ಈ ವರ್ಷದ ಚಾರ್‌ಧಾಮ್‌ ಯಾತ್ರೆ ಮುಕ್ತಾಯ – ಇದೇ ಮೊದಲ ಬಾರಿಗೆ 50 ಲಕ್ಷ ಗಡಿ ದಾಟಿದ ಯಾತ್ರಿಕರ ಸಂಖ್ಯೆ!

ಈ ವರ್ಷದ ಚಾರ್‌ಧಾಮ್‌ ಯಾತ್ರೆ ಮುಕ್ತಾಯ – ಇದೇ ಮೊದಲ ಬಾರಿಗೆ 50 ಲಕ್ಷ ಗಡಿ ದಾಟಿದ ಯಾತ್ರಿಕರ ಸಂಖ್ಯೆ!

ಭಾರತ ಭಕ್ತಿ ಭಾವದ ತವರೂರು. ಸಾವಿರಾರು ವರ್ಷಗಳಿಂದ ಭಾರತದಲ್ಲಿ ಹಿಂದೂ ಸಂಸ್ಕೃತಿ ಇದೆ. ಕೋಟಿಗಟ್ಟಲೆ ಜನರು ಆ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅನುಸರಿಸುತ್ತಿದ್ದಾರೆ ಮತ್ತು ಅವುಗಳನ್ನು ಮುಂದಿನ ಪೀಳಿಗೆಗೂ ವರ್ಗಾಯಿಸುತ್ತಿದ್ದಾರೆ. ಅದರಲ್ಲಿ ಚಾರ್‌ಧಾಮ್‌ ಯಾತ್ರೆಯೂ ಒಂದು. ಭಾರತೀಯರು ಇದನ್ನು ಪವಿತ್ರ ಕಾರ್ಯಕ್ರಮ ಎಂದು ಪರಿಗಣಿಸುತ್ತಾರೆ. ಈ ಯಾತ್ರೆಯಲ್ಲಿ ಭಕ್ತರು ಮುಖ್ಯವಾಗಿ ನಾಲ್ಕು ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಅವುಗಳೆಂದರೆ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳು. ಯಾತ್ರೆಯನ್ನು ಮಾಡುವುದರಿಂದ ಎಲ್ಲಾ ಪಾಪಗಳು ನಿವಾರಣೆಯಾಗುತ್ತದೆ ಮತ್ತು ಆತ್ಮವು ಶುದ್ಧವಾಗುತ್ತದೆ ಎಂದು ಅನೇಕರು ನಂಬುತ್ತಾರೆ. ಹೀಗಾಗಿ ಚಾರ್‌ಧಾಮ್‌ ಯಾತ್ರೆ ಆರಂಭವಾಗುತ್ತಿದ್ದಂತೆ ಲಕ್ಷಾಂತರ ಜನರು ಯಾತ್ರೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆಯುತ್ತಾರೆ. ಈ ವರ್ಷ ಬರೋಬ್ಬರಿ 50 ಲಕ್ಷ ಮಂದಿ ಚಾರ್‌ಧಾಮ್‌  ಯಾತ್ರೆ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಶ್ವವಿಖ್ಯಾತ ಚಾರ್ ಧಾಮ್‌ಗಳಾದ ಬದರಿನಾಥ್, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿಗೆ ಭೇಟಿ ನೀಡಲು ದೇಶ ಮತ್ತು ವಿದೇಶಗಳಿಂದ ದಾಖಲೆ ಸಂಖ್ಯೆಯ ಯಾತ್ರಾರ್ಥಿಗಳು ಇಲ್ಲಿಗೆ ಆಗಮಿಸುತ್ತಿದ್ದಾರೆ ಈವರ್ಷದ ಯಾತ್ರೆಯಲ್ಲಿ ಇಲ್ಲಿಯವರೆಗೆ ಬರೋಬ್ಬರಿ 50 ಲಕ್ಷ ಯಾತ್ರಾರ್ಥಿಗಳು ಯಾತ್ರೆಗೆ ಆಗಮಿಸಿದ್ದಾರೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಮಂದಿ ಭಕ್ತರು ಚಾರ್‌ಧಾಮ್‌ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ತೀರ್ಥರೂಪಿಣಿಯಾಗಿ ಮಧ್ಯರಾತ್ರಿ 1.27ಕ್ಕೆ ಕಾವೇರಿಯ ದರ್ಶನ – ದರ್ಶನ ಪಡೆದ ಸಾವಿರಾರು ಭಕ್ತರು

ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 16 ರವರೆಗೆ ಚಾರ್ ಧಾಮ್‌ಗೆ ಭೇಟಿ ನೀಡಿದ ಯಾತ್ರಿಕರ ಸಂಖ್ಯೆ 50 ಲಕ್ಷ ದಾಟಿದೆ. ಇದರೊಂದಿಗೆ ಸುಮಾರು 5.41 ಲಕ್ಷ ವಾಹನಗಳೂ ಚಾರ್ ಧಾಮ್ ತಲುಪಿವೆ. ಏಪ್ರಿಲ್-ಮೇನಲ್ಲಿ ಯಾತ್ರೆ ಪ್ರಾರಂಭವಾದ ನಂತರ, ಸುಮಾರು 17.08 ಲಕ್ಷ ಯಾತ್ರಿಕರು ಕೇದಾರನಾಥ ಧಾಮವನ್ನು ತಲುಪಿದ್ದಾರೆ, 15.90 ಲಕ್ಷ ಬದರಿನಾಥ ಧಾಮ, 8.46 ಲಕ್ಷ ಗಂಗೋತ್ರಿ ಮತ್ತು 6.94 ಲಕ್ಷ ಯಮುನೋತ್ರಿಗೆ ತಲುಪಿದ್ದಾರೆ. ಇದಲ್ಲದೆ, 1.77 ಲಕ್ಷಕ್ಕೂ ಹೆಚ್ಚು ಭಕ್ತರು ಹೇಮಕುಂಡ್ ಸಾಹಿಬ್‌ಗೆ ಭೇಟಿ ನೀಡಿದ್ದಾರೆ. ಅಕ್ಟೋಬರ್ 11 ರಂದು ಹೇಮಕುಂಡ್ ಸಾಹಿಬ್‌ನ ಪೋರ್ಟಲ್‌ಗಳನ್ನು ಚಳಿಗಾಲದ ಹಿನ್ನೆಲೆ ಮುಚ್ಚಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂದಹಾಗೆ ಕಳೆದ ವರ್ಷ 47 ಲಕ್ಷ ಭಕ್ತರು ಚಾರ್ ಧಾಮ್‌ಗೆ ಭೇಟಿ ನೀಡಿದ್ದರು. ಉತ್ತರಾಖಂಡ್ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್, ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಚಾರ್ ಧಾಮ್ ಯಾತ್ರೆಗೆ ರಾಜ್ಯ ಪೊಲೀಸರು ಪ್ರತಿ ಹಂತದಲ್ಲೂ ಯಾತ್ರಾರ್ಥಿಗಳಿಗೆ ಎಲ್ಲಾ ರೀತಿಯ ನೆರವು ನೀಡುತ್ತಿದ್ದಾರೆ ಎಂದು ಹೇಳಿದರು.

ಗರ್ವಾಲ್ ಹಿಮಾಲಯದಲ್ಲಿರುವ ಚಾರ್ ಧಾಮ್ ಅನ್ನು ಪ್ರತಿ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಅಂದರೆ ದೀಪಾವಳಿಯ ನಂತರ ಚಳಿಗಾಲದ ಅವಧಿಯಲ್ಲಿ ಭಕ್ತರಿಗೆ ಮುಚ್ಚಲಾಗುತ್ತದೆ. ಏಪ್ರಿಲ್-ಮೇನಲ್ಲಿ ಆರು ತಿಂಗಳ ನಂತರ ಮತ್ತೆ ತೆರೆಯಲಾಗುತ್ತದೆ.

Shwetha M