ವಿಶ್ವಕಪ್ ಹಿಂದಿನ ಶಕ್ತಿಯೇ ಕನ್ನಡಿಗ – RO-KOಗೆ ಕುಮಟಾದ ರಘು ಹೀರೋ
ಸಚಿನ್ ಮೆಚ್ಚಿದ ಥ್ರೋಡೌನ್ ಸ್ಪೆಷಲಿಸ್ಟ್
13 ವರ್ಷಗಳ ಕನಸು. ಈ ಕನಸಿನ ಸಾಕಾರದ ಹಿಂದಿದೆ ಕಾಣದ ಶಕ್ತಿಗಳು. ಮೈದಾನದಲ್ಲಿ ಆಡುವ ಆಟಗಾರರು ಮಾತ್ರ ನಮ್ಮ ಮುಂದಿರೋ ಹೀರೋಗಳು. ಆದ್ರೆ, ಈ ಆಟಗಾರರ ತೋಳ್ಬಲ, ಮನೋಬಲ, ದೈಹಿಕ ಬಲ ಹೆಚ್ಚಿಸಲು ತಮ್ಮ ರಕ್ತವನ್ನೇ ಬಸಿದು ಶ್ರಮಪಡೋ ತೆರೆಮರೆಯ ಹೀರೋಗಳು ಕಾಣಿಸೋದೇ ಇಲ್ಲ. ಅಂಥಾ ಒಬ್ಬ ಹೀರೋ ನಮ್ಮ ಕನ್ನಡಿಗ ಅನ್ನೋದು ನಮ್ಮ ಹೆಮ್ಮೆ. ಹೌದು. ಕಳೆದ 13 ವರ್ಷಗಳಿಂದ ಟೀಮ್ ಇಂಡಿಯಾಕ್ಕಾಗಿ ತನ್ನ ರಟ್ಟೆಯ ಬಲವನ್ನೆಲ್ಲಾ ಬಸಿದುಕೊಟ್ಟವರೇ ರಾಘವೇಂದ್ರ ದೇವಗಿ. ಟೀಮ್ ಇಂಡಿಯಾ ಬ್ಯಾಟಿಂಗ್ ಶಕ್ತಿಯಾಗಿ ನಿಂತಿರೋ ರಘು ಯಾರು?, ಅಷ್ಟೇ ಅಲ್ಲ, ಸಚಿನ್ ತೆಂಡೂಲ್ಕರ್, ಧೋನಿ, ಕೊಹ್ಲಿ, ರೋಹಿತ್ ಶರ್ಮಾ ಬ್ಯಾಟಿಂಗ್ ಸಾಧನೆ ಹಿಂದೆ ಈ ಕನ್ನಡಿಗ ನಿಂತಿದ್ದು ಹೇಗೆ? ರಾಘವೇಂದ್ರ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮೈದಾನವೇ ದೇವರು.. ಮಣ್ಣೇ ಪ್ರಸಾದ – ಗಲ್ಲಿ ಹುಡುಗ ಕ್ರಿಕೆಟ್ ಲೆಜೆಂಡ್ ಆಗಿದ್ದೇಗೆ?
