ಚಿರತೆ ಬೆನ್ನಟ್ಟಿ ಹೋದ ಹುಲಿ – ಹೀರೋ ಆಗಲು ಹೋಗಿ ಝೀರೋ ಆಗಿದ್ದೇಗೆ?

ಚಿರತೆ ಬೆನ್ನಟ್ಟಿ ಹೋದ ಹುಲಿ – ಹೀರೋ ಆಗಲು ಹೋಗಿ ಝೀರೋ ಆಗಿದ್ದೇಗೆ?

ಕಾಡಿನಲ್ಲಿ ಜೀವಿಸುವ ಪ್ರತಿಯೊಂದು ಪ್ರಾಣಿಗಳು ಒಂದೊಂದು ರೀತಿಯ ವಿಶೇಷತೆಯನ್ನು ಹೊಂದಿರುತ್ತವೆ. ಕೆಲವೊಂದು ಜೀವಿಗಳು ಸಾಧುವಾಗಿದ್ದರೆ, ಇನ್ನೂ ಕೆಲ ಪ್ರಾಣಿ ಕ್ರೂರತೆಯಿಂದ ಗುರುತಿಸಿಕೊಂಡಿವೆ. ಚಿರತೆ ಮತ್ತು ಹುಲಿ ಬೇಟೆಯಲ್ಲಿ ಪಳಗಿರುವ ಜೀವಿಗಳು ಅಂತಾ ಎಲ್ಲರಿಗೂ ಗೊತ್ತು. ಹೊಂಚು ಹಾಕಿ ಬೇಟೆಯಾಡುವ ವಿಷಯದಲ್ಲಿ ಇವರೆಡು ಜೀವಿಗಳು ತಮ್ಮದೇ ಆದ ಸಾಮರ್ಥ್ಯವನ್ನು ಹೊಂದಿವೆ. ಆದರೆ ಅವುಗಳ ವೇಗ ಮತ್ತು ಮರವೇರುವ ವಿಷಯಕ್ಕೆ ಬಂದಾಗ ಎರಡಕ್ಕೂ ಬಹಳ ವ್ಯತ್ಯಾಸವಿದೆ. ಅದಕ್ಕೆ ಸಾಕ್ಷಿ ಈ ವೈರಲ್ ಆದ ದೃಶ್ಯ.

ಇದನ್ನೂ ಓದಿ: ಬೋಳುತಲೆ ಅಂತಾ ಕೆಲಸದಿಂದ ವಜಾಗೊಳಿಸಿದ ಬಾಸ್ – ಉದ್ಯೋಗಿ ಮಾಡಿದ್ದೇನು ಗೊತ್ತಾ?

ಹುಲಿಗಳು ಯಾವುದೇ ಪ್ರಾಣಿಗಳನ್ನು ಬೇಟೆಯಾಡಿ ಕೊಂದು ತಿನ್ನುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆ ಕಾಡಿನಲ್ಲಿ ತನ್ನ ಸಾಮರ್ಥ್ಯ ಹೋಲುವ ಬೇರೆ ಪ್ರಾಣಿಗಳು ಬಂದರೆ ಸಹಿಸಿಕೊಳ್ಳೋದಿಲ್ಲ. ಇಲ್ಲಾಗಿದ್ದೂ ಅದೇ. ಚಿರತೆಯೊಂದು ಹುಲಿಯ ಅಧಿಪತ್ಯ ಇರುವ ಪ್ರದೇಶಕ್ಕೆ ಬಂದಿದೆ. ಇದರಿಂದ ಸಿಟ್ಟಾದ ಹುಲಿ ಚಿರತೆಯನ್ನು ಅಟ್ಟಿಸಿಕೊಂಡು ಹೋಗಿದೆ. ಆದರೆ ಪಾಪ ಹುಲಿ ಹೀರೋ ಆಗಲು ಹೋಗಿ ಝೀರೋ ಆಗಿದೆ. ಈ ದೃಶ್ಯ ಭಾರಿ ವೈರಲ್ ಆಗಿದೆ.

