ಕ್ಷುದ್ರಗ್ರಹದಲ್ಲಿದೆ ಒಬ್ಬೊಬ್ಬರನ್ನೂ ಕುಬೇರರನ್ನಾಗಿಸುವಷ್ಟು ಸಂಪತ್ತು – ಭೂಮಿಗೆ ತರಲು ಅದೆಷ್ಟು ಸಾಹಸ..?

ಕ್ಷುದ್ರಗ್ರಹದಲ್ಲಿದೆ ಒಬ್ಬೊಬ್ಬರನ್ನೂ ಕುಬೇರರನ್ನಾಗಿಸುವಷ್ಟು ಸಂಪತ್ತು – ಭೂಮಿಗೆ ತರಲು ಅದೆಷ್ಟು ಸಾಹಸ..?

ಈ ಒಂದು ಕ್ಷುದ್ರಗ್ರಹದಲ್ಲಿರುವ ಸಂಪತ್ತನ್ನ ಭೂಮಿಯಲ್ಲಿ ಪ್ರತಿಯೊಬ್ಬರಿಗೆ ಹಂಚಿದರೆ ಪ್ರತಿಯೊಬ್ಬರು ಕೋಟ್ಯಧಿಪತಿಯಾಗಬಹುದಂತೆ. ಯಾಕಂದ್ರೆ ಆ ಕ್ಷುದ್ರಗ್ರಹದ ಬಳಿ ಅಪಾರ ನಿಧಿಯೇ ಅಡಗಿದೆ. ಊಹೆಗೂ ಮೀರಿದ ಖನಿಜ ಸಂಪತ್ತು ಅಲ್ಲಿ ಹುದುಗಿದೆ. ಸದ್ಯ ನಾಸಾ ಬಾಹ್ಯಾಕಾಶ ಸಂಸ್ಥೆಯು ಈ ಕ್ಷುದ್ರಗ್ರಹದ ಮೇಲೆ ತನ್ನ ಕಣ್ಣಿಟ್ಟಿದೆ.

ಸೌರ ಮಂಡಲದ ಉಗಮ ಮತ್ತು ವಿಕಸನದಲ್ಲಿ ಮಹತ್ವದ ಪಾತ್ರವಿರುವ ಕ್ಷುದ್ರ ಗ್ರಹಗಳು ಖಗೋಳ ಶಾಸ್ತ್ರಜ್ಞರಿಗೆ ಒಂದು ಕುತೂಹಲಕಾರಿ ವಿಷಯವಾಗಿವೆ. ಸೌರ ಮಂಡಲದ ಉಗಮದ ರಹಸ್ಯವೂ ಕ್ಷುದ್ರಗ್ರಹಗಳ ಬಳಿ ಹುದುಗಿರಬಹುದು ಎನ್ನುವ ಅಂದಾಜಿನಲ್ಲಿ ಇವುಗಳ ಬಗ್ಗೆ ನಿರಂತರ ಅಧ್ಯಯನ ನಡೆಯುತ್ತಲೇ ಇರುತ್ತದೆ.   ಕ್ಷುದ್ರಗ್ರಹಗಳಲ್ಲಿ ಮುಖ್ಯವಾಗಿ ಪ್ರಚಲಿತದಲ್ಲಿ ಇರುವುದು ಮಂಗಳ ಮತ್ತು ಗುರುಗ್ರಹಗಳ ಕಕ್ಷೆಯಲ್ಲಿ ಪರಿಭ್ರಮಿಸುತ್ತಿರುವ ಟ್ರೊಜನ್ ಕ್ಷುದ್ರಗ್ರಹಗಳಾಗಿವೆ. ಆದರೆ ಈಗ ಮಂಗಳ ಮತ್ತು ಗುರು ಗ್ರಹಗಳ ಮದ್ಯೆ ಸುತ್ತುತ್ತಿರುವ ‘16 ಸೈಕ್’  ಕ್ಷುದ್ರಗ್ರಹ ತನ್ನ ಊಹೆಗೂ ಮೀರಿದ ಸಂಪತ್ತಿನ ಮೂಲಕ ಸುದ್ದಿಯಾಗುತ್ತಿದೆ. ನಾಸಾ ಈ ಕ್ಷುದ್ರಗ್ರಹದ ಸ್ಯಾಂಪಲ್ ತರಲು ‘16 ಸೈಕ್ ‘ ಮಿಷನ್ ಗೆ ಸಿದ್ಧತೆ ಮಾಡುತ್ತಿದೆ.

ಇದನ್ನೂ ಓದಿ : SSLV-D2 ರಾಕೆಟ್ ಉಡಾವಣೆ ಯಶಸ್ವಿ – ಕಕ್ಷೆ ಸೇರಿದ ಮೂರು ಉಪಗ್ರಹಗಳು

ಏನಿದು ‘16 ಸೈಕ್’ ಕ್ಷುದ್ರ ಗ್ರಹ?