ಕಳೆದ 13 ವರ್ಷಗಳಿಂದ ರಾಘವೇಂದ್ರ ಟೀಂ ಇಂಡಿಯಾದ ಪ್ರಮುಖ ಶಕ್ತಿಯಾಗಿದ್ದಾರೆ. ನೋಡೋಕೆ ತುಂಬಾ ಮುಗ್ದರಾಗಿ, ನಾಚಿಕೆ ಸ್ವಭಾವದ ವ್ಯಕ್ತಿ. ಹಣೆ ಮೇಲೆ ಸದಾ ಇರುವ ಕುಂಕುಮ. ಸಿಂಪಲ್ ಹುಡುಗ ಈ ನಮ್ಮ ಹೆಮ್ಮೆಯ ಕನ್ನಡಿಗ ರಾಘವೇಂದ್ರ. ಟೀಮ್ ಇಂಡಿಯಾದಲ್ಲಿ ರಘು ಅಂತಾನೇ ಫೇಮಸ್. ಇಷ್ಟು ಸಿಂಪಲ್ ಆಗಿ ಕಾಣುವ ರಘು ನೆಟ್ಸ್ನಲ್ಲಿ ಪ್ರಾಕ್ಟೀಸ್ ಸೆಷನ್ ವೇಳೆ ಅಕ್ಷರಶ: ಬೆಂಕಿ ಚೆಂಡು. ಇವರ ರಟ್ಟೆಯಲ್ಲಿರುವ ಬಲದಿಂದಲೇ ಟೀಮ್ ಇಂಡಿಯಾ ಇವತ್ತು ಜಗತ್ತನ್ನೇ ಗೆದ್ದ ಖುಷಿಯಲ್ಲಿದೆ. ಟೀಂ ಇಂಡಿಯಾ ಪ್ಲೇಯರ್ಸ್ ನೆಟ್ ಪ್ರಾಕ್ಟೀಸ್ ವೇಳೆ ಫಸ್ಟ್ ಫೀಲ್ಡಿಗೆ ಎಂಟ್ರಿ ಕೊಡೋದು ಮತ್ತು ಫೀಲ್ಡ್ನ್ನ ಲಾಸ್ಟ್ಗೆ ತೊರೆಯೋದು ಯಾರಾದ್ರೂ ಇದ್ರೆ ಅವರೇ ರಾಘವೇಂದ್ರ. ಇವರೇ ಟೀಂ ಇಂಡಿಯಾದ ಥ್ರೋಡೌನ್ ಸ್ಪೆಷಲಿಸ್ಟ್.
ರಾಘವೆಂದ್ರ ಅವರು ಮೂಲತ: ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನವರು. ಬಾಲ್ಯದಿಂದಲೂ ಕ್ರಿಕೆಟ್ ಕನಸು ಮನಸಿನಲ್ಲಿ ಬಲವಾಗಿ ಬೇರೂರಿತ್ತು. ಕ್ರಿಕೆಟ್‌ಗಾಗಿ ಯಾವ ತ್ಯಾಗಕ್ಕೂ ಸಿದ್ಧರಾಗಿದ್ದರು. ಆದರೆ ಮನೆಯ ಆರ್ಥಿಕ ಪರಿಸ್ಥಿತಿಯಿಂದ ದಾರಿ ಕಾಣದಾಗಿತ್ತು. ಆದ್ರೂ ಛಲ ಬಿಡದ ರಾಘವೇಂದ್ರ ಕ್ರಿಕೆಟ್ ಅನ್ನೇ ಸರ್ವಸ್ವವಾಗಿ ಆರಿಸಿಕೊಂಡಿದ್ದರು. ರಘು ತಂದೆಗೆ ಕ್ರಿಕೆಟ್ ಎಂದರೆ ಇಷ್ಟವಿಲ್ಲ. ಮಗನ ಕ್ರಿಕೆಟ್ ಹುಚ್ಚನ್ನು ನೋಡಿದ ತಂದೆ ಒಂದು ದಿನ ಮಗನಲ್ಲಿ ಕೇಳುತ್ತಾರೆ. ನಿನಗೆ ಓದು, ಜೀವನ ಮುಖ್ಯವೋ, ಕ್ರಿಕೆಟ್ ಮುಖ್ಯವೋ ಎಂದು. ಅಷ್ಟೇ.. ಕೈಯಲ್ಲೊಂದು ಬ್ಯಾಗ್, ಪಾಕೆಟ್ನಲ್ಲಿ 21 ರೂಪಾಯಿ.. ಮನೆ ಬಿಟ್ಟು ಹೊರಟೇ ಬಿಟ್ಟ ರಾಘವೇಂದ್ರ. ಕುಮಟಾದಿಂದ ಹೊರಟವನು ನೇರ ಬಂದು ಸೇರಿದ್ದು ಹುಬ್ಬಳ್ಳಿಗೆ. ಹಿಂದೆ ಮುಂದೆ ಯೋಚಿಸದೆ ಮನೆ ಬಿಟ್ಟು ಬಂದವನ ಕೈಯಲ್ಲಿದ್ದದ್ದು ಕೇವಲ ₹21 ರೂಪಾಯಿ. ಒಂದು ವಾರ ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಮಲಗುತ್ತಾರೆ. ಅಲ್ಲಿಂದ ಪೊಲೀಸರು ಓಡಿಸಿದಾಗ ಪಕ್ಕದಲ್ಲೇ ಇದ್ದ ದೇವಸ್ಥಾನವೊಂದನ್ನು ಸೇರಿಕೊಳ್ಳುತ್ತಾರೆ. 10 ದಿನ ದೇವಸ್ಥಾನದಲ್ಲಿ ವಾಸ. ಅಲ್ಲಿಂದಲೂ ಹೊರ ನಡೆಯಬೇಕಾದ ಪರಿಸ್ಥಿತಿ ಎದುರಾದಾಗ ಬೇರೆ ದಾರಿ ಕಾಣದ ರಾಘವೇಂದ್ರ ಹತ್ತಿರದ ಸ್ಮಶಾನವೊಂದನ್ನು ಸೇರಿಕೊಳ್ಳುತ್ತಾರೆ. ಸ್ಮಶಾನದಲ್ಲಿದ್ದ ಪಾಳು ಬಿದ್ದ ಕಟ್ಟಡವೇ ಮನೆಯಾಗುತ್ತದೆ. ಕ್ರಿಕೆಟ್ ಮೈದಾನದಿಂದ ತಂದ ಹರಕಲು ಮ್ಯಾಟನ್ನೇ ಹೊದಿಕೆ ಮಾಡಿಕೊಳ್ಳುತ್ತಾರೆ. ಈ ರೀತಿ ನಾಲ್ಕೂವರೆ ವರ್ಷ ಸ್ಮಶಾನದಲ್ಲೇ ಮಲಗುತ್ತಾರೆ ರಾಘವೇಂದ್ರ. ಈ ಮಧ್ಯೆ ಬಲಗೈ ಮುರಿದು ಹೋಗಿದ್ದ ಕಾರಣ ಕ್ರಿಕೆಟ್ ಆಡುವ ಕನಸಿಗೆ ಕಲ್ಲು ಬಿದ್ದಿರುತ್ತದೆ. ಮನೆ ಬಿಟ್ಟು ಬಂದಾಗಿದೆ, ವಾಪಸ್ ಹೋಗುವ ಮಾತೇ ಇಲ್ಲ ಎಂದುಕೊಂಡವನೇ ಕ್ರಿಕೆಟ್ ಕೋಚಿಂಗ್ ಕಡೆ ಗಮನ ಹರಿಸುತ್ತಾರೆ. ಆರಂಭದಲ್ಲಿ ಹುಬ್ಬಳ್ಳಿಯಲ್ಲಿ ಕ್ರಿಕೆಟಿಗರಿಗೆ ಚೆಂಡೆಸೆಯುತ್ತಾ, ಅವರ ಅಭ್ಯಾಸಕ್ಕೆ ನೆರವಾಗುತ್ತಾ ಇದ್ದವರಿಗೆ ಗೆಳೆಯನೊಬ್ಬ ಬೆಂಗಳೂರು ದಾರಿ ತೋರಿಸುತ್ತಾನೆ. ಬೆಂಗಳೂರಿಗೆ ಬಂದ ರಾಘವೇಂದ್ರನಿಗೆ ಆಶ್ರಯ ಕೊಟ್ಟದ್ದು Karnataka Institute Of Cricket ಮತ್ತು Swastik Union Cricket Club. ಅಲ್ಲಿಗೆ ಅಭ್ಯಾಸಕ್ಕೆಂದು ಬರುತ್ತಿದ್ದ ಕರ್ನಾಟಕದ ಕ್ರಿಕೆಟಿಗರಿಗೆ ಚೆಂಡೆಸೆಯುವುದು, ಬೌಲಿಂಗ್ ಮಷಿನ್ನಲ್ಲಿ ಅಭ್ಯಾಸ ಮಾಡಿಸುವುದು ರಾಘವೇಂದ್ರನ ಕೆಲಸವಾಗಿತ್ತು. ಹೀಗೇ ಒಂದು ದಿನ ಕರ್ನಾಟಕ ಮಾಜಿ ವಿಕೆಟ್ ಕೀಪರ್, ಹಾಲಿ ಅಂಡರ್-19 ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ತಿಲಕ್ ನಾಯ್ಡು ಅವರ ಕಣ್ಣಿಗೆ ಬೀಳುತ್ತಾರೆ. ರಾಘವೇಂದ್ರನ ಕೆಲಸವನ್ನು ನೋಡಿದ ತಿಲಕ್ ನಾಯ್ಡು, ರಾಜ್ಯದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರಿಗೆ ಪರಿಚಯಿಸುತ್ತಾರೆ. ಅದು ರಾಘವೇಂದ್ರನ ಬದುಕಿಗೆ ಸಿಕ್ಕ ದೊಡ್ಡ ತಿರುವು. ಹುಡುಗನ ಪ್ರಾಮಾಣಿಕತೆಯನ್ನು ಗಮನಿಸಿದ ಶ್ರೀನಾಥ್, ಕರ್ನಾಟಕ ರಣಜಿ ತಂಡದ ಜೊತೆ ಇದ್ದು ಬಿಡು ಎಂದು ಅಲ್ಲಿಗೆ ಕರೆ ತಂದು ಸೇರಿಸುತ್ತಾರೆ. ಕ್ರಿಕೆಟ್ ಸೀಸನ್ನಲ್ಲಿ ಕರ್ನಾಟಕ ತಂಡದ ಜೊತೆ ಕೆಲಸ.. ಇಲ್ಲಿ ಕೆಲಸವಿಲ್ಲದಿದ್ದಾಗ ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲೇ ಇರುವ National Cricket Academyಯಲ್ಲಿ ಕೆಲಸ. ನೆನಪಿರಲಿ.. ಈ ರೀತಿ 3-4 ವರ್ಷ ಒಂದು ಪೈಸೆ ದುಡ್ಡು ಪಡೆಯದೆ ಕೆಲಸ ಮಾಡಿದ್ದರು ರಾಘವೇಂದ್ರ. ಕೈಯಲ್ಲಿ ದುಡ್ಡಿಲ್ಲದ ಕಾರಣ ಎಷ್ಟೋ ದಿನ ಊಟವಿಲ್ಲದೆ ರಾತ್ರಿ ಕಳೆದದ್ದೂ ಇದೆ. NCAನಲ್ಲಿದ್ದಾಗ ಬಿಸಿಸಿಐ level-1 ಕೋಚಿಂಗ್ ಕೋರ್ಸ್ ಪೂರ್ತಿಗೊಳಿಸುತ್ತಾರೆ. NCAಗೆ ಬರುತ್ತಿದ್ದ ಭಾರತ ತಂಡದ ಕ್ರಿಕೆಟಿಗರಿಗೆ ಅಭ್ಯಾಸ ಮಾಡಿಸುತ್ತಾ ಅವರ ನೆಚ್ಚಿನ ಹುಡುಗನಾಗಿ ಬಿಡುತ್ತಾರೆ. ರಾಘವೇಂದ್ರನ ಪ್ರತಿಭೆಯನ್ನು ಸಚಿನ್ ತೆಂಡೂಲ್ಕರ್ ಬೇಗನೆ ಗುರುತಿಸುತ್ತಾರೆ. ಪರಿಣಾಮ 2011ರಲ್ಲಿ ಭಾರತ ತಂಡಕ್ಕೆ ಟ್ರೈನಿಂಗ್ ಅಸಿಸ್ಟೆಂಟ್ ಆಗಿ ರಾಘವೇಂದ್ರ ಸೇರಿಕೊಳ್ಳುತ್ತಾರೆ. ಕಳೆದ 13 ವರ್ಷಗಳಿಂದ ಭಾರತ ತಂಡದ ಜೊತೆ ಇರುವ ರಾಘವೇಂದ್ರ ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸುತ್ತಾ ಬಂದಿದ್ದಾರೆ. ರಾಘವೇಂದ್ರನ ನಿರಂತರ ಪರಿಶ್ರಮಕ್ಕೆ ಸಿಕ್ಕ ದೊಡ್ಡ ಪ್ರತಿಫಲವೇ ಈ ಟಿ20 ವಿಶ್ವಕಪ್.
