ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 3 ಮರಿಗಳಿಗೆ ಜನ್ಮ ನೀಡಿದ ಚೀತಾ
ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಿಂದ ಗುಡ್‌ನ್ಯೂಸ್‌ವೊಂದಿದೆ. ನಮೀಬಿಯಾದಿಂದ ಕರೆತರಲಾಗಿದ್ದ ಚೀತಾವೊಂದು ಉದ್ಯಾನವನದಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದೆ.
ಈ ಬಗ್ಗೆ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಜ್ವಾಲಾ ಎಂಬ ಹೆಸರಿನ ಚಿರತೆ ಮೂರು ಮರಿಗಳಿಗೆ ಜನ್ಮ ನೀಡಿದೆ. ಕೆಲ ವಾರಗಳ ಹಿಂದೆಯಷ್ಟೇ ನಮೀಬಿಯಾದ ಚಿರತೆ ಆಶಾ ತನ್ನ ಮರಿಗಳಿಗೆ ಜನ್ಮ ನೀಡಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ಹರಿದುಬಂತು ಭಕ್ತಸಾಗರ – ರಾಮನ ದರ್ಶನಕ್ಕೆ ನೂಕುನುಗ್ಗಲು
ಚಿರತೆ ಮರಿಗಳ ವಿಡಿಯೋವನ್ನು ಕೂಡ ಸಚಿವರು ಪೋಸ್ಟ್ ಮಾಡಿದ್ದಾರೆ. ಕೇಂದ್ರ ಸಚಿವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುತ್ತಿದ್ದಂತೆಯೇ ವನ್ಯಜೀವಿ ಪ್ರೇಮಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂತು. ಚೀತಾ ಸಂತತಿ ಇನ್ನಷ್ಟು ಹೆಚ್ಚಾಗಲಿ ಎಂದು ಆಶಿಸಿದರು.
ಚೀತಾ ಯೋಜನೆಯಡಿ ತಾಯಿ ಚಿರತೆ ಜ್ವಾಲಾ ಸೇರಿದಂತೆ 8 ಚಿರತೆಗಳನ್ನು 2022 ರ ಸೆಪ್ಟೆಂಬರ್ 17 ರಂದು ನಮೀಬಿಯಾದಿಂದ ತರಲಾಯಿತು. ಜನವರಿ 16 ರಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದ ಚಿರತೆ ಶೌರ್ಯ ಸಾವನ್ನಪ್ಪಿತ್ತು. ಮಾರ್ಚ್ 2023 ರಿಂದ ಶೌರ್ಯ ಸೇರಿದಂತೆ 7 ಚಿರತೆಗಳು ಮತ್ತು 3 ಮರಿಗಳು ಕೆಎನ್‌ಪಿಯಲ್ಲಿ ವಿವಿಧ ಕಾರಣಗಳಿಂದ ಸಾವನ್ನಪ್ಪಿವೆ. ಈ ಮೂಲಕ ಕುನೋದಲ್ಲಿ ಚಿರತೆಗಳ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿತ್ತು.