ಉರುಳುತ್ತಿದೆ ಇಮ್ರಾನ್ ಖಾನ್ ಪಕ್ಷದ ನಾಯಕರ ವಿಕೆಟ್ – ಪಿಟಿಐಗೆ ಮೂವರು ನಾಯಕರು ಗುಡ್ ಬೈ
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಾಲು ಸಾಲು ಕೇಸ್‌ಗಳಿಂದ ಕಾನೂನು ಸುಳಿಯಲ್ಲಿ ಸಿಲುಕಿದ್ದಾರೆ. ಇದರ ಬೆನ್ನಲ್ಲೇ ಇಮ್ರಾನ್ ಖಾನ್ ಪಕ್ಷದ ನಾಯಕರು ಒಬ್ಬೊಬ್ಬರಾಗಿಯೇ ರಾಜೀನಾಮೆ ನೀಡ್ತಿದ್ದಾರೆ. 24 ಗಂಟೆ ಅವಧಿಯಲ್ಲಿ ಪಿಟಿಐನ ಮೂವರು ನಾಯಕರು ಪಕ್ಷ ತೊರೆದಿದ್ದಾರೆ. ಮೇ 9ರಂದು ಇಮ್ರಾನ್ ಖಾನ್ ಬೆಂಬಲಿಗರು ದೇಶಾದ್ಯಂತ ಹಿಂಸಾಚಾರ ನಡೆಸಿದ್ದನ್ನ ಖಂಡಿಸಿ ಮೂವರು ನಾಯಕರು ಪಿಟಿಐಗೆ ಗುಡ್‌ಬೈ ಹೇಳಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ತಾರಕಕ್ಕೇರಿದ ಬೆಂಬಲಿಗರ ಹಿಂಸಾಚಾರ – ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಜಾಮೀನು
ಇದೀಗ ಇಮ್ರಾನ್ ಪಕ್ಷ ಮುಳುಗುತ್ತಿರುವ ಟೈಟಾನಿಕ್ ಹಡಗಿನಂತಾಗಿದೆ. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಎಲ್ಲರೂ ಜಂಪ್ ಮಾಡುತ್ತಿದ್ದಾರೆ ಅಂತಾನೆ ಬಣ್ಣಿಸಲಾಗುತ್ತಿದೆ. ಆದ್ರೆ ಇಮ್ರಾನ್ ಖಾನ್ ಮಾತ್ರ ಗುಲಾಮನಾಗೋದಕ್ಕಿಂತ ಸಾವೇ ಲೇಸು ಅಂತಾ ಹೋರಾಟ ಮುಂದುವರಿಸಿದ್ದಾರೆ. ದೇಶಾದ್ಯಂತ 100ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿರುವ ಇಮ್ರಾನ್ ಖಾನ್, ತಮ್ಮ ಪಿಟಿಐ ಪಕ್ಷವನ್ನು ಅಸ್ಥಿರಗೊಳಿಸಲು ಸರಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ನಮ್ಮ ಪಕ್ಷವನ್ನು ಅಸ್ಥಿರಗೊಳಿಸುವುದಷ್ಟೇ ಅಲ್ಲ, ಇದರ ಜತೆಗೆ ಪ್ರಜಾಪ್ರಭುತ್ವ ಹಾಗೂ ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತಿದೆ” ಎಂದು ಇಮ್ರಾನ್ ಟ್ವಿಟರ್‌ನಲ್ಲಿ ಕಿಡಿಕಾರಿದ್ದಾರೆ. ಬಲವಂತದಿಂದ ನಮ್ಮ ಪಕ್ಷದ ಸದಸ್ಯರು ಪಕ್ಷ ತೊರೆಯುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಆಪಾದಿಸಿದ್ದಾರೆ.
ಈ ನಡುವೆ ಇಮ್ರಾನ್ ವಿದೇಶ ಪ್ರವಾಸಕ್ಕೆ ಪಾಕ್ ಸರ್ಕಾರ ಕಡಿವಾಣ ಹಾಕಿದೆ. ಅಷ್ಟೇ ಅಲ್ಲ, ಪಿಟಿಐ ಪಕ್ಷದ ನಾಯಕರು, ಇಮ್ರಾನ್ ಬೆಂಬಲಿಗರು ಸೇರಿ 600ಕ್ಕೂ ಅಧಿಕ ಮಂದಿ ದೇಶ ಬಿಟ್ಟು ತೆರಳದಂತೆ ಪಾಕ್ ಸರ್ಕಾರ ತಡೆಯೊಡ್ಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇಮ್ರಾನ್ ಖಾನ್, ದೇಶ ಬಿಟ್ಟು ಹೋಗೋಕೆ ವಿದೇಶಗಳನ್ನ ನನಗೆ ಯಾವುದೇ ಆಸ್ತಿ, ಬ್ಯುಸಿನೆಸ್, ಬ್ಯಾಂಕ್ ಅಕೌಂಟ್ ಕೂಡ ಇಲ್ಲ ಅಂತಾ ಲಂಡನ್‌ನಲ್ಲಿ ಬೀಡುಬಿಟ್ಟಿರುವ ಪ್ರಧಾನಿ ಶೆಹಬಾಜ್ ಷರೀಫ್ ಸಹೋದರ ನವಾಜ್ ಷರೀಫ್‌ಗೆ ಟಾಂಗ್ ಕೊಟ್ಟಿದ್ದಾರೆ.