ರಾಘವೇಂದ್ರ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ಶುಬ್ಮನ್ ಗಿಲ್ ಸೇರಿದಂತೆ ಟೀಂ ಇಂಡಿಯಾದ ಪ್ರತಿಯೊಬ್ಬ ಬ್ಯಾಟ್ಸ್ಮನ್ ಗೂ ಇವರೇ ಶಕ್ತಿ. ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳ ಪಾಲಿನ ಬೌಲಿಂಗ್ ಮಷೀನ್ ಅಂದ್ರೆ ಕನ್ನಡಿಗ ರಾಘವೇಂದ್ರ. ಕಳೆದ ಹಲವು ವರ್ಷಗಳಿಂದ ಭಾರತೀಯ ತಂಡದ ಥ್ರೋಡೌನ್ ಸ್ಪೆಷಲಿಸ್ಟ್ ಆಗಿದ್ದಾರೆ. ವಿರಾಟ್ ಕೊಹ್ಲಿಯಂತೂ ರಾಘವೇಂದ್ರ ಥ್ರೋಡೌನ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ರು. ಅಷ್ಟೇ ಅಲ್ಲ, ತನ್ನ ಬ್ಯಾಟಿಂಗ್ ಹಿಂದಿರೋ ಶಕ್ತಿಯೇ ರಘು. ನನ್ನ ಯಶಸ್ಸಿನ ಹಿಂದಿರೋ ಆ ಹೀರೋ ಜಗತ್ತಿನ ಕಣ್ಣಿಗೆ ಕಾಣಿಸುತ್ತಿಲ್ಲ ಎಂದಿದ್ದರು. ಆ್ಯಕ್ಚುವಲಿ ಥ್ರೋಡೌನ್ ಅನ್ನೋದು ಕೂಡ ಒಂದು ಕಲೆಯೇ. ರಘು ಮಾದರಿಯಲ್ಲಿ ಥ್ರೋಡೌನ್ ಮಾಡೋದು ಅಷ್ಟೊಂದು ಸುಲಭ ಇಲ್ಲ ಮತ್ತು ಎಲ್ಲರಿಗೂ ಸಾಧ್ಯವಿಲ್ಲ. ಇದೇ ಕಾರಣಕ್ಕೆ ರಾಘವೇಂದ್ರರದ್ದು ಗೋಲ್ಡನ್ ಆರ್ಮ್ ಅಂತಾನೆ ಹೇಳಲಾಗುತ್ತೆ. ಇಲ್ಲಿ ಇನ್ನೊಂದು ವಿಚಾರವನ್ನ ಹೇಳಲೇಬೇಕು. ರಾಘವೇಂದ್ರ ಅವರು ನೆಟ್ಸ್ನಲ್ಲಿ ಎಲ್ಲಾ ಬ್ಯಾಟ್ಸ್ಮನ್ಗಳಿಗೂ ಗಂಟೆಗಟ್ಟಲೆ ನಿರಂತವಾಗಿ ಬಾಲ್ ಎಸೆಯಲೇಬೇಕು. 