ಈ ಸ್ಥಳದಲ್ಲಿ ಸೆಲ್ಫಿ ತೆಗೆದ್ರೆ 24 ಸಾವಿರ ರೂ. ದಂಡ! – ಯಾಕಪ್ಪಾ ಇಂತಹ ಟಫ್ ರೂಲ್ಸ್?
ಇಟಲಿ: ಇದು ಸ್ಮಾರ್ಟ್ ಫೋನ್ ಯುಗ. ಹೀಗಾಗಿ ಅನೇಕರು ಹೋದಲ್ಲೆಲ್ಲಾ ತಮ್ಮ ಸೆಲ್ಫಿ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡೋದು ಸಾಮಾನ್ಯ. ಆದರೆ ಹೀಗೆ ಸೆಲ್ಫಿ ತೆಗೆದು ಪೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವವರು ಕೊಂಚ ಜಾಗ್ರತೆ ವಹಿಸೋದು ಉತ್ತಮ. ಇಲ್ಲದಿದ್ರೆ ಸಾವಿರಾರು ರೂಪಾಯಿ ದಂಡ ಬೀಳೋದು ಪಕ್ಕಾ!
ಇಟಲಿಯ ಪೋರ್ಟೋಫಿನೋ ಪಟ್ಟಣದಲ್ಲಿ ಸೆಲ್ಫಿ ತೆಗೆಯುವ ಹವ್ಯಾಸವೇ ನಿಮಗೆ ಮುಳುವಾಗುವ ಸಾಧ್ಯತೆ ಇದೆ. ಏಕೆಂದರೆ ಇಟಲಿಯ ಪೋರ್ಟೋಫಿನೋದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಈ ಪಟ್ಟಣದಲ್ಲಿ ಸೆಲ್ಫಿ ತೆಗೆದ್ರೆ 275 ಯುರೋ ಎಂದರೆ ಬರೋಬ್ಬರಿ 24,777 ರೂಪಾಯಿ ದಂಡ ವಿಧಿಸಲಾಗುತ್ತಿದೆ ಅಂತಾ ವರದಿಯಾಗಿದೆ.
ಇದನ್ನೂ ಓದಿ: ಭಾರತದ ಕೊನೆಯ ಹಳ್ಳಿಯಾಗಿದ್ದ ‘ಮಾಣಾ’ ಈಗ ಭಾರತದ ಪ್ರಥಮ ಗ್ರಾಮ!
ಪೋರ್ಟೊಫಿನೊ ಪಟ್ಟಣದ ಹಲವು ಪ್ರವಾಸಿ ಸ್ಥಳಗಳು ಸದ್ಯ ಭಾರೀ ಬ್ಯುಸಿಯಾಗಿವೆ. ರಜಾ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ಹೀಗಿರುವಾಗ ಸೆಲ್ಫಿ ತೆಗೆದುಕೊಳ್ಳುತ್ತಾ ನಿಂತರೆ ಬೇರೆಯವರಿಗೆ ಆ ಸ್ಥಳಕ್ಕೆ ಬರಲು ತೊಂದರೆಯಾಗುತ್ತದೆ, ತಡವಾಗುತ್ತದೆ. ಇಲ್ಲಿನ ಜನಪ್ರಿಯ ತಾಣಗಳಲ್ಲಿ ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳುವುದನ್ನು ತಡೆಯಲು ನೋ ವೇಟಿಂಗ್ ಝೋನ್‌ಗಳನ್ನು ಪರಿಚಯಿಸಲಾಗಿದೆ. ಇಲ್ಲಿ ನೀವೇನಾದರೂ ಸೆಲ್ಫಿ ತೆಗೆದುಕೊಂಡರೆ 275 ಯುರೋ ದಂಡ ವಿಧಿಸಲಾಗುತ್ತಿದೆ.
ಈ ಬಗ್ಗೆ ಪೋರ್ಟೊಫಿನೊದ ಮೇಯರ್ ಮ್ಯಾಟಿಯೊ ವಿಯಾಕಾವಾ ಮಾತನಾಡಿದ್ದು, ಪ್ರವಾಸಿಗರು ಎಲ್ಲಿ ಬೇಕೆಂದರಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಇದರಿಂದ ಟ್ರಾಫಿಕ್ ಜಾಮ್ ಸೇರಿ ಹಲವು ಸಮಸ್ಯೆಗಳು ಸೃಷ್ಟಿಯಾಗಿದ್ದವು. ಆದ್ದರಿಂದ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ನಿರ್ಬಂಧ ಹೇರಲಾಗಿದ್ದು, ಭಾರೀ ದಂಡ ವಿಧಿಸಲಾಗುತ್ತಿದೆ ಎಂದಿದ್ದಾರೆ.
ಪೋರ್ಟೊಫಿನೊದಲ್ಲಿ ಸೆಲ್ಫಿ ತೆಗೆದುಕೊಳ್ಳುವ ನಿರ್ಬಂಧಕ್ಕೆ ಕೂಡ ಸಮಯ ನಿಗಧಿಪಡಿಸಲಾಗಿದೆ. ಬೆಳಗ್ಗೆ 10.30 ರಿಂದ ಸಂಜೆ 6 ರವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತದೆ. ಇನ್ನೂ, ಫೋರ್ಬ್ಸ್ ಪ್ರಕಾರ ಇನ್‌ಸ್ಟಾಗ್ರಾಂನಲ್ಲಿ ಪ್ರಸಿದ್ಧವಾಗಿರುವ ಎರಡು ಸುಂದರವಾದ ಪ್ರವಾಸಿ ತಾಣಗಳಿಗೆ ಈ ಹೊಸ ನಿಯಮಗಳು ಅನ್ವಯಿಸುತ್ತವೆ. ರಂಜಾನ್‌ನ ಅಂತ್ಯದಲ್ಲಿ ಈ ಹೊಸ ನಿಯಮಗಳು ಜಾರಿಗೆ ಬಂದಿದ್ದು, ಪೋರ್ಟೊಫಿನೊದ ಬೀದಿಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಅಕ್ಟೋಬರ್‌ವರೆಗೆ ಈ ನಿಯಮಗಳು ಜಾರಿಯಲ್ಲಿರುತ್ತವೆ ಅಂತಾ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಇನ್ನು ಸೆಲ್ಫಿಗೆ ನಿರ್ಬಂಧ ಹೇರಿರುವುದರಲ್ಲಿ ಇದೇ ಮೊದಲ ಪ್ರವಾಸಿ ತಾಣವಲ್ಲ. ಅಮೆರಿಕ, ಫ್ರಾನ್ಸ್ ಮತ್ತು ಇಂಗ್ಲೆಂಡ್ ಸೇರಿ ಜಗತ್ತಿನ ಹಲವು ಸ್ಥಳಗಳಲ್ಲಿ ಸೆಲ್ಫಿಗಳಿಗೆ ನಿರ್ಬಂಧ ಹೇರಲಾಗಿದೆ. ಆದರೆ, ಪೋರ್ಟೊಫಿನಾದ ನೋ ವೇಟಿಂಗ್ ಝೋನ್‌ಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಭಾರೀ ದಂಡ ವಿಧಿಸುತ್ತಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.