ಚಾಮರಾಜನಗರದಲ್ಲಿ ಹುಲಿ ಅಟ್ಟಹಾಸ! – ರೈತನನ್ನು ಕೊ*ದು ದೇಹದ ಭಾಗ ತಿಂದು ಹಾಕಿದ ವ್ಯಾಘ್ರ!

ಚಾಮರಾಜನಗರ ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಹುಲಿ ದಾಳಿಗೆ ರೈತರೊಬ್ಬರು ಅತ್ಯಂತ ದಾರುಣವಾಗಿ ಬಲಿಯಾಗಿರುವ ಘಟನೆ ಗ್ರಾಮಸ್ಥರಲ್ಲಿ ಆತಂಕ ಮತ್ತು ಆಕ್ರೋಶ ಮೂಡಿಸಿದೆ. ಜಮೀನಿನ ಕೆಲಸಕ್ಕೆ ತೆರಳಿದ್ದ ರೈತನ ಮೇಲೆ ಹುಲಿ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇದಾದ ಬಳಿಕ ರೈತನ ಮೃತದೇಹದ ಕೆಲವು ಭಾಗವನ್ನು ಹುಲಿ ತಿಂದು ಹಾಕಿರುವುದು ಘಟನೆಗೆ ಮತ್ತಷ್ಟು ಭೀಕರತೆ ತಂದಿದೆ. ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಸುತ್ತಮುತ್ತ ಹುಲಿ ಓಡಾಟದ ಬಗ್ಗೆ ಆತಂಕವಿದ್ದರೂ ಅರಣ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಆರೋಪವನ್ನು ಗ್ರಾಮಸ್ಥರು ಮಾಡಿದ್ದಾರೆ. ಹುಲಿಯನ್ನು ಶೀಘ್ರವಾಗಿ ಪತ್ತೆಹಚ್ಚಿ ಸೆರೆಹಿಡಿಯಬೇಕು, ಇಲ್ಲವಾದರೆ ಮತ್ತಷ್ಟು ಜೀವಗಳಿಗೆ ಅಪಾಯ ಎದುರಾಗಬಹುದು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಚಿಪ್ಸ್ ತಿನ್ನುತ್ತಾ ಕೂಲ್‌ಡ್ರಿಂಕ್ಸ್ ಕುಡಿಯುತ್ತೀರಾ? ಎಚ್ಚರ.. ನಿಮ್ಮ ಆರೋಗ್ಯವನ್ನು ನೀವೇ ಹಾಳುಮಾಡಿಕೊಳ್ಳುತ್ತಿದ್ದೀರಿ!
ಹುಲಿ ದಾಳಿಯಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ರೈತರು ಹಾಗೂ ಸ್ಥಳೀಯರು ಜಮೀನು ಮತ್ತು ಅರಣ್ಯ ಪ್ರದೇಶಗಳತ್ತ ತೆರಳಲು ಆತಂಕ ಪಡುವಂತಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹುಲಿಯ ಚಲನವಲನ ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ.
ಸದ್ಯ ರೈತನ ಕುಟುಂಬಕ್ಕೆ ನ್ಯಾಯ ಮತ್ತು ಸೂಕ್ತ ಪರಿಹಾರ ನೀಡಬೇಕು, ಜೊತೆಗೆ ಹುಲಿಯನ್ನು ಶೀಘ್ರವಾಗಿ ಸೆರೆಹಿಡಿದು ಗ್ರಾಮಸ್ಥರ ಭಯವನ್ನು ನಿವಾರಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ನೋಡಿರಿ

