ಸತತ 100 ಗಂಟೆಗಳ ಕಾಲ ಅಡುಗೆ – ಗಿನ್ನೆಸ್ ದಾಖಲೆ ಬರೆದ ನೈಜೀರಿಯಾ ಮಹಿಳೆ!
ಅಡುಗೆ ಅನ್ನೋದು ಒಂದು ಕಲೆ. ಅದನ್ನ ಕೆಲವರು ಇಷ್ಟ ಪಟ್ಟು ಮಾಡುತ್ತಾರೆ. ಇನ್ನೂ ಕೆಲವರು ಅನಿವಾರ್ಯವಾಗಿ ಮಾಡುತ್ತಾರೆ. ಅದರಲ್ಲೂ ಹಬ್ಬಹರಿದಿನ ಬಂದ್ರೆ ಅಷ್ಟೆಲ್ಲಾ ತಿಂಡಿಗಳನ್ನ ಮಾಡಬೇಕಾ ಅಂತಾ ಮೂಗು ಮುರಿಯೋರೇ ಜಾಸ್ತಿ. ಆದರೆ ಈ ಮಹಿಳೆಗೆ ಅಡುಗೆಯಲ್ಲಿ ಇರೋ ಆಸಕ್ತಿ ನೋಡಿದ್ರೆ ನೀವೇ ಬೆರಗಾಗುತ್ತೀರ.
ನೈಜೀರಿಯಾದ ಬಾಣಸಿಗಳಾದ ಹಿಲ್ಡಾ ಎಫಿಯಾಂಗ್ ಬಸ್ಸಿ ಎಂಬಾಕೆ ಸತತ 100 ಗಂಟೆಗಳ ಕಾಲ ಯಾವುದೇ ವಿಶ್ರಾಂತಿ ಪಡೆಯದೇ ಅಡುಗೆಯನ್ನು ಮಾಡುವ ಮೂಲಕ ಗಿನ್ನೆಸ್ ವಿಶ್ವದಾಖಲೆಗೆ ಭಾಜನರಾಗಿದ್ದಾರೆ. ಸಾಧನೆ ಮಾಡೋದಿಕ್ಕೆ ದಾರಿ ಸಾವಿರಾರು. ಆದ್ರೆ ಮಾಡುವ ಇಚ್ಛಾ ಶಕ್ತಿಯೊಂದು ಇರಬೇಕಷ್ಟೇ. ಈ ಸ್ಟೋರಿ ಓದಿದಾಗ ನಿಮಗೂ ಹಾಗೇ ಅನ್ನಿಸಲೂಬಹುದು. ನೈಜೀರಿಯಾದ ಮಹಿಳಾ ಬಾಣಸಿಗರೊಬ್ಬರು ಸೋಮವಾರ ನಿರಂತರವಾಗಿ 100 ಗಂಟೆಗಳ ಕಾಲ ಅಡುಗೆ ಮಾಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ನೈಜೀರಿಯಾದ ಈ ಮಹಿಳೆಯು ಭಾರತೀಯ ಬಾಣಸಿಗ ಲತಾ ಟಂಡನ್ 2019 ರಲ್ಲಿ ನಿರ್ಮಿಸಿದ್ದ 87 ಗಂಟೆ 45 ನಿಮಿಷಗಳ ದಾಖಲೆಯನ್ನು ಮುರಿದಿದ್ದಾರೆ. ಕಳೆದ ಗುರುವಾರ ಮಧ್ಯಾಹ್ನ 4 ಗಂಟೆಗೆ ಅಡುಗೆ ಆರಂಭಿಸಿದ ಹಿಲ್ಡಾ ಬಾಸಿ, ಸೋಮವಾರ ರಾತ್ರಿ 7.45ಕ್ಕೆ ಅಡುಗೆ ಮುಗಿಸಿ ದಾಖಲೆ ನಿರ್ಮಿಸಿದ್ದಾರೆ. ಈ ಹಂತದಲ್ಲಿ ಅವರು 100 ಕ್ಕೂ ಹೆಚ್ಚು ವಿಭಿನ್ನ ಭಕ್ಷ್ಯಗಳನ್ನು ತಯಾರಿಸಿದ್ದಾರೆ.
ಇದನ್ನೂ ಓದಿ : 6 ದಿನ 16 ಗಂಟೆಗಳಲ್ಲೇ ವಿಶ್ವದ 7 ಅದ್ಭುತ ಸ್ಥಳಗಳಿಗೆ ಭೇಟಿ – ಗಿನ್ನೆಸ್ ವಿಶ್ವದಾಖಲೆ ಬರೆದ ಸಾಹಸಿ!
ಜೊಲೊಫ್ ರೈಸ್, ಹಾಗೆಯೇ ವಿವಿಧ ರೀತಿಯ ಅಕ್ಕಿ ಖಾದ್ಯ ಮತ್ತು ಪಾಸ್ತಾ ಸೇರಿದಂತೆ ನೈಜೀರಿಯಾದ ಎಲ್ಲಾ ವಿಶೇಷ ಪಾಕಗಳನ್ನ ಮಾಡಿದ್ದಾರೆ. ಅವರು 12 ಗಂಟೆಗಳ ಕಾಲ ಬ್ರೇಕ್ ತೆಗೆದುಕೊಳ್ಳದೆ ಅಡುಗೆ ಮಾಡುತ್ತಿದ್ದರು ಮತ್ತು ನಂತರ ಪ್ರತಿ ಒಂದು ಗಂಟೆ ವಿಶ್ರಾಂತಿ ಪಡೆಯುತ್ತಿದ್ದರು. ಆ ಅವಧಿಯಲ್ಲಿ ಸ್ನಾನ ಮತ್ತು ವೈದ್ಯಕೀಯ ತಪಾಸಣೆಗಳನ್ನು ಅವರು ಪೂರ್ಣಗೊಳಿಸುತ್ತಿದ್ದರು. ನೈಜೀರಿಯಾದ ಲೆಕ್ಕಿ ಪ್ರದೇಶದಲ್ಲಿ ನಡೆದ ಈ ದಾಖಲೆಯ ಕಾರ್ಯಕ್ರಮವನ್ನ ವೀಕ್ಷಿಸಲು ಸಾವಿರಾರು ಜನರು ಆಗಮಿಸಿದ್ದರು. ಹಿಲ್ಡಾ ಬಾಸಿ ಆರಂಭದಲ್ಲಿ 96 ಗಂಟೆಗಳ ಕಾಲ ಅಡುಗೆ ಮಾಡಲು ಯೋಜಿಸಿದ್ದಳು ಆದರೆ ಪ್ರೇಕ್ಷಕರು 100-ಗಂಟೆಗಳ ಗಡಿಯನ್ನು ತಲುಪುವಂತೆ ಆಕೆಗೆ ಪ್ರೋತ್ಸಾಹ ನೀಡುತ್ತಾರೆ. ಹಿಲ್ಡಾ ಬಾಸಿ ಅಡುಗೆ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು. ನೈಜೀರಿಯಾದ ಅಧ್ಯಕ್ಷ ಮುಹಮ್ಮದ್ ಬುಹಾರಿ ಕೂಡ ದಾಖಲೆ ನಿರ್ಮಿಸಿದ ನಂತರ ಹಿಲ್ಡಾ ಬಾಸಿಯನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.