ಈ ಕೆಫೆಯಲ್ಲಿ ಮನುಷ್ಯರೊಂದಿಗೆ ಹಾವು, ಹಲ್ಲಿ, ಓತಿಕ್ಯಾತಗಳು ಆಹಾರ ಸೇವಿಸುತ್ತವೆ!
ಬೆಕ್ಕು, ನಾಯಿಗಳನ್ನು ಅನೇಕರು ಮನೆಯಲ್ಲಿ ಸಾಕುತ್ತಾರೆ. ಅವುಗಳಿಗಾಗಿಯೇ ಒಂದು ಗೂಡು ನಿರ್ಮಿಸುವುದನ್ನು ನೋಡಿದ್ದೇವೆ. ಅಲ್ಲದೇ ತಾವು ಪ್ರವಾಸ ಹೋಗುವಾಗ, ನೆಂಟರಿಷ್ಟರ ಮನೆಗೆ ಹೋದಾಗ, ಹೋಟೆಲ್, ರೆಸ್ಟೋರೆಂಟ್ ಗಳಿಗೆ ಭೇಟಿ ನೀಡಿದಾಗಲೂ ಅವುಗಳನ್ನು ಕರೆದುಕೊಂಡು ಹೋಗುವುದನ್ನು ನೋಡಿರುತ್ತೇವೆ. ಆದರೆ ಎಂದಾದರೂ ಹಾವು, ಹಲ್ಲಿ, ಓತಿಕ್ಯಾತ ಇವುಗಳನ್ನು ಪ್ರೀತಿಯಿಂದ ಮನೆಯಲ್ಲಿ ಸಾಕುವುದನ್ನು ಕೇಳಿದ್ದೀರಾ? ಇಷ್ಟೇ ಅಲ್ಲದೇ ಅವುಗಳಿಗಾಗಿ ಕೆಫೆ ಇದೆ ಎಂದರೆ ನೀವು ಶಾಕ್ ಆಗೋದು ಗ್ಯಾರಂಟಿ.
ಇದನ್ನೂ ಓದಿ:ಶ್ವಾನಗಳಿಗೂ ಆರಂಭವಾಯ್ತು “ಡಾಭಾ” – ಇಲ್ಲಿ ನಾಯಿಗಳಿಗೂ ಸಿಗುತ್ತೆ ಭರ್ಜರಿ ಊಟ
ಹೌದು, ಮಲೇಷ್ಯಾದ ರಾಜಧಾನಿ ಕೌಲಾಲಂಪುರದ ಹೊರವಲಯದಲ್ಲಿ ಯಪ್ ಮಿಂಗ್ ಯಾಂಗ್ ಎಂಬ ವ್ಯಕ್ತಿ ಒಂದು ಕೆಫೆ ಆರಂಭಿಸಿದ್ದಾರೆ. ಈ ಕೆಫೆಯ ವಿಶೇಷತೆ ಏನೆಂದರೆ ಇಲ್ಲಿ ಮನುಷ್ಯರ ಜೊತೆ ಸರಿಸೃಪಗಳು ಕೂಡ ಆಹಾರ ಸೇವಿಸುತ್ತವಂತೆ! ಇದು ಅಚ್ಚರಿಯಾದ್ರು ಸತ್ಯ. ಕೆಫೆಯಲ್ಲಿ ವಿವಿಧ ಜಾತಿಯ ಹಾವುಗಳು, ಓತಿಕ್ಯಾತಗಳು, ಹಲ್ಲಿಗಳನ್ನೇ ಗಾಜಿನ ಟ್ಯಾಂಕುಗಳಲ್ಲಿಟ್ಟು ಸಾಕಲಾಗುತ್ತಿದೆ. ಈ ಕೆಫೆಗೆ ಆಗಮಿಸಿದ ಅತಿಥಿಗಳು ಈ ಸರಿಸೃಪಗಳನ್ನು ಕೈಯಲ್ಲಿ ಹಿಡಿದುಕೊಂಡೇ ತಮಗೆ ಬೇಕಾದ ಪಾನೀಯಗಳನ್ನು ಕುಡಿಯಬಹುದಂತೆ. ಅಲ್ಲದೇ ಅವಕ್ಕೂ ಆಹಾರ ಹಾಕಬಹುದಂತೆ.
ಪರಿಸರ ವಿಜ್ಞಾನದಲ್ಲಿ ಪದವಿ ಪಡೆದಿರುವ ಯಪ್, ಮಲೇಷ್ಯಾ ಸರಿಸೃಪ ಅಧ್ಯಯನ ಸೊಸೈಟಿಯ ಸದಸ್ಯರಾಗಿದ್ದಾರೆ. ಹಾಗಾಗಿ ಇವರಿಗೆ ಸರಿಸೃಪಗಳ ಮೇಲೆ ವಿಶೇಷ ಕಾಳಜಿ ಹಾಗೂ ಪ್ರೀತಿಯಂತೆ. ಹೀಗಾಗಿ ಅವರು ಈ ಕೆಫೆಯನ್ನು ಆರಂಭಿಸಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.
ಸಾಮಾನ್ಯವಾಗಿ ಮನುಷ್ಯರು ಕೇವಲ ನಾಯಿ, ಬೆಕ್ಕು, ಕುರಿಗಳಂತಹ ಪ್ರಾಣಿಗಳ ಮೇಲೆ ಪ್ರೀತಿ ತೋರುತ್ತಾರೆ. ಆದರೆ ಇಂತಹ ಸರಿಸೃಪಗಳನ್ನು ಯಾರು ಸಾಕುವುದಿಲ್ಲ. ಹೀಗಾಗಿ ಅವುಗಳ ಜೊತೆಗೂ ಆತ್ಮೀಯ ಬಾಂಧವ್ಯ ಬೆಳೆಸಿಕೊಳ್ಳಬಹುದು ಎಂದು ತೋರಿಸುವುದೇ ಈ ಕೆಫೆಯ ಉದ್ದೇಶ ಎಂದು ಯಪ್ ಹೇಳಿಕೊಂಡಿದ್ದಾರೆ.