ಅಭ್ಯರ್ಥಿ ಹೆಸರೇ ಗೊತ್ತಿಲ್ಲ ಎಂದಿದ್ದವರು ಈಗ ನನ್ನ ಮಗ ಅನ್ನುತ್ತಿದ್ದಾರೆ – ಭವಾನಿ ರೇವಣ್ಣಗೆ ಪ್ರೀತಂ ಗೌಡ ಟಾಂಗ್

ಅಭ್ಯರ್ಥಿ ಹೆಸರೇ ಗೊತ್ತಿಲ್ಲ ಎಂದಿದ್ದವರು ಈಗ ನನ್ನ ಮಗ ಅನ್ನುತ್ತಿದ್ದಾರೆ – ಭವಾನಿ ರೇವಣ್ಣಗೆ ಪ್ರೀತಂ ಗೌಡ ಟಾಂಗ್

ಹಾಸನ: ಸ್ವರೂಪ್ ನನ್ನ ಮಗ. ಅವನನ್ನು ಗೆಲ್ಲಿಸುವುದೇ ನನ್ನ ಗುರಿ ಎಂಬ ಭವಾನಿ ರೇವಣ್ಣ ಹೇಳಿಕೆ ಕುರಿತು ಹಾಸನ ಶಾಸಕ ಪ್ರೀತಂ ಗೌಡ ವ್ಯಂಗ್ಯವಾಡಿದ್ದಾರೆ. ಹಾಸನದಲ್ಲಿ ಅಭ್ಯರ್ಥಿ ಹೆಸರು ಗೊತ್ತಿಲ್ಲ ಅಂತಾ ಹೇಳಿದ್ದವರು ಈಗ ಸ್ವರೂಪ್ ನನ್ನ ಮಗ ಎಂದು ಹೇಳುತ್ತಿದ್ದಾರೆ. ಇದೆಲ್ಲಾ ರಾಜಕಾರಣದಲ್ಲಿ ಸಹಜ. ಈಗ ಅಮ್ಮ, ಮಗ, ತಂದೆ ತಾಯಿ ಎಲ್ಲಾ ನೆನಪಿಗೆ ಬರುತ್ತಾರೆ ಅಂತಾ ಪ್ರೀತಂ ಗೌಡ ಭವಾನಿ ರೇವಣ್ಣ ಗೆ ಟಾಂಗ್ ನೀಡಿದರು.

ಇದನ್ನೂ ಓದಿ:ಸ್ವರೂಪ್ ನನ್ನ ಮಗನಿದ್ದಂತೆ, ಚುನಾವಣೆಯಲ್ಲಿ ಆತನನ್ನೇ ಗೆಲ್ಲಿಸಿ – ಭವಾನಿ ರೇವಣ್ಣ

ಈ ಬಗ್ಗೆ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೀತಂ ಗೌಡ, ಭವಾನಿ ರೇವಣ್ಣ ಅವರ ಪ್ರೀತಿ ಸ್ವರೂಪ್ ಮೇಲೆ ಇರುವುದು ಗೊತ್ತಾಗಿದೆ. ಇಬ್ಬರು ಹೊಂದಾಣಿಕೆ ಮಾಡಿಕೊಂಡಿರುವುದು ಒಳ್ಳೆಯ ಬೆಳವಣಿಗೆ. 2024ಕ್ಕೆ ಅವರ ಮಗ ಎಂಪಿ ಕ್ಯಾಂಡಿಡೇಟ್ ಆಗುವುದರಿಂದ ಅವರು ಈ ಎಲ್ಲಾ ಸರ್ಕಸ್ ಮಾಡಬೇಕಾಗುತ್ತದೆ. ಅವರು ಚುನಾವಣಾ ಪ್ರಚಾರ ಮಾಡುತ್ತಿರುವುದು 2023ರ ಅಭ್ಯರ್ಥಿ ಗೆಲ್ಲಲಿ ಎಂದು ಅಲ್ಲಾ. 1947ರಲ್ಲಿ ಇದೆಲ್ಲಾ ಮಾಡಿದರೆ ಜನರಿಗೆ ಅರ್ಥ ಆಗುತ್ತಿರಲಿಲ್ಲ. ಈಗ ಏನೇ ಮಾಡಿದರೂ ಜನರಿಗೆ ಗೊತ್ತಾಗುತ್ತದೆ. ಅವರು ಒಂದಾಗಿರುವುದು ಅವರ ಪಕ್ಷಕ್ಕೆ ಒಳ್ಳೆಯದು. ಹೀಗೆ ಒಂದಾಗಿದ್ದು ಅವರ ಕಾರ್ಯಕರ್ತರಿಗೆ ಸ್ಫೂರ್ತಿ ನೀಡಲಿ ಎಂದು ವ್ಯಂಗ್ಯವಾಡಿದ್ದಾರೆ.