ಸಾಮಾನ್ಯವಾಗಿ ಬಂಡೆ ಅಥವಾ ಮಂಜುಗಡ್ಡೆಯಿಂದ ರೂಪಿತವಾಗಿರುವ ಕ್ಷುದ್ರಗ್ರಹಗಳಿಂದ ಭಿನ್ನವಾಗಿರೋ ‘16 ಸೈಕ್’ ಬೆಲೆ ಬಾಳುವ ಕಬ್ಬಿಣ, ನಿಕೆಲ್, ಮತ್ತು ಚಿನ್ನದಂತ ಲೋಹೀಯ ವಸ್ತುಗಳಿಂದ ಮಾಡಲ್ಪಟ್ಟಿದೆ. ಇದು ಬಟಾಟೆ ಆಕಾರದಲ್ಲಿದ್ದು ಸುಮಾರು 226 ಕಿಲೋಮೀಟರ್ಸ್ ವ್ಯಾಸದಷ್ಟಿದೆ. ವಿಜ್ಞಾನಿಗಳ ಪ್ರಕಾರ ಇದು 10,000 ಡಾಲರ್ ಕ್ವಾಡ್ರಿಲಿಯನ್ ಮೌಲ್ಯಯುತವಾಗಿದೆ.

ಸೈಕ್ ಮಿಷನ್ ಗೆ ಸಿದ್ಧತೆ!

ನಾಸಾದ ಸೈಕಿ ಉಡಾವಣೆ 2022 ರ ಆಗಸ್ಟ್ ನಲ್ಲಿ ಆರಂಭವಾಗಬೇಕಿತ್ತು. ಆದರೆ ಮಿಷನ್ ಸಿದ್ಧತೆಯಲ್ಲಿ ವಿಳಂಬವಾದ ಕಾರಣ ನಾಸಾ ಸಂಸ್ಥೆಯು ಅಕ್ಟೋಬರ್ 2023 ರ ಒಳಗೆ ಉಡಾವಣೆಗೊಳ್ಳಲಿದೆ ಎಂದು ನಾಸಾ ಹೇಳಿಕೊಂಡಿದೆ. ಉಡಾವಣೆಯು ಯಶಸ್ವಿಯಾದರೆ ಆಗಸ್ಟ್ 2029 ರ ವೇಳೆಗೆ ಬಾಹ್ಯಾಕಾಶ ನೌಕೆಯು ಮಂಗಳ ಮತ್ತು ಗುರುಗಳ ನಡುವಿನ ಸೌರವ್ಯೂಹದ ಮುಖ್ಯ ಕ್ಷುದ್ರಗ್ರಹ ಪಟ್ಟಿಯ ಕಕ್ಷೆಗೆ ತಲುಪಿ ನಂತರ ಕನಿಷ್ಠ 21 ತಿಂಗಳು ಕಕ್ಷೆಯ ಮ್ಯಾಪಿಂಗ್ ಮತ್ತು ಕ್ಷುದ್ರಗ್ರಹದ ಗುಣಲಕ್ಷಣಗಳನ್ನು ಅಧ್ಯಯನ ಮಾಡಲು ಪ್ರಾರಂಭಿಸುತ್ತದೆ.

ಮಿಷನ್ ಪ್ರಯೋಜನಗಳೇನು?

16 ಸೈಕಿಯು ಛಿದ್ರಗೊಂಡ ಗ್ರಹಗಳ ತುಣುಕು ಆಗಿರಬಹುದು, ಇದು ಗ್ರಹಗಳ ಮೊದಲ ಬಿಲ್ಡಿಂಗ್ ಬ್ಲಾಕ್ ಆಗಿರಲೂಬಹುದು ಎಂದು ಅಂದಾಜಿಸಲಾಗಿದೆ.  ಒಂದು ವೇಳೆ ಇದು ಸರಿಯಾಗಿದ್ದರೆ ಕ್ಷುದ್ರಗ್ರಹವು ಭೂಮಿಯ ಒಳ ಭಾಗದ ರಹಸ್ಯವನ್ನ ಅನ್ವೇಷಿಸುವ ಜೊತೆಗೆ ಸೌರ ಮಂಡಲದ ಉಗಮದ ರಹಸ್ಯವನ್ನ ತಿಳಿದುಕೊಳ್ಳುವಲ್ಲಿ ಮತ್ತು ಈ ಕ್ಷುದ್ರಗ್ರಹವು ಯಾಕೆ ಲೋಹ ಸಮೃದ್ಧವಾಗಿದೆ ಎಂಬುದರ ಕುರಿತಾಗಿ ಒಳನೋಟವನ್ನ ನೀಡಬಹುದು. ಹಾಗಿದ್ದರೂ ಭೂಮಿಯ ಮೇಲಿನ ಪ್ರತಿಯೊಬ್ಬರನ್ನ ಕೋಟ್ಯಧಿಪತಿಯನ್ನಾಗಿ ಮಾಡುವ ಕ್ಷುದ್ರಗ್ರಹದ ಸಾಮರ್ಥ್ಯವು ಸಂಪೂರ್ಣವಾಗಿ ಕಾಲ್ಪನಿಕವಾಗಿದೆ ಮತ್ತು ಕ್ಷುದ್ರಗ್ರಹದ ಅಮೂಲ್ಯ ಲೋಹಗಳನ್ನು ಸೆರೆಹಿಡಿಯುವ ಮತ್ತು ಗಣಿಗಾರಿಕೆ ಮಾಡುವ ಕಾರ್ಯಸಾಧ್ಯತೆಯು ಅತ್ಯಂತ ಸವಾಲಿನ ಮತ್ತು ವೆಚ್ಚದಾಯಕವಾಗಿದೆ.

suddiyaana