2 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಪ್ಲ್ಯಾನ್ ಮಾಡ್ತಿದ್ದಾರಾ ಸಿದ್ದರಾಮಯ್ಯ..!? – ಇದೆಲ್ಲಾ ಗಿಮಿಕ್ ಎಂದಿದ್ದೇಕೆ ಬಿಎಸ್ ವೈ?
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಿಂತ ವಿಪಕ್ಷನಾಯಕ ಸಿದ್ದರಾಮಯ್ಯ ಕ್ಷೇತ್ರದ ವಿಚಾರವೇ ದೊಡ್ಡ ಸುದ್ದಿಯಾಗ್ತಿದೆ. ಕಾಂಗ್ರೆಸ್ ಮಾತ್ರವಲ್ಲದೆ ಬಿಜೆಪಿ ಹಾಗೂ ಜೆಡಿಎಸ್ ಪಾಳಯದಲ್ಲೂ ಭಾರೀ ಚರ್ಚೆಯಾಗ್ತಿದೆ. ಸ್ವತಃ ಸಿದ್ದರಾಮಯ್ಯನವರಿಗೂ ಕೂಡ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಅನ್ನೋ ಬಗ್ಗೆ ಕ್ಲಾರಿಟಿ ಇಲ್ಲ.
ಕಳೆದ ಬಾರಿಯ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸೋತಿದ್ದ ಸಿದ್ದರಾಮಯ್ಯಗೆ ಈ ಸಲವೂ ಅದೇ ಭಯ ಕಾಡ್ತಿದೆ. ಹೀಗಾಗಿ ಈ ಸಲವೂ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವ ಬಗ್ಗೆ ತಮ್ಮ ಆಪ್ತರ ಬಳಿ ಇಂಗಿತ ವ್ಯಕ್ತಪಡಿಸಿದ್ದಾರಂತೆ. ಆದರೆ ಸಿದ್ದುಗೆ 2 ಕ್ಷೇತ್ರಗಳನ್ನ ನೀಡಲು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಒಪ್ಪಿಗೆ ನೀಡಿಲ್ಲ ಎನ್ನಲಾಗ್ತಿದೆ. ಹಾಗೇನಾದ್ರೂ ಸಿದ್ದುಗೆ 2 ಕ್ಷೇತ್ರ ನೀಡಿದ್ರೆ ಪಕ್ಷದಿಂದ ತಪ್ಪು ಸಂದೇಶ ರವಾನೆಯಾಗುತ್ತೆ. ಜತೆಗೆ ಬೇರೆಯವರು ತಮಗೂ 2 ಕ್ಷೇತ್ರಗಳನ್ನ ಕೇಳಬಹುದು. ಆಗ ಭಿನ್ನಮತ ಶುರುವಾಗುತ್ತೆ ಎಂಬ ಆತಂಕದಲ್ಲಿದ್ದಾರೆ.
ಇದನ್ನೂ ಓದಿ : 9 ಕೆಜಿ ಚಿನ್ನ.. 2 ಕೋಟಿ ಹಣ.. ಸಾವಿರ ಸೀರೆ – ಅಬ್ಬಬ್ಬಾ ‘ಮತ’ಕ್ಕಾಗಿ ಏನೆಲ್ಲಾ ಅಡ್ಡದಾರಿ..!?
ಟಿಕೆಟ್ ಗೊಂದಲದ ನಡುವೆಯೇ ಸಿದ್ದರಾಮಯ್ಯ ನಾಳೆ ಬಾದಾಮಿ ಕ್ಷೇತ್ರದಲ್ಲಿ ಭರ್ಜರಿ ರೋಡ್ ಶೋಗೆ ಮುಂದಾಗಿದ್ದಾರೆ. 500 ಕೋಟಿ ವೆಚ್ಚದ ಬಾದಾಮಿ ಕೆರೂರು ಶಾಶ್ವತ ಕುಡಿಯುವ ನೀರಿನ ಯೋಜನೆಗೆ ನಾಳೆ ಸಿದ್ದು ಚಾಲನೆ ನೀಡಲಿದ್ದಾರೆ. ಬಳಿಕ ರಾಮದುರ್ಗ ಕ್ರಾಸ್ ನಿಂದ ಎಪಿಎಂಸಿ ಆವರಣದವರೆಗೆ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ಇನ್ನು ಸಿದ್ದು ಕ್ಷೇತ್ರ ಗೊಂದಲ ವಿಚಾರ ಬಿಜೆಪಿ ಭರ್ಜರಿ ಮೀಲ್ಸ್ ಸಿಕ್ಕಂತಾಗಿದೆ. ಯಾವ ಕ್ಷೇತ್ರ ಗೊಂದಲವೂ ಇಲ್ಲ. ಇದೆಲ್ಲಾ ಪ್ರಚಾರಕ್ಕಷ್ಟೇ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ. ಹಾಗೇ ಅನ್ನಭಾಗ್ಯ, ಶಾದಿಭಾಗ್ಯ ಅಂತಾ ವಿವಿಧ ಭಾಗ್ಯಗಳನ್ನು ಕೊಟ್ಟ ಸಿದ್ದರಾಮಯ್ಯಗೆ ಕ್ಷೇತ್ರ ಭಾಗ್ಯವೇ ಇಲ್ಲ. ಕ್ಷೇತ್ರ ಹುಡುಕಿಕೊಳ್ಳಬೇಕಾದ ದಯನೀಯ ಸ್ಥಿತಿ ಬಂದಿದೆ. ಅಂದರೆ ಸಿದ್ದರಾಮಯ್ಯರ ಭಾಗ್ಯಗಳಿಗೆ ಜನ ಬೆಲೆ ಕೊಟ್ಟಿಲ್ಲ ಎಂದರ್ಥ ಎಂದು ಪ್ರತಾಪ್ ಸಿಂಹ ಟೀಕಿಸಿದ್ದಾರೆ.