ಐಎಫ್ಎಸ್ ಆಫೀಸರ್ ಸುಸಂತ ನಂದ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವನ್ಯಜೀವಿಗಳ ಕುತೂಹಲಕಾರಿ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಹುಲಿ ಹಾಗೂ ಚಿರತೆಯ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಬಲಶಾಲಿ ಹುಲಿಯೊಂದು ಚಂಗನೆ ನೆಗೆದು ಚಿರತೆಯನ್ನು ಬೆನ್ನಟ್ಟುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಹೀಗೆ ತನ್ನನ್ನು ವ್ಯಾಘ್ರ ಬೆನ್ನಟ್ಟುತ್ತಿದ್ದಂತೆಯೇ ಚಿರತೆ ವೇಗವಾಗಿ ಓಡಿ ಅಲ್ಲಿದ್ದ ಮರವನ್ನೇರಿದೆ. ಹುಲಿ ಕೂಡಾ ಇದೇ ಮರವನ್ನೇರುವ ಪ್ರಯತ್ನ ಮಾಡಿದೆ. ಆದರೆ ಮರದ ಅರ್ಧ ಭಾಗ ಹತ್ತಿದಾಗ ಮುಂದೆ ಹುಲಿಗೆ ಮರವೇರಲು ಸಾಧ್ಯವಾಗಲಿಲ್ಲ. ಆದರೆ ಚಿರತೆ ಮಾತ್ರ ಸರಾಗನೇ ಮರದ ತುದಿಯನ್ನೇರಿ ಹುಲಿಯ ದಾಳಿಯಿಂದ ಪಾರಾಗಿದೆ.

ಈ 29 ಸೆಕೆಂಡಿನ ವಿಡಿಯೋವನ್ನು ಹಂಚಿಕೊಂಡಿರುವ ಸುಸಂತ ನಂದ ಅವರು ಹುಲಿಯ ಸಾಮರ್ಥ್ಯದ ಬಗ್ಗೆಯೂ ಬರೆದುಕೊಂಡಿದ್ದಾರೆ. `ಹುಲಿಗಳ ಪ್ರಾಬಲ್ಯವಿರುವ ಪ್ರದೇಶದಲ್ಲಿ ಚಿರತೆ ಬದುಕುಳಿಯುವುದು ಹೀಗೆ. ಹುಲಿಗಳೂ ಬಹಳ ಸುಲಭವಾಗಿ ಮರಗಳನ್ನು ಏರಬಲ್ಲವು. ಅವುಗಳ ಬಲವಾದ ಮತ್ತು ಚೂಪಾದ ಉಗುರುಗಳು ಮರದ ಕಾಂಡವನ್ನು ಬಿಗಿಯಾಗಿ ಹಿಡಿಯಲು ಸಹಾಯ ಮಾಡುತ್ತವೆ. ಆದರೆ ವಯಸ್ಸಾದಂತೆ ಇವುಗಳ ದೇಹದ ತೂಕವು ಮರವೇರುವುದಕ್ಕೆ ತಡೆಯಾಗುತ್ತದೆ. ಬದುಕಲು ಸ್ಲಿಮ್ ಆಗಿರಿ!’ ಎಂಬ ಕ್ಯಾಪ್ಶನ್‌ನೊಂದಿಗೆ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಜಂಗಲ್ ಸಫಾರಿಗೆ ತೆರಳಿದಂತಹ ಸಂದರ್ಭದಲ್ಲಿ ಸೆರೆಯಾದ ಈ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆದಿದೆ. ಸಾಕಷ್ಟು ಮಂದಿ ಬಲು ಕುತೂಹಲದಿಂದಲೇ ಈ ದೃಶ್ಯವನ್ನು ನೋಡುತ್ತಿದ್ದಾರೆ. ಹೀಗಾಗಿ ಈ ವಿಡಿಯೋ ಸಾಕಷ್ಟು ವೀಕ್ಷಣೆಯನ್ನು ಗಳಿಸುವಲ್ಲಿಯೂ ಯಶಸ್ವಿಯಾಗಿದೆ.

suddiyaana