140-150 ಕಿಲೋ ಮೀಟರ್ ಸ್ಪೀಡ್ನಲ್ಲಿ ಪ್ರತಿ ಬಾಲ್ ಎಸೆಯೋದು ಅಂದ್ರೆ ಸುಮ್ನೆ ಅಲ್ವಲ್ಲಾ. ಬಲಗೈನಲ್ಲಿ ಬಾಲ್ ಎಸೆಯೋ ರಘು ಕೈ ಮೇಲೆ ಎಷ್ಟು ಪ್ರೆಷರ್ ಬೀಳುತ್ತೆ ಅಂದರೆ ಊಹಿಸ್ಕೊಳ್ಳೋಕೂ ಸಾಧ್ಯವಿಲ್ಲ. ಮಹೇಂದ್ರ ಸಿಂಗ್ ಧೋನಿ ಕ್ಯಾಪ್ಟನ್ ಆಗಿದ್ದಾಗಲೇ ರಘು ಟೀಂ ಇಂಡಿಯಾದ ಥ್ರೋಡೌನ್ ಸ್ಪೆಷಲಿಸ್ಟ್ ಆಗಿ ತಂಡಕ್ಕೆ ಸೇರ್ಪಡೆಯಾಗಿದ್ರು. ಧೋನಿ ಕೂಡ ರಾಘವೇಂದ್ರ ಥ್ರೋಡೌನ್ ಸ್ಪೆಷಾಲಿಟಿಯನ್ನ ಮೆಚ್ಚಿ ಕೊಂಡಾಡಿದ್ದಾರೆ.
2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ-20 ವರ್ಲ್ಡ್ಕಪ್ ವೇಳೆ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಬೌಲಿಂಗ್ ಮಾಡಿ ಟೀಂ ಇಂಡಿಯಾ ಮ್ಯಾಚ್ ಗೆದ್ದ ಬಳಿಕ ಕ್ಯಾಪ್ಟನ್ ರೋಹಿತ್ ಥ್ರೋಡೌನ್ ಎಕ್ಸ್ಪರ್ಟ್ ರಾಘವೇಂದ್ರಗೂ ಥ್ಯಾಂಕ್ಸ್ ಹೇಳಿದ್ರು. ಗೆಲುವಿನ ಕ್ರೆಡಿಟ್ನ್ನ ರಾಘು ಅವರಿಗೂ ಕೊಟ್ಟಿದ್ರು. ಯಾಕಂದ್ರೆ ಟೀಂ ಇಂಡಿಯಾ ಬೌಲಿಂಗ್ ಮಾಡೋ ವೇಳೆ ಗ್ರೌಂಡ್ನಲ್ಲಿ ಸಾಕಷ್ಟು ಡ್ಯೂ ಇತ್ತು. ಹೀಗಾಗಿ ಗ್ರೌಂಡ್ನ ಹುಲ್ಲು, ಮಣ್ಣು ನಮ್ಮ ಬೌಲರ್ಸ್, ಫೀಲ್ಡರ್ಸ್ ಶೂವಿಗೆ ಅಂಟಿಕೊಳ್ತಿತ್ತಿತ್ತು. ಇದ್ರಿಂದಾಗಿ ರನ್ನಿಂಗ್ ಮಾಡೋವಾಗ ಗ್ರಿಪ್ ಸಿಗೋದಿಲ್ಲ. ಸ್ಕಿಡ್ ಆಗಿ ಬೀಳೋ ಸಾಧ್ಯತೆ ಹೆಚ್ಚಿರುತ್ತೆ. ಇದನ್ನ ಅರಿತುಕೊಂಡಿದ್ದ ರಾಘವೇಂದ್ರ ಮ್ಯಾಚ್ ಮುಗಿಯೋವರೆಗೂ ಬ್ರೆಷ್ ಮೂಲಕ ಪ್ಲೇಯರ್ಸ್ ಶೂವಿನ ಅಡಿ ಭಾಗವನ್ನ ಕ್ಲೀನ್ ಮಾಡುತ್ತಲೇ ಇದ್ರು. ಬೌಂಡರಿ ಲೈನ್ ನಲ್ಲಿ ನಿಂತುಕೊಂಡು ಈ ಕೆಲಸ ಮಾಡ್ತಿದ್ರು. ಈಗಲೂ ಆ ಕೆಲಸ ಶೃದ್ಧೆಯಿಂದ ಮಾಡ್ತಾರೆ.
