20,000 ರೂಪಾಯಿ ಬೆಲೆಯ ಟಿಕೆಟ್ 8 ಲಕ್ಷಕ್ಕೆ ಸೇಲ್ – ಭಾರತ, ಪಾಕಿಸ್ತಾನ ನಡುವೆ ಪಂದ್ಯದ ಟಿಕೆಟ್ ಗಳು ಭರ್ಜರಿ ಡಿಮ್ಯಾಂಡ್

ಭಾರತದಲ್ಲೀಗ ಐಪಿಎಲ್ ಫೀವರ್ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ಬಳಿಕ ಟಿ 20 ವಿಶ್ವಕಪ್ ಕದನ ಶುರುವಾಗಲಿದೆ. ಈ ವಿಶ್ವಯುದ್ಧಕ್ಕೆ ಇನ್ನೆರಡು ವಾರಗಳೂ ಕೂಡ ಉಳಿದಿಲ್ಲ. ಜೂನ್ 1 ರಿಂದ 29 ರವರೆಗೆ ಯುಎಸ್‌ಎ ಮತ್ತು ವೆಸ್ಟ್ ಇಂಡೀಸ್ ನಲ್ಲಿ ಟಿ-20 ವಿಶ್ವಕಪ್ ನಡೆಯಲಿದ್ದು, ಈಗಾಗ್ಲೇ ಭಾರತ ತಂಡ ಕೂಡ ಸಿದ್ಧವಾಗಿದೆ. ಹಿಟ್ ಮ್ಯಾನ್ ರೋಹಿತ್ ಶರ್ಮಾ ತಂಡದ ನಾಯಕರಾದರೇ ಹಾರ್ದಿಕ್ ಪಾಂಡ್ಯ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಇನ್ನು ಈ ಟೂರ್ನಿಯಲ್ಲಿ ಇಡೀ ಜಗತ್ತೇ ಎದುರು ನೋಡ್ತಿರೋ ಪಂದ್ಯ ಅಂದ್ರೆ ಅದು ಭಾರತ ಮತ್ತು ಪಾಕಿಸ್ತಾನ ಪಂದ್ಯ. ಜೂನ್ 9ರಂದು ಭಾರತ ಪಾಕಿಸ್ತಾನ ಪಂದ್ಯ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಈಗಾಗಲೇ ಐಸಿಸಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪಂದ್ಯದ ಬಹುತೇಕ ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಹೀಗಿದ್ರೂ ಕಾಳಸಂತೆಯಲ್ಲಿ ಹಾಗೂ ಥರ್ಡ್ ಪಾರ್ಟಿ ವೆಬ್‌ಸೈಟ್ ಅಂದ್ರೆ ಅನಧಿಕೃತ ವೆಬ್ ಸೈಟ್ಗಳಲ್ಲಿ ಟಿಕೆಟ್ಗಾಗಿ ಫುಲ್ ಡಿಮ್ಯಾಂಡ್ ಶುರುವಾಗಿದೆ. ಬೆಲೆ ಕೇಳಿದ್ರೇನೆ ತಲೆ ಗಿರ್ಽ ಅನ್ನುವಂತಿದೆ.
ಇದನ್ನೂ ಓದಿ: ಅಪ್ಪನ ಸಾವು, ಅಣ್ಣನಿಗೆ ಕೊಟ್ಟ ಮಾತು- ಕ್ರಿಕೆಟ್ ಲೋಕದಲ್ಲಿ ಈಗ ವಿರಾಟ್ ಕೊಹ್ಲಿ ಕಿಂಗ್
ಜೂನ್ 9ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿರುವ ಪಂದ್ಯದ ಟಿಕೆಟ್ ಗಳು ಭರ್ಜರಿ ಮೊತ್ತಕ್ಕೆ ಸೇಲ್ ಆಗ್ತಿವೆ. ಅದ್ರಲ್ಲೂ ಬದ್ಧವೈರಿಗಳ ರಣರೋಚಕ ಪಂದ್ಯ ಕಣ್ತುಂಬಿಕೊಳ್ಳಲು ಟಿಕೆಟ್‌ಗಳು ಅಸಲಿ ಮೌಲ್ಯಕ್ಕಿಂತ 5ರಿಂದ 10 ಪಟ್ಟು ಹೆಚ್ಚು ಮೊತ್ತಕ್ಕೆ ಮಾರಾಟವಾಗುತ್ತಿವೆ. ಪಂದ್ಯದ ಟಿಕೆಟ್‌ಗಳನ್ನು ಮುಂಚಿತವಾಗಿಯೇ ಖರೀದಿಸಿದ್ದವರು ಅನಧಿಕೃತ ಟಿಕೆಟ್ ಮಾರಾಟ ವೆಬ್‌ಸೈಟ್‌ಗಳಲ್ಲಿ ಟಿಕೆಟ್ ಮಾರಾಟಕ್ಕಿಟ್ಟಿದ್ದಾರೆ. 