ತಿಮ್ಮಪ್ಪನ ಭಕ್ತರೇ ದಯವಿಟ್ಟು ಗಮನಿಸಿ – ತಿರುಪತಿ ಬೆಟ್ಟದಲ್ಲಿ ಹಾರ್ನ್ ಮಾಡಿದ್ರೆ ಬೀಳುತ್ತೆ ದಂಡ

ತಿರುಮಲಕ್ಕೆ ಹೋಗುವ ಶ್ರೀವಾರಿ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿಯು ಪ್ರಮುಖ ಸೂಚನೆಯೊಂದನ್ನು ನೀಡಿದೆ. ನೀವು ನಿಮ್ಮ ಸ್ವಂತ ವಾಹನಗಳಲ್ಲಿ ಏಳುಬೆಟ್ಟಗಳ ಒಡೆಯನ ದರ್ಶನಕ್ಕೆ ಹೋಗುತ್ತಿದ್ದರೆ, ಈ ಹೊಸ ನಿಯಮವನ್ನು ಕಡ್ಡಾಯವಾಗಿ ತಿಳಿದುಕೊಳ್ಳಲೇಬೇಕು. ತಿರುಮಲ ಬೆಟ್ಟದ ಮೇಲಿನ ಆಧ್ಯಾತ್ಮಿಕ ವಾತಾವರಣವನ್ನು ಕಾಪಾಡಲು ಮತ್ತು ಶಬ್ದ ಮಾಲಿನ್ಯವನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಟಿಟಿಡಿ ಇನ್ಮುಂದೆ ಹಾರ್ನ್ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
ತಿರುಮಲ ಬೆಟ್ಟದಲ್ಲಿ ಕೇವಲ ಗೋವಿಂದ ನಾಮಸ್ಮರಣೆ ಮಾತ್ರ ಕೇಳಿಬರಬೇಕು ಎಂಬ ಉದ್ದೇಶದಿಂದ ಟಿಟಿಡಿ ‘ಸೈಲೆಂಟ್ ತಿರುಮಲ ಇನಿಶಿಯೇಟಿವ್’ ಹೆಸರಿನಲ್ಲಿ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ನಿಯಮದ ಪ್ರಕಾರ, ತಿರುಮಲ ಘಾಟ್ ರಸ್ತೆ ಮತ್ತು ಬೆಟ್ಟದ ಮೇಲಿನ ರಸ್ತೆಗಳಲ್ಲಿ ವಾಹನ ಚಾಲಕರು ಯಾವುದೇ ಕಾರಣಕ್ಕೂ ಹಾರ್ನ್ ಮಾಡುವಂತಿಲ್ಲ. ಭಕ್ತರಿಗೆ ಈ ಬಗ್ಗೆ ಜಾಗೃತಿ ಮೂಡಿಸಲು ತಿರುಮಲಕ್ಕೆ ಹೋಗುವ ಮುಖ್ಯ ರಸ್ತೆಗಳ ಉದ್ದಕ್ಕೂ ಮತ್ತು ಬೆಟ್ಟದ ಮೇಲೆ ಆಕರ್ಷಕ ಮಾಹಿತಿ ಬೋರ್ಡ್‌ಗಳನ್ನು ಅಳವಡಿಸಲಾಗಿದೆ.
ಇದನ್ನೂ ಓದಿ: ರೋಚಕ ಘಟ್ಟ ತಲುಪಿದ ಫಿಫಾ ವಿಶ್ವಕಪ್ – ಬೆಲ್ವಿಯಂ ಮತ್ತು ಅಮೆರಿಕ ಕ್ವಾರ್ಟರ್ ಫೈನಲ್‌ಗೆ ಎಂಟ್ರಿ
ಟಿಟಿಡಿ ಜಾರಿಗೆ ತಂದಿರುವ ಈ ಹೊಸ ನಿಯಮವು ಕೇವಲ ಸಾಮಾನ್ಯ ಭಕ್ತರ ವಾಹನಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ. ಸೈರನ್‌ಗಳನ್ನು ಬಳಸುವ ವಿಐಪಿ ವಾಹನಗಳು ಕೇವಲ ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಹಾರ್ನ್ ಬಳಸಲು ಅವಕಾಶ ನೀಡಲಾಗಿದ್ದು, ಉಳಿದಂತೆ ಕಡ್ಡಾಯವಾಗಿ ಹಾರ್ನ್ ಆಫ್ ಮಾಡಿರಬೇಕು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸಾಮಾನ್ಯವಾಗಿ ಧಾರ್ಮಿಕ ಕ್ಷೇತ್ರಗಳು ಮತ್ತು ದೇವಸ್ಥಾನಗಳ ಸುತ್ತಮುತ್ತಲಿನ ಪ್ರದೇಶಗಳನ್ನು ‘ನಿಶ್ಯಬ್ದ ವಲಯ’ ಎಂದು ಘೋಷಿಸಲಾಗುತ್ತದೆ. ನಿಯಮಗಳ ಪ್ರಕಾರ ಇಲ್ಲಿ ಶಬ್ದದ ತೀವ್ರತೆಯು ಹಗಲಿನಲ್ಲಿ 50 ಡೆಸಿಬಲ್ ಮತ್ತು ರಾತ್ರಿಯಲ್ಲಿ 40 ಡೆಸಿಬಲ್ ಮೀರಬಾರದು. ಒಂದು ವೇಳೆ ಭಕ್ತರು ಅಥವಾ ವಾಹನ ಚಾಲಕರು ಈ ನಿಯಮವನ್ನು ಉಲ್ಲಂಘಿಸಿ ಅನಗತ್ಯವಾಗಿ ಹಾರ್ನ್ ಅಥವಾ ಸೈರನ್ ಬಾರಿಸಿದರೆ, ಟಿಟಿಡಿ ಜಾಗೃತ ದಳ ಮತ್ತು ಸಂಚಾರಿ ಪೊಲೀಸರು ಭಾರೀ ದಂಡ ವಿಧಿಸಲಿದ್ದಾರೆ. ಆದ್ದರಿಂದ, ತಿರುಮಲಕ್ಕೆ ಪ್ರಯಾಣಿಸುವ ಮುನ್ನ ಈ ನಿಯಮವನ್ನು ನೆನಪಿನಲ್ಲಿಟ್ಟುಕೊಳ್ಳಿ.

ನೋಡಿರಿ