ಇನ್ನು ರಾಘವೇಂದ್ರರನ್ನ ಭಾರತ ಕ್ರಿಕೆಟ್ ತಂಡದ ಬೆನ್ನೆಲುಬು ಎಂದು ಕರೆಯಲು ಕಾರಣವಿದೆ. ಕಳೆದ 13 ವರ್ಷಗಳಲ್ಲಿ ಭಾರತ ತಂಡಕ್ಕಾಗಿ ರಕ್ತವನ್ನೇ ಬಸಿದವರು ಯಾರಾದರೂ ಇದ್ದರೆ ಅದು ರಾಘವೇಂದ್ರ. ಕಳೆದೊಂದು ದಶಕದಲ್ಲಿ ಭಾರತ ತಂಡದ ಅಭ್ಯಾಸದ ವೇಳೆ ಕನಿಷ್ಠ 10 ಲಕ್ಷ ಚೆಂಡುಗಳನ್ನು ಎಸೆದಿರಬಹುದು. ರಾಘವೇಂದ್ರನ ರಟ್ಟೆಯ ಬಲದಿಂದ ನುಗ್ಗಿ ಬರುವ ಆ ಎಸೆತಗಳನ್ನು ಎದುರಿಸಲು ಸಾಧಾರಣ ಧೈರ್ಯ ಸಾಲದು. 150 ಕಿಲೋ ಮೀಟರ್ ವೇಗದಲ್ಲಿ ಬಂದಪ್ಪಳಿಸುವ ಮಿಂಚಿನ ವೇಗದ ಚೆಂಡುಗಳವು. Side arm ಎಂಬ ಸಾಧನ ರಘು ಕೈಯಲ್ಲಿದ್ದಾಗ ಇವನಷ್ಟು ವೇಗದಲ್ಲಿ ಚೆಂಡೆಸೆಯುವ ಮತ್ತೊಬ್ಬ ಥ್ರೋಡೌನ್ ತಜ್ಞ ಜಗತ್ತಿನಲ್ಲೇ ಇಲ್ಲ. ವಿರಾಟ್, ರೋಹಿತ್ ರಂತಹ ಆಟಗಾರರ ಶಕ್ತಿ ಮತ್ತು ತಾಕತ್ತು. ಆ ಶಕ್ತಿ-ತಾಕತ್ತಿಗೆ ಪರಿಪೂರ್ಣತೆ ತಂದುಕೊಟ್ಟವನು ನಮ್ಮ ಕನ್ನಡಿಗ ರಾಘವೇಂದ್ರ. ರಘು ಥ್ರೋಡೌನ್ನಿಂದ ಇಂಪ್ರೆಸ್ ಆಗಿದ್ದ ಮತ್ತೊಬ್ಬ ಆಟಗಾರ ಗಾಡ್ ಆಫ್ ದಿ ಕ್ರಿಕೆಟ್ ಸಚಿನ್ ತೆಂಡೂಲ್ಕರ್. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಮ್ಮ ಬ್ಯಾಟಿಂಗ್ ಪ್ರಾಕ್ಟೀಸ್ಗೆ ಅಂತಾ ಅದೆಷ್ಟೋ ಬಾರಿ ರಾಘವೇಂದ್ರರನ್ನ ಮುಂಬೈಗೆ ಕರೆಸಿಕೊಂಡಿದ್ದರು. ರಾಘವೇಂದ್ರ ಅವರು ತುಂಬಾ ಸರಳ ಮತ್ತು ಸಜ್ಜನಿಕೆ ವ್ಯಕ್ತಿ. ಯಾವಾಗಲೂ ಹಣೆಗೆ ಕುಂಕುಮ ಧರಿಸ್ತಾರೆ. ಹಣೆಯಲ್ಲಿರುವ ಕುಂಕಮವೇ ರಘು ಅವರ ಮತ್ತೊಂದು ಐಡೆಂಟಿಟಿ. ಟೀಂ ಇಂಡಿಯಾದ ಜೊತೆಗಿದ್ದಾಗ ರಘು ಯಾವಾಗಲೂ ಆ್ಯಕ್ಟೀವ್ ಆಗಿಯೇ ಇರ್ತಾರೆ. 