇಗುಲವನ್ನು ಜಮ್ಮು ಮತ್ತು ಕಾತ್ರಾ ನಡುವಿನ ಪವಿತ್ರ ಸ್ಥಳದಲ್ಲಿ ನಿರ್ಮಿಸಲಾಗಿದೆ. ಮಾತಾ ವೈಷ್ಣೋದೇವಿ ದೇಗುಲದ ಬಳಿ ಇದು ನಿರ್ಮಾಣಗೊಂಡಿದೆ. 2021ರಲ್ಲಿ ಈ ದೇಗುಲ ನಿರ್ಮಾಣ ಕಾರ್ಯ ಆರಂಭಿಸಲಾಯಿತು. ತಿರುಪತಿಗೆ ಹೋಗಲು ಸಾಧ್ಯವಾಗದವರೂ ಇಲ್ಲಿ ಬಾಲಾಜಿ ದರ್ಶನವನ್ನು ಪಡೆಯಬಹುದು’ ಎಂದು ಹೇಳಿದ್ದಾರೆ.

ಈಗಾಗಲೇ ಟಿಟಿಡಿ ವತಿಯಿಂದ ಹೈದರಾಬಾದ್‌, ಚೆನ್ನೈ, ಕನ್ಯಾಕುಮಾರಿ, ದೆಹಲಿ ಮತ್ತು ಭುವನೇಶ್ವರದಲ್ಲಿ ತಿರುಪತಿ ಬಾಲಾಜಿ ದೇಗುಲಗಳನ್ನು ನಿರ್ಮಿಸಲಾಗಿದೆ. ಟಿಟಿಡಿಯಿಂದ ನಿರ್ಮಿಸಲಾದ ಆರನೇ ದೇಗುಲ ಇದಾಗಿದೆ.

suddiyaana