ನೂತನ ಶಾಸಕರಿಗೆ ಮೂರು ದಿನಗಳ ತರಬೇತಿ ಶಿಬಿರ – ಹಿರಿಯ ರಾಜಕಾರಣಿಗಳಿಂದ ‘ಪಾಲಿಟಿಕ್ಸ್’ ಪಾಠ

ನೂತನ ಶಾಸಕರಿಗೆ ಮೂರು ದಿನಗಳ ತರಬೇತಿ ಶಿಬಿರ – ಹಿರಿಯ ರಾಜಕಾರಣಿಗಳಿಂದ ‘ಪಾಲಿಟಿಕ್ಸ್’ ಪಾಠ

ವಿಧಾನಸಭೆ ಪ್ರವೇಶಿಸುವ ಹೊಸ ಶಾಸಕರಿಗೆ ಮೂರು ದಿನಗಳ ತರಬೇತಿ ಶಿಬಿರ ಆಯೋಜಿಸಲಾಗಿದೆ. ಜೂ. 26 ರಿಂದ 28ರವರೆಗೆ ಮೂರು ದಿನಗಳ ಕಾಲ ತರಬೇತಿ ಶಿಬಿರ ಆಯೋಜಿಸಲಾಗಿದೆ. ಬೆಂಗಳೂರಿನ ನೆಲಮಂಗಲದ ಸಮೀಪ ಇರುವ ಧರ್ಮಸ್ಥಳ ಕ್ಷೇಮವನದಲ್ಲಿ ಸೋಮವಾರದಿಂದಲೇ ತರಬೇತಿ ಶಿಬಿರ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತರಬೇತಿ ಶಿಬಿರವನ್ನು ಉದ್ಘಾಟಿಸಿದರು. ವಿಧಾನಸಭೆ ಸಭಾಪತಿ ಯು.ಟಿ.ಖಾದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು.

ಇದನ್ನೂ ಓದಿ: ಬೇಳೆಕಾಳು ಬಲು ತುಟ್ಟಿ! – ಬೆಲೆ ಏರಿಕೆಗೆ ಜನಸಾಮಾನ್ಯರು ಹೈರಾಣು

ತರಬೇತಿ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಪಾಲ್ಗೊಳ್ಳಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಇಂಧನ ಸಚಿವ ಕೆ.ಜೆ.ಜಾರ್ಜ್, ವಸತಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಭಾಗಿಯಾಗಲಿದ್ದಾರೆ. ಹಾಗೇ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ, ಜಮಾತೆ ಇಸ್ಲಾಮಿ ಹಿಂದ್‌ನ ಮಹಮದ್ ಕುಂ ಸೇರಿದಂತೆ ವಿವಿಧ ಧಾರ್ಮಿಕ ಗುರುಗಳಿಂದ ಸ್ಪೂರ್ತಿದಾಯಕ ಭಾಷಣವೂ ಇರಲಿದೆ. ಈ ಬಾರಿ ವಿಧಾನಸಭೆಗೆ ಮೊದಲಬಾರಿ ಆಯ್ಕೆಯಾಗಿರುವ ಸುಮಾರು 70 ಶಾಸಕರು ತರಬೇತಿ ಪಡೆಯಲಿದ್ದಾರೆ. ಬೆಳಗ್ಗೆ 6ರಿಂದ ಬೆಳಗ್ಗೆ 9ರವರೆಗೆ ಆರೋಗ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆಯಲಿವೆ. ಬೆಳಗ್ಗೆ 10 ರಿಂದ ಸಂಜೆಯವರೆಗೆ ಹಿರಿಯ ಸದಸ್ಯರು ಶಿಬಿರದಲ್ಲಿ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಿದ್ದಾರೆ. ಮೂರು ದಿನಗಳ ಕಾಲ ಪ್ರತಿದಿನ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ನೂತನ ಶಾಸಕರಿಗೆ ಸಂವಾದ ಏರ್ಪಡಿಸಲಾಗಿದೆ. ಶಾಸಕರ ಹಕ್ಕುಗಳು ಮತ್ತು ಕರ್ತವ್ಯಗಳು, ಶಾಸನಗಳ ರಚನೆ ಮತ್ತು ಸದಸ್ಯರ ಭಾಗವಹಿಸುವಿಕೆ, ಶೂನ್ಯವೇಳೆ, ಪ್ರಶ್ನೋತ್ತರ, ಜನಮೆಚ್ಚಿಸುವ ಶಾಸಕನಾಗುವುದು ಹೇಗೆ, ವಿಧಾನಮಂಡಲದ ಸಮಿತಿಗಳು ಮತ್ತು ಸದಸ್ಯರ ಭಾಗವಹಿಸುವಿಕೆ ಸೇರಿದಂತೆ ವಿಧಾನಮಂಡಲದ ಕಾರ್ಯಕಲಾಪಗಳು ಮತ್ತು ಶಾಸಕರ ಜವಾಬ್ದಾರಿಗಳ ಕುರಿತು ಹಿರಿಯ ಸದಸ್ಯರು ತರಬೇತಿ ಶಿಬಿರದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

suddiyaana