2023ರಲ್ಲಿ ಟೀಂ ಇಂಡಿಯಾ ಏಷ್ಯಾಕಪ್ ಗೆದ್ದಾಗ ಕ್ಯಾಪ್ಟನ್ ರೋಹಿತ್ ಶರ್ಮಾ ಟ್ರೋಫಿಯನ್ನ ರಾಘವೇಂದ್ರ ಕೈಗೆ ಕೊಟ್ಟಿದ್ರು. ಗ್ರೂಪ್ ಫೋಟೋ ವೇಳೆ ರಘು ಟ್ರೋಫಿಯನ್ನ ಎತ್ತಿ ಹಿಡಿದು ಸಂಭ್ರಮಿಸಿದ್ರು. ಇದೀಗ ಟೀಂ ಇಂಡಿಯಾ ಟಿ20 ವಿಶ್ವಕಪ್ ಎತ್ತಿಹಿಡಿದಿದೆ. ಈ ಚಾಂಪಿಯನ್ ಟ್ರೋಫಿ ಕೂಡಾ ಆಟಗಾರರು ಪ್ರೀತಿಯಿಂದ ರಾಘವೇಂದ್ರ ಕೈಯಲ್ಲಿಟ್ಟು ಸಂಭ್ರಮಿಸಿದ್ದಾರೆ. ಅದ್ರಲ್ಲೂ ಕ್ಯಾಪ್ಟನ್ ರೋಹಿತ್ ಶರ್ಮಾ ರಘು ಕೈಯಲ್ಲಿ ಟ್ರೋಫಿ ಇಟ್ಟು ಧನ್ಯವಾದ ಹೇಳಿದ್ದಾರೆ. ಯಾಕೆಂದ್ರೆ, ಈ ಬಾರಿಯ ಟಿ20 ವಿಶ್ವಕಪ್ ಪಂದ್ಯಗಳಲ್ಲಿ ವೇಗದ ಅಸ್ತ್ರಗಳನ್ನೇ ಭಾರತೀಯ ಬ್ಯಾಟರ್ಗಳು ಲೀಲಾಜಾಲವಾಗಿ ಚೆಂಡಾಡಿದರು. ಅದರಲ್ಲೂ ಶಾಹೀನ್ ಹಾಗೂ ಮಿಚೆಲ್ ಸ್ಟಾರ್ಕ್ ಎಸೆತಗಳಲ್ಲಿ ಹಿಟ್ಮ್ಯಾನ್ ಬಾರಿಸಿದ ಫ್ಲಿಕ್ ಸಿಕ್ಸ್ ಸದ್ಯಕ್ಕಂತು ಮರೆಯಲು ಸಾಧ್ಯವಿಲ್ಲ. ಇನ್ನು ಪಾಂಡ್ಯ ಪವರ್, ಅಕ್ಷರ್ ಸಿಕ್ಸರ್ ಅಂತು ಪ್ರೇಕ್ಷಕರನ್ನು ನಿಬ್ಬೆರಗಾಗಿಸಿದ್ದು ಸುಳ್ಳಲ್ಲ. ಇದರ ಹಿಂದಿದ್ದ ತೋಳ್ಬಲ ಕೂಡಾ ರಾಘವೇಂದ್ರ ಅವರದ್ದೇ. ನಮ್ಮ ಬ್ಯಾಟ್ಸ್ಮನ್ಗಳ ಸೆಂಚೂರಿ, ರನ್ಗಳ ಹಿಂದೆ ಇರುವ ಮಾಂತ್ರಿಕನೇ ನಮ್ಮ ಕನ್ನಡಿಗ ರಾಘವೇಂದ್ರ.