ಈ ಸಲ ಕಪ್ ನಮ್ದೆ ಎಂದ ಸೂಪರ್ ಸ್ಟಾರ್ – ಫೈನಲ್ ನೋಡಲು ಬರ್ತಾರಂತೆ ಮೋದಿ – ಚಮತ್ಕಾರ ತೋರಿಸಲು ಸೂರ್ಯಕಿರಣ್ ಟೀಮ್ ರೆಡಿ

ಇಡೀ ಜಗತ್ತಿನ ಚಿತ್ತ ವಿಶ್ವಕಪ್ ಫೈನಲ್‌ನತ್ತ ನೆಟ್ಟಿದೆ. ಆಸೀಸ್ ಮತ್ತು ಟೀಮ್ ಇಂಡಿಯಾ ನಡುವಿನ ಮೆಗಾ ಫೈನಲ್ ನೋಡಲು ಕೋಟಿ ಕೋಟಿ ಜನ ಕಾಯುತ್ತಿದ್ದಾರೆ. ಇದರ ಮಧ್ಯೆ ಫೈನಲ್‌ನಲ್ಲಿ ಏನಾಗಲಿದೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಭವಿಷ್ಯ ನುಡಿದಿದ್ದಾರೆ. ಮತ್ತೊಂದೆಡೆ ಫೈನಲ್ ದಿನ ನಡೆಯುವ ಸಮಾರೋಪ ಸಮಾರಂಭದಲ್ಲಿ ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ತಂಡವು ತಮ್ಮ ವೈಮಾನಿಕ ಕೌಶಲ್ಯಗಳನ್ನು ಪ್ರಸ್ತುತಪಡಿಸಲಿದೆ.
ಇದನ್ನೂ ಓದಿ: 20 ವರ್ಷಗಳ ಹಿಂದಿನ ಸೇಡು ತೀರಿಸಿಕೊಳ್ಳಲು ಭಾರತದ ತವಕ – ಆಸೀಸ್ ವಿರುದ್ಧ ಲೆಕ್ಕ ಚುಕ್ತಾ ಮಾಡುತ್ತಾ ಟೀಮ್ ಇಂಡಿಯಾ?
ವಿಶ್ವಕಪ್ ಫೈನಲ್‌ನಲ್ಲಿ ಏನಾಗಲಿದೆ ಎಂದು ಸೂಪರ್‌ಸ್ಟಾರ್ ರಜನಿಕಾಂತ್ ಭವಿಷ್ಯ ನುಡಿದಿದ್ದಾರೆ. ನ್ಯೂಜಿಲೆಂಡ್ ವರ್ಸಸ್ ಭಾರತದ ಪಂದ್ಯ ನೋಡಲು ರಜನಿಕಾಂತ್ ಅವರು ಮುಂಬೈಗೆ ತೆರಳಿದ್ದರು. ಅವರ ಜೊತೆ ಪತ್ನಿ ಲತಾ ಕೂಡ ಇದ್ದರು. ಸೆಮಿ ಫೈನಲ್ನಲ್ಲಿ ಭಾರತದ ಗೆಲುವನ್ನು ಅವರು ಸಂಭ್ರಮಿಸಿದ್ದಾರೆ. ಪಂದ್ಯ ಮುಗಿಸಿ ಚೆನ್ನೈಗೆ ಮರಳಿದ ಬಳಿಕ ಮಾಧ್ಯಮಗಳ ಜೊತೆ ರಜನಿಕಾಂತ್ ಮಾತನಾಡಿದ್ದಾರೆ. ‘ಮೊದಲಿಗೆ ನನಗೆ ನರ್ವಸ್ ಆಗಿತ್ತು. ಒಂದೂವರೆ ಗಂಟೆಗಳ ಕಾಲ ನರ್ವಸ್ ಆಗಿದ್ದೆ. ನಂತರ ನ್ಯೂಜಿಲೆಂಡ್ ವಿಕೆಟ್ ಪತನವಾಗಲು ಆರಂಭಿಸಿದಾಗ ಎಲ್ಲವೂ ಸರಿ ಆಯಿತು. ನನಗೆ ಶೇಕಡ ನೂರರಷ್ಟು ಭರವಸೆ ಇದೆ. ಈ ಸಲ ಕಪ್ ನಮ್ದೇ’ ಎಂದಿದ್ದಾರೆ ರಜನಿಕಾಂತ್.
ನವೆಂಬರ್ 19ರಂದು ನಡೆಯಲಿರುವ ಪಂದ್ಯ ನೋಡಲು ಅನೇಕ ಸೆಲೆಬ್ರಿಟಿಗಳು ಕೂಡ ಅಹಮದಾಬಾದ್‌ಗೆ ಆಗಮಿಸಲಿದ್ದಾರೆ. ಉಭಯ ತಂಡಗಳ ಈ ಹೈವೋಲ್ಟೇಜ್ ಕದನಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನ ಆತಿಥ್ಯವಹಿಸುತ್ತಿದೆ. ವಿಶ್ವದ ಅತ್ಯಂತ ದೊಡ್ಡ ಮೈದಾನದಲ್ಲಿ ಈ ಫೈನಲ್ ಪಂದ್ಯ ನಡೆಯುತ್ತಿರುವುದರಿಂದ ಇಡೀ ಕ್ರೀಡಾಂಗಣವೇ ಪ್ರೇಕ್ಷಕರಿಂದ ತುಂಬಿ ತುಳುಕುವುದು ಖಚಿತ. ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸಲು ದೇಶದ ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್‌ಗೆ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಈ ಮಹಾ ಸಂಗ್ರಾಮವನ್ನು ಇನ್ನಷ್ಟು ವಿಶೇಷಗೊಳಿಸುವ ನಿಟ್ಟಿನಲ್ಲಿ ಬಿಸಿಸಿಐ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಮಾರೋಪ ಸಮಾರಂಭಕ್ಕೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. ನವೆಂಬರ್ 19 ರಂದು ಫೈನಲ್ ಪಂದ್ಯ ಪ್ರಾರಂಭವಾಗುವ ಮೊದಲು ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು 10 ನಿಮಿಷಗಳ ವೈಮಾನಿಕ ಪ್ರದರ್ಶನವನ್ನು ನಡೆಸಲಿದೆ ಎಂದು ವರದಿಯಾಗಿದೆ. ಅದಕ್ಕೆ ಪೂರಕವಾಗಿ ಶುಕ್ರವಾರ ಮತ್ತು ಶನಿವಾರ ಈ ತಂಡ ಅಭ್ಯಾಸ ನಡೆಸಲಿದೆ ಎಂದು ವರದಿಯಾಗಿದೆ.