ಕಾರಲ್ಲಿ ಹೋದರೆ ಮದುವೆಗೆ ಲೇಟು – ಮೆಟ್ರೋ ಹತ್ತಿದ ಮದುಮಗಳು!
ಟ್ರಾಫಿಕ್ ಜಾಮ್ ಗೆ ಬೇಸತ್ತು ಮೆಟ್ರೋದಲ್ಲಿ ಮದುವೆ ಮಂಟಪಕ್ಕೆ ಬಂದ ಮದುಮಗಳು!
ಬೆಂಗಳೂರು: ಬೆಂಗಳೂರಲ್ಲಿ ಟ್ರಾಫಿಕ್ ಜಾಮ್ ಅನ್ನೋದು ದೊಡ್ಡ ಸಮಸ್ಯೆ. ಇದರಿಂದಾಗಿ ಅನೇಕರು ಅನೇಕ ರೀತಿಯಲ್ಲಿ ತೊಂದರೆಗೊಳಗಾಗಿದ್ದೂ ಇದೆ. ಟ್ರಾಫಿಕ್ ಜಾಮ್‌ನಿಂದಾಗಿ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಪರೀಕ್ಷೆ ಬರೆಯಲು ಅಸಾಧ್ಯವಾಗಿದ್ದೂ ಇದೆ. ಆಫೀಸ್ ಗೆ ತೆರಳುವವರು ಬಾಸ್ ಕೈಯಿಂದ ಸುಮ್ಮನೆ ಬೈಸಿಕೊಂಡಿದ್ದೂ ಇದೆ. ಈಗ ಬೆಂಗಳೂರಿನಲ್ಲಿ ವಧು ಒಬ್ಬಳು ಇಂಥದ್ದೇ ಟ್ರಾಫಿಕ್ ಜಾಮ್ ನಿಂದ ಪರದಾಡಿದ್ದಳು. ಧಾಂ ಧೂಮ್ ಅಂತಾ ಅಲಂಕೃತಗೊಂಡ ಕಾರಲ್ಲಿ ಹೋಗಬೇಕಾದ ಮದುಮಗಳು, ಟ್ರಾಫಿಕ್ ಜಾಮ್ ನಿಂದಾಗಿ ತಾನು ಬಂದ ಕಾರನ್ನು ರಸ್ತೆಯಲ್ಲೇ ಬಿಟ್ಟು ಮೆಟ್ರೋದಲ್ಲಿ ತೆರಳಿದ್ದಾಳೆ. ಈ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಎರಡು ಮದುವೆಯಾಗಿದ್ರೆ ಕೆಲಸ ಇಲ್ಲ! – ಏನಿದು ಬಿಬಿಎಂಪಿ ರೂಲ್ಸ್?
ಬೆಂಗಳೂರಿನಲ್ಲಿ ಕಾರೊಂದು ಮದುವೆ ದಿಬ್ಬಣ ಹೊರಟಿತ್ತು. ಈ ವೇಳೆ ಟ್ರಾಫಿಕ್ ಮಧ್ಯೆ ಸಿಲುಕಿಕೊಂಡಿದೆ. ಎಷ್ಟು ಹೊತ್ತು ಕಾದರೂ ವಾಹನಗಳು ಮುಂದೆ ಚಲಿಸಿದಂತೆ ಕಾಣಲಿಲ್ಲ. ಇನ್ನೂ ಕಾರಿನಲ್ಲಿ ಹೋದರೆ ಮೂಹೂರ್ತ ಮೀರಿ ಹೋಗುತ್ತದೆ. ಎಲ್ಲಿ ಮದುವೆಯೂ ನಿಂತು ಹೋಗುತ್ತೆ ಅಂತ ವಧು ಹಾಗೂ ಸಂಬಂಧಿಕರಿಗೆ ಆತಂಕವಾಗಿತ್ತು. ಹೀಗೆ ಕಾರಿನಲ್ಲಿ ಕುಳಿತಿದ್ದರೆ ಸಮಯಕ್ಕೆ ಸರಿಯಾಗಿ ಮಂಟಪ ತಲುಪೋದು ಅನುಮಾನ ಅಂತ ಅರಿವಾಗಿದೆ. ಕೂಡಲೇ ಕಾರಿನಿಂದ ಇಳಿದ ಆಕೆ ಮತ್ತು ಸಂಬಂಧಿಕರು ನೇರವಾಗಿ ಮೆಟ್ರೋ ಸ್ಟೇಷನ್ ಬಳಿ ತೆರಳಿದ್ದಾಳೆ. ಮೆಟ್ರೋ ಹತ್ತಿ ಸಮಯಕ್ಕೆ ಸರಿಯಾಗಿ ಮದುಮಗಳು ಮದುವೆ ಮನೆ ತಲುಪಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಧುವಿನ ಸಮಯಪ್ರಜ್ಞೆಯನ್ನು ಕೊಂಡಾಡಿದ ನೆಟ್ಟಿಗರು “ಸ್ಮಾರ್ಟ್ ಮದುಮಗಳು” ಎಂದು ಕರೆದಿದ್ದಾರೆ. ಕೆಲವರು ಸರ್ಕಾರದ ವೈಫಲ್ಯದ ಬಗ್ಗೆ ಟೀಕಿಸಿದ್ದಾರೆ.
Whatte STAR!! Stuck in Heavy Traffic, Smart Bengaluru Bride ditches her Car, & takes Metro to reach Wedding Hall just before her marriage muhoortha time!! @peakbengaluru moment 🔥🔥🔥 pic.twitter.com/LsZ3ROV86H
— Forever Bengaluru 💛❤️ (@ForeverBLRU) January 16, 2023