ಆಗಸ್ಟ್ ನಲ್ಲಿ ಸುರಿಯುವ ಮಳೆಯಿಂದ ಕೊಡಗಿಗೆ ಕಂಟಕ? – 48 ಕಡೆ ಭೂಕುಸಿತ ಉಂಟಾಗುವ ಸಾಧ್ಯತೆ!

ಆಗಸ್ಟ್ ನಲ್ಲಿ ಸುರಿಯುವ ಮಳೆಯಿಂದ ಕೊಡಗಿಗೆ ಕಂಟಕ? – 48 ಕಡೆ ಭೂಕುಸಿತ ಉಂಟಾಗುವ ಸಾಧ್ಯತೆ!

ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ಬಂದರೆ ಸಾಕು, ನಗರ ಪ್ರದೇಶದ ಜನರಿಂದ ಗುಡ್ಡಗಾಡು ನದಿ ಪಾತ್ರದ ಜನರಿಗೆ ಒಂದಲ್ಲಾ ಒಂದು ಆತಂಕ ಎದುರಾಗಿ ಬಿಡುತ್ತದೆ. ಕಳೆದ ವಾರ ಅಬ್ಬರಿಸಿ, ಬೊಬ್ಬಿರಿದಿದ್ದ ಮಳೆರಾಯ ಈಗ ಕೊಂಚ ತಣ್ಣಗಾಗಿದ್ದಾನೆ. ಹೀಗಾಗಿ ಜಿಲ್ಲೆಯ ಜನತೆ ನಿಟ್ಟುಸಿರು ಬಿಟ್ಟಿದ್ದರು. ಇದೀಗ ಜಿಲ್ಲಾಡಳಿತ ಮತ್ತೆ ಪ್ರಕೃತಿ ವಿಕೋಪದ ಮುನ್ಸೂಚನೆ ನೀಡಿದೆ. ಇದರಿಂದಾಗಿ ಜಿಲ್ಲೆಯ ಜನತೆ ಆತಂಕದಿಂದಲೇ ದಿನದೂಡುವ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ಪ್ರಯಾಣಿಸುವಾಗ ಎಚ್ಚರ.. ಘಾಟಿಯ 34 ಕಡೆಗಳಲ್ಲಿ ಭೂ ಕುಸಿತ ಭೀತಿ!

ಜುಲೈ ತಿಂಗಳ ಕಂಟಕ ಮುಗಿಯಿತು. ಮಳೆಗಾಲದಿಂದ ಸ್ವಲ್ಪ ಸೇಫ್ ಆದೇವು ಎಂದು ಕೊಡಗಿನ ಜನರು ಅಂದುಕೊಂಡಿದ್ದರು. ಆದರೆ ಮುಂಬರುವ ಆಗಸ್ಟ್ ತಿಂಗಳಲ್ಲಿ ಸುರಿಯುವ ಮಹಾಮಳೆಗೆ ಜಿಲ್ಲೆಯ 48 ಕಡೆ ಭೂಕುಸಿತ ಹಾಗೂ 44 ಕಡೆಯಲ್ಲಿ ಜಲಪ್ರವಾಹದ ಸ್ಥಳಗಳನ್ನು ಜಿಲ್ಲಾಡಳಿತ ಗುರುತು ಮಾಡಿದೆ. ಹೀಗಾಗಿ ಕೊಡಗಿನ ಜನತೆ ಆತಂಕದಲ್ಲಿಯೇ ಜೀವನ ಕಳೆಯುವಂತಾಗಿದೆ.

ಜಿಲ್ಲೆಯ 5 ತಾಲೂಕುಗಳ 10 ಹೋಬಳಿಯ 100 ಕಡೆಯಲ್ಲಿ ಜಲಕಂಟಕ ಎದುರಾಗುವ ಸೂಚನೆ ನೀಡಿದೆ. 2018-19ರಲ್ಲಿ ಭೀಕರ ಜಲ ಪ್ರವಾಹ ಉಂಟಾಗಿ ಬೆಟ್ಟ, ರಸ್ತೆಗಳು ಕುಸಿದು ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡ ಜನ ನಿರಾಶ್ರಿತರ ಕೇಂದ್ರದಲ್ಲಿ ವಾಸ ಮಾಡಿದ್ದರು. ಆ ಭೀತಿ ಜನರಲ್ಲಿ ಮಾಸುವ ಮುನ್ನವೇ ಜಿಲ್ಲಾಡಳಿತ ಮತ್ತೆ ಪ್ರಕೃತಿ ವಿಕೋಪದ ಮುನ್ಸೂಚನೆ ನೀಡಿದೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ ಪ್ರವಾಹ, ಭೂಕುಸಿತದಿಂದ ಜುಲೈ ತಿಂಗಳ ಮಳೆಯಿಂದ ಹೇಗೋ ಪಾರಾಗಿದ್ದೇವೆ ಎಂದುಕೊಂಡಿದ್ದ ಗುಡ್ಡಗಾಡು ಜನರಿಗೆ ಈ ಬಾರಿ ಮತ್ತೆ ಭೂಕುಸಿತ ಅಥವಾ ಪ್ರವಾಹ ಎದುರಾಗಬಹುದು ಎಂದು ಜಿಲ್ಲಾಡಳಿತ ಸ್ಥಳಗಳನ್ನು ಗುರುತಿಸಿರುವುದರಿಂದ ಜನರು ಕಂಗಾಲಾಗುವಂತೆ ಮಾಡಿದೆ.

suddiyaana