ತುಂಟಾಟ ಸಾಕು.. ಬೇಗ ರಸ್ತೆ ದಾಟ್ರೋ.. ಮರಿಗಳನ್ನು ರಸ್ತೆ ದಾಟಿಸಲು ತಾಯಿ ಕರಡಿಯ ಹರಸಾಹಸ!

ತುಂಟಾಟ ಸಾಕು.. ಬೇಗ ರಸ್ತೆ ದಾಟ್ರೋ.. ಮರಿಗಳನ್ನು ರಸ್ತೆ ದಾಟಿಸಲು ತಾಯಿ ಕರಡಿಯ ಹರಸಾಹಸ!

ಪ್ರಾಣಿಗಳಿಗೂ ಮತ್ತು ಮನುಷ್ಯರ ನಡುವೆ ಒಂದು ಅವಿನಾಭಾವ ಸಂಬಂಧ ಇದೆ. ತಾಯಿ ಮತ್ತು ಮಗುವಿನ  ಪ್ರೀತಿ, ಬಾಂಧವ್ಯ ಕೇವಲ ಮನುಷ್ಯರಲ್ಲಿ ಮಾತ್ರವಲ್ಲ ಪ್ರಾಣಿ ಪಕ್ಷಿಗಳಲ್ಲೂ ಕೂಡಾ ಇದೆ. ಅವುಗಳು ಕೂಡ ಮನುಷ್ಯರಂತೆ ತಮ್ಮ ಮರಿಗಳನ್ನು ಜೋಪಾನ ಮಾಡುತ್ತವೆ. ತನಗೆ ಎಷ್ಟೇ ಕಷ್ಟ ಇದ್ರೂ ಕೂಡ ತನ್ನ ಮರಿಗಳನ್ನು ಮುದ್ದಾಗಿ ಸಾಕುತ್ತವೆ. ಎಂತಹ ಸಂದರ್ಭದಲ್ಲೂ ತನ್ನ ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳುತ್ತವೆ. ಇದಕ್ಕೆ ಸಂಬಂಧಿಸಿ ಸಾಕಷ್ಟು ವಿಡಿಯೋಗಳು ಆಗಾಗ ವೈರಲ್‌ ಆಗುತ್ತಲೇ ಇರುತ್ತವೆ. ಇದೀಗ ಇಲ್ಲೊಂದು ಕರಡಿ ತನ್ನ ನಾಲ್ಕು ಮರಿಗಳನ್ನು ರಸ್ತೆ ದಾಟಿಸುತ್ತಿದೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ.

ತಾಯಿ ಪ್ರೀತಿ ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲೂ ಇದೆ. ಇಲ್ಲೊಂದು ತಾಯಿ ಕರಡಿ ತನ್ನ ನಾಲ್ಕು ಮರಿಗಳನ್ನು ರಸ್ತೆ ದಾಟಿಸಲು ಹರಸಾಹಸಪಡುತ್ತಿದೆ. ತನ್ನ ತುಂಟ ಮಕ್ಕಳ ಚೇಷ್ಟೆಯನ್ನೆಲ್ಲಾ ತಡೆದುಕೊಂಡು ಬಹಳ ತಾಳ್ಮೆಯಿಂದ ನಾಲ್ಕು ಮರಿಗಳನ್ನು ಕರಡಿ ರಸ್ತೆ ದಾಟಿಸುವಲ್ಲಿ ಕೊನೆಗೂ ಯಶಸ್ವಿಯಾಗಿದೆ.  ಈ ಮುದ್ದಾದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ. @uddin_heritor ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ಜ.14 ರಿಂದ ‘ಭಾರತ ನ್ಯಾಯ ಯಾತ್ರಾ’ – ಪೂರ್ವದಿಂದ ಪಶ್ಚಿಮದ ಕಡೆಗೆ  ರಾಹುಲ್‌ ಗಾಂಧಿ ನೇತೃತ್ವದಲ್ಲಿ ಯಾತ್ರೆ

