ರಾಜ್ಯದ ಮೂವರು ಬಿಜೆಪಿ ನಾಯಕರಿಗೆ ಹೈಕಮಾಂಡ್ ಬುಲಾವ್!
ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ. ಚುನಾವಣೆ ಫಲಿತಾಂಶ ಬಂದು ಆರು ತಿಂಗಳಾದರೂ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ಇನ್ನೂ ಆಗಿಲ್ಲ. ಇನ್ನು ನಾಲ್ಕೈದು ತಿಂಗಳಲ್ಲಿ ಕೇಂದ್ರದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಇದೀಗ ರಾಜ್ಯ ಬಿಜೆಪಿ ನಾಯಕರನ್ನು ದೆಹಲಿ ನಾಯಕರು ಕಡೆಗಣಿಸುತ್ತಿದ್ದಾರೆ ಎಂಬ ಆರೋಪಗಳು ಈಗ ಹೊಸದಾಗಿ ಕೇಳಿಬರುತ್ತಿದ್ದು, ಇವುಗಳ ಮಧ್ಯೆ ನಡೆದ ಮತ್ತೊಂದು ಬೆಳವಣಿಗೆ ನಡೆದಿದೆ. ರಾಜ್ಯದ ಮೂವರು ಬಿಜೆಪಿ ನಾಯಕರನ್ನು ದೆಹಲಿಗೆ ಬರುವಂತೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ.
ಇದನ್ನೂ ಓದಿ: ಕೇರಳ ಬಳಿಕ ರಾಜ್ಯಕ್ಕೂ ಕಾಲಿಟ್ಟ ಮಹಾಮಾರಿ! – ಚಿಕ್ಕಬಳ್ಳಾಪುರದಲ್ಲಿ `ಝೀಕಾ ವೈರಸ್’ ಪತ್ತೆ
ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಎಂಎಲ್‌ಸಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ಪಿಸಿ ಮೋಹನ್‌ಗೆ ಬಿಜೆಪಿ ಹೈಕಮಾಂಡ್‌ನಿಂದ ಬುಲಾವ್ ಬಂದಿದೆ. ಇದರಂತೆ ಈ ಮೂವರು ನಾಯಕರು ಇಂದು ದೆಹಲಿಗೆ ತೆರಳಲಿದ್ದಾರೆ. ಇಂದು ಅಪರಾಹ್ನ 3.30ಕ್ಕೆ ಬಿಜೆಪಿ ಕಚೇರಿಯಲ್ಲಿ ಭೇಟಿಯಾಗಲು ಮೂವರೂ ನಾಯಕರಿಗೆ ಸೂಚನೆ ನೀಡಲಾಗಿದೆ. ಕಳೆದ ವಾರ ಮಾಜಿ ಸಿಎಂ ಡಿವಿ ಸದಾನಂದ ಗೌಡರನ್ನು ದೆಹಲಿಗೆ ಕರೆಸಿಕೊಂಡಿದ್ದ ಬಿಜೆಪಿ ಹೈಕಮಾಂಡ್, ಕೊನೆಯ ಕ್ಷಣದಲ್ಲಿ ಭೇಟಿ ಮಾಡದೆ ವಾಪಸ್ ಕಳುಹಿಸಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗುವುದಕ್ಕಾಗಿ ಸದಾನಂದ ಗೌಡರು ದೆಹಲಿಗೆ ತೆರಳಿದ್ದರು.
ಈ ಮಧ್ಯೆ, ಹೈಕಮಾಂಡ್‌ನಿಂದ ಕರೆ ಬಂದಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ದೆಹಲಿಗೆ ಹೋಗುತ್ತಿದ್ದೇನೆ. ನನ್ನ ಜೊತೆಗೆ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಪಿ.ಸಿ. ಮೋಹನ್ ಅವರಿಗೂ ಬರಲು ಹೇಳಿದ್ದಾರೆ. ಯಾಕೆ ಕರೆದಿದ್ದಾರೆ ಗೊತ್ತಿಲ್ಲ. ಅಲ್ಲಿಗೆ ಹೋದ ಮೇಲೆ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಈ ಬೆಳವಣಿಗೆ ಮಧ್ಯೆಯೇ ಇಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಸುದ್ದಿಗೋಷ್ಠಿ ಕರೆದಿದ್ದು, ಅದರಲ್ಲಿ ಯಾವ್ಯಾವ ವಿಷಯಗಳನ್ನು ಪ್ರಸ್ತಾಪಿಸಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.