ಹತಾಶರಾಗಿದ್ದಾರೆ ಎನ್ನುವುದನ್ನು ಜನಸಾಮಾನ್ಯರು ನೋಡುತ್ತಿದ್ದಾರೆ. ನಾನು ಅಭಿವೃದ್ಧಿ ಮಾಡಿರುವುದಾದರೆ ಜನರು ಆಶಿರ್ವಾದಿಸುತ್ತಾರೆ. ಯಾರು ಈ ಬಾರಿ ಯಾರು ಗೆಲ್ಲಬೇಕು ಅಂತಾ ಹಾಸನ ಕ್ಷೇತ್ರದ ಮತದಾರರು ತೀರ್ಮಾನಿಸುತ್ತಾರೆ. ಬೆಳಗ್ಗೆ 10:30ಕ್ಕೆ ಜೆಡಿಎಸ್ ರ್ಯಾಲಿ ಶುರುವಾಗಬೇಕಿತ್ತು. ಅದಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ ಎಂದು ಹೇಳಿದ್ದರು. ಗಂಟೆ 12:30 ಆದರೂ ಸಹ ನೂರು ಜನರು ಕೂಡ ಸೇರಲಿಲ್ಲ. ಅದೇ ನಾನು ರ್ಯಾಲಿ ಮಾಡುತ್ತಿರುವುದು ಒಂದು ವಾರ್ಡ್ ನಲ್ಲಿ. ಜನ ಸಾಮಾನ್ಯರು ಎಷ್ಟು ಬರುತ್ತಿದ್ದಾರೆ ಎಂದು ನೀವೇ ನಿಮ್ಮ ಕಣ್ಣಾರೆ ನೋಡಿ ಎಂದರು.

ಜೆಡಿಎಸ್‌ನವರು ಇಡೀ ನಗರದಲ್ಲಿ ರ್ಯಾಲಿ ಮಾಡುತ್ತೇವೆ ಎಂದು ಹೇಳಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಾಗೂ ಚುನಾವಣೆಯಲ್ಲಿ ಜನ ಯಾರ ಪರ ಇದ್ದಾರೆ ಎನ್ನುವುದು ಮುಖ್ಯ. ಪ್ರಧಾನಿ ನರೇಂದ್ರ ಮೋದಿ, ಸಿದ್ದರಾಮಯ್ಯ, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಶಾಸಕನಾದ ನನಗೂ ಒಂದೇ ವೋಟು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಒಂದೇ ವೋಟು ಇರೋದು. ಜನ ಯಾರ ಪರ ನಿಲ್ಲತ್ತಾರೋ ಅವರು ಜನಪ್ರತಿನಿಧಿಯಾಗುತ್ತಾರೆ. ಯಾರೋ ಒಬ್ಬರು ಹೇಳಿದ ತಕ್ಷಣ ಅದು ಆಗುವುದಿಲ್ಲ. ಜನ ಅದನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೆ ಅನ್ನೋದನ್ನು ಕಾದುನೋಡಬೇಕು ಅಂತಾ ಪ್ರೀತಂ  ಗೌಡ ಹೇಳಿದ್ದಾರೆ.

suddiyaana