ವೈರಲ್ ವಿಡಿಯೋದಲ್ಲಿ  ತಾಯಿ ಕರಡಿ ತನ್ನ ನಾಲ್ಕು ತುಂಟ ಮರಿಗಳನ್ನು ಜೋಪಾನವಾಗಿ ರಸ್ತೆ ದಾಟಿಸಲು ಹರಸಾಹಸ ಪಡುತ್ತಿರುವುದನ್ನು ಕಾಣಬಹುದು.  ಹಲವು ವಿಫಲ ಪ್ರಯತ್ನಗಳ ನಂತರ ತಾಯಿ ಕರಡಿ ತನ್ನ ತುಂಟ ಮಕ್ಕಳನ್ನು ರಸ್ತೆ ದಾಟಿಸುವಲ್ಲಿ ಯಶಸ್ವಿಯಾಗಿದೆ. ಹೌದು ತಾಯಿ ಕರಡಿಯೊಂದು ತನ್ನ ನಾಲ್ಕು ಮಕ್ಕಳೊಂದಿಗೆ ಇತ್ತಕಡೆಯಿಂದ  ಅತ್ತ ಕಡೆ ರಸ್ತೆ ದಾಟಲು ಹೋಗುತ್ತೆ. ಆದ್ರೆ ಈ ತುಂಟ ಮರಿಗಳು ರಸ್ತೆ ದಾಟಲ್ಲ ಅಂತ ಒಂದೇ ಸಮನೇ ಹಟ ಮಾಡುತ್ತವೆ. ಇವುಗಳನ್ನು ಹೀಗೆ ಬಿಟ್ರೆ ಇಡೀ ದಿನ ರಸ್ತೆಯಲ್ಲಿಯೇ ಇರಬೇಕಾಗುತ್ತದೆ ಎಂದು ತಾಯಿ ಕರಡಿ ಒಂದೊಂದೇ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಹೋಗಿ ಜೋಪಾನವಾಗಿ ರಸ್ತೆ ದಾಟಿಸುತ್ತದೆ. ಆದ್ರೂ ಕೂಡಾ ಒಂದು ಮರಿ ಪುನಃ ರಸ್ತೆಯ ಮಧ್ಯೆ ಬರಲು ಪ್ರಯತ್ನಿಸುತ್ತದೆ. ಅಂತೂ ಇಂತೂ ಈ ಮರಿಗಳನ್ನು ರಸ್ತೆ ದಾಟಿಸುವಷ್ಟರಲ್ಲಿ ತಾಯಿ ಕರಡಿ ಸುಸ್ತಾಗಿ ಹೋಗಿತ್ತು.

ಈ ವಿಡಿಯೋಗೆ ಸೋಶಿಯಲ್‌ ಮೀಡಿಯಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು ʼತಾಯಿ ಎಂದೆಂದಿಗೂ ತಾಯಿಯೇʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಕರಡಿಗಳು ರಸ್ತೆ ದಾಟುವವರೆಗೂ ತಾಳ್ಮೆಯಿಂದ ಕಾದ ಕಾರು ಚಾಲಕರಿಗೆ ನನ್ನದೊಂದು ಸೆಲ್ಯೂಟ್ʼ ಎಂದು ಹೇಳಿದ್ದಾರೆ.  ಮತ್ತೊಬ್ಬ ಬಳಕೆದಾರರು ʼಮಕ್ಕಳು ಹೀಗೆ ಅಲ್ವಾ ತಾಯಿಯ ಮಾತನ್ನು ಕೇಳೋದೇ ಇಲ್ಲʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಮರಿ ಕರಡಿಗಳ ತುಂಟಾಟ ತುಂಬಾ ಮುದ್ದಾಗಿದೆ ಎಂದು ಹೇಳಿದ್ದಾರೆ.

Shwetha M