ಸೆಲೆಬ್ರಿಟಿಗಳ ಬಳಿಕ ರಾಜಕಾರಣಿಗಳಿಗೂ ಚುಚ್ಚುತ್ತಿದೆ ಹುಲಿ ಉಗುರು – ಯಾರ್ಯಾರ ಮೇಲಿದೆ ಆರೋಪ?
ಬೆಂಗಳೂರು: ಸದ್ಯ ಕರ್ನಾಟಕದಲ್ಲಿ ಹುಲಿ ಉಗುರಿನ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಹುಲಿ ಉಗುರು ಹೊಂದಿರುವ ಆರೋಪದ ಮೇಲೆ ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಮನೆಯಲ್ಲಿ ಅರೆಸ್ಟ್ ಆದ ಬಳಿಕ ಅನೇಕ ಸೆಲೆಬ್ರಿಟಿಗಳು ಹುಲಿ ಉಗುರಿನ ಲಾಕೆಟ್ ಹೊಂದಿದ್ದರು ಎನ್ನುವ ಫೋಟೋ ವೈರಲ್ ಆಗುತ್ತಿದೆ. ಹೀಗಾಗಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಹುಲಿ ಉಗುರು ಧರಿಸಿದವರ ವಿರುದ್ಧ, ಅರಣ್ಯಾಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ದರ್ಶನ್, ನಿಖಿಲ್ ಕುಮಾರ್, ಜಗ್ಗೇಶ್ ಸೇರಿದಂತೆ ಹಲವರಿಗೆ ನೋಟಿಸ್ ಜಾರಿ ಮಾಡಿದ್ದರು. ಜೊತೆಗೆ ಅವರ ನಿವಾಸಕ್ಕೂ ಅಧಿಕಾರಿಗಳು ತೆರಳಿ ದಾಳಿ ಮಾಡಿದ್ದರು. ಇದೀಗ ಅರಣ್ಯಾಧಿಕಾರಿಗಳು ರಾಜಕಾರಣಿಗಳ ಮೇಲೂ ಕಣ್ಣಿಟ್ಟಿದ್ದಾರೆ. ಕೆಲ ರಾಜಕಾರಣಿಗಳ ಮನೆಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹುಲಿ ಉಗುರು ಪ್ರಕರಣ – ಅರಣ್ಯಾಧಿಕಾರಿಗಳ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಜಗ್ಗೇಶ್
ಹೌದು, ಹುಲಿ ಉಗುರು ಪೆಂಡೆಂಟ್ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟರ ಬಳಿಕ ಈಗ ರಾಜಕಾರಣಿಗಳಿಗೂ ಸಂಕಷ್ಟ ಶುರುವಾಗಿದೆ. ಕೆಲ ರಾಜಕಾರಣಿಗಳ ಆಪ್ತರು, ಮಕ್ಕಳು ಹುಲಿ ಉಗುರಿನ ಸುಳಿಯಲ್ಲಿ ಸಿಲುಕಿದ್ದಾರೆ. ರಾಜಕಾರಣಿಗಳು ಅವರ ಆಪ್ತರ ಮನೆಗೆ ಅರಣ್ಯಾಧಿಕಾರಿಗಳು ತೆರಳಿ ಪರಿಶೀಲನೆ ಆರಂಭಿಸಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್, ಹುಬ್ಬಳ್ಳಿ ಕಾಂಗ್ರೆಸ್ ಯುವ ನಾಯಕ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಂಬಂಧಿ ರಜತ್ ಉಳ್ಳಾಗಡ್ಡಿಮಠ ಮದುವೆ ವೇಳೆ ವ್ಯಾಘ್ರನಖ ಮಾದರಿ ಪೆಂಡೆಂಟ್ ಧರಿಸಿದ್ದ ಫೋಟೋಗಳು ವೈರಲ್ ಆಗಿವೆ. ವಿಜಯಪುರದ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಪುತ್ರನ ಕೊರಳಲ್ಲಿ ಹುಲಿ ಉಗುರು ಮಾದರಿ ಪೆಂಡೆಂಟ್ ಕಂಡುಬಂದ ಕಾರಣ ಅರಣ್ಯಾಧಿಕಾರಿಗಳು, ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾಕೆಟ್‌ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇನ್ನು ಕಾಂಗ್ರೆಸ್ ಮುಖಂಡ ಜೇಡರಹಳ್ಳಿ ಕೃಷ್ಣಪ್ಪನ ಆರ್‌ಆರ್ ನಗರದ ಮನೆಯನ್ನು ಇದೇ ಕಾರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಉದ್ಯಮಿ ಚೇತನ್, ಬೈರತಿ ಸುರೇಶ್ ಸಂಬಂಧಿ, ಮಾಜಿ ಮಂತ್ರಿ ಜಿಟಿ ದೇವೇಗೌಡ ಆಪ್ತ ಶ್ರೀಧರ್ ನಾಯಕ್ ಕೊರಳಲ್ಲಿಹುಲಿ ಉಗುರು ಮಾದರಿ ಲಾಕೆಟ್ ಇರೋ ಫೋಟೋಗಳು ವೈರಲ್ ಆಗುತ್ತಿವೆ. ಇದೀಗ ಇವರ ಮನೆಗಳಿಗೂ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.