15,000 ರಿಂದ 20,000 ರೂಪಾಯಿ ಮೌಲ್ಯದ ಟಿಕೆಟ್‌ಗಳು ಕನಿಷ್ಠ 1.1 ಲಕ್ಷ ರೂಪಾಯಿಗೆ ಬ್ಲಾಕ್ನಲ್ಲಿ ಮಾರಾಟವಾಗುತ್ತಿವೆ. ಐಸಿಸಿ ಅಧಿಕೃತ ವೆಬ್‌ಸೈಟ್‌ನಲ್ಲಿ 2,000 ದಿಂದ 2,750 ಅಮೆರಿಕನ್ ಡಾಲರ್ ಅಂದ್ರೆ ಭಾರತೀಯ ಕರೆನ್ಸಿ ಪ್ರಕಾರ ಅಂದಾಜು 1.6 ಲಕ್ಷ ರೂಪಾಯಿಂದ 2.29 ಲಕ್ಷ ರೂಪಾಯಿವರೆಗೆ ಮಾರಾಟ ಮಾಡಲಾಗ್ತಿದೆ. ಅದ್ರಲ್ಲೂ ಕೆಲವೇ ಕೆಲವು ಟಿಕೆಟ್‌ಗಳಷ್ಟೇ ಲಭ್ಯವಿದ್ದು, ಈ ಟಿಕೆಟ್‌ಗಳಿಗೆ ಅನಧಿಕೃತ ವೆಬ್‌ಸೈಟ್‌ಗಳಲ್ಲಿ 8.6 ಲಕ್ಷ ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ. ಹೀಗಿದ್ರೂ ಕೂಡ ಕೆಲವ್ರು ಇಷ್ಟೊಂದು ಹಣ ಕೊಟ್ಟು ಟಿಕೆಟ್ ಅನ್ನು ಖರೀದಿ ಮಾಡ್ತಿದ್ದಾರೆ. ಇದನ್ನ ನೋಡಿದ್ರೇನೆ ಗೊತ್ತಾಗುತ್ತೆ ಇಂಡಿಯಾ ವರ್ಸಸ್ ಪಾಕಿಸ್ತಾನ್ ಪಂದ್ಯದ ಮ್ಯಾಚ್ ಫೀವರ್ ಎಷ್ಟಿದೆ ಅನ್ನೋದು.
ಸದ್ಯ ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಮೇ 25ರಂದು ಭಾರತ ತಂಡದ ಮೊದಲ ಬ್ಯಾಚ್ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದೆ. ಐಪಿಎಲ್ ಪ್ಲೇ-ಆಫ್‌ಗೇರದ ತಂಡಗಳಲ್ಲಿದ್ದ ಆಟಗಾರರು ಮೊದಲ ಬ್ಯಾಚ್‌ನಲ್ಲಿ ಪ್ರಯಾಣಿಸಲಿದ್ದಾರೆ. ನಾಯಕ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಅಕ್ಷರ್ ಪಟೇಲ್, ಅರ್ಶ್‌ದೀಪ್ ಸಿಂಗ್ ಹಾಗೂ ಕೋಚ್‌ಗಳಾದ ರಾಹುಲ್ ದ್ರಾವಿಡ್, ಪರಾಸ್ ಮ್ಹಾಂಬ್ರೆ, ವಿಕ್ರಮ್ ರಾಥೋಡ್ ಸೇರಿ ಇನ್ನುಳಿದ ಸಹಾಯಕ ಸಿಬ್ಬಂದಿ ಮೇ 25ರಂದೇ ಅಮೆರಿಕಕ್ಕೆ ತೆರಳಲಿದ್ದಾರೆ. ಐಪಿಎಲ್ ಪ್ಲೇ-ಆಫ್‌ನಲ್ಲಿ ಆಡುವ ತಂಡಗಳಲ್ಲಿರುವ ಉಳಿದ ಆಟಗಾರರು ಟೂರ್ನಿ ಕೊನೆಗೊಂಡ ಬಳಿಕ ಅಂದರೆ ಮೇ 27ರಂದು ಅಮೆರಿಕಕ್ಕೆ ವಿಮಾನ ಹತ್ತಲಿದ್ದಾರೆ. ಭಾರತ ಜೂನ್ 1ರಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವಾಡಲಿದ್ದು, ಜೂನ್ 5ರಂದು ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಆದ್ರೀಗ ಟೂರ್ನಿ ಆರಂಭಕ್ಕೂ ಮುನ್ನವೇ ಭಾರತ ಮತ್ತು ಪಾಕಿಸ್ತಾನ ನಡುವಿನ ಕದನದ ಬಿಸಿ ಏರುತ್ತಿದ್ದು, ಟಿಕೆಟ್ಗಳೆಲ್ಲಾ ಸೋಲ್ಡ್ ಔಟ್ ಆಗಿವೆ.