ಅನಾಥ ಅಂತಾ ಯುವಕನನ್ನು ದತ್ತು ಪಡೆದು ಮುದ್ದಾಗಿ ಸಾಕಿದ್ರು.. – ಸೈಕೋ ಮಗ ಆಶ್ರಯಕೊಟ್ಟವರನ್ನೇ ಮುಗಿಸಿಬಿಟ್ಟ!
ತಮಗೆ ಮಕ್ಕಳಿಲ್ಲ ಎಂದು ಆ ದಂಪತಿ ಅನಾಥ ಹುಡುಗನನ್ನು ಆಶ್ರಮದಿಂದ ದತ್ತು ಪಡೆದಿದ್ದರು. ಹೆತ್ತ ಮಗನಂತೆ ಸಾಕಿ ಬೆಳೆಸಿದ್ದರು. ಹೆತ್ತವರು ತನ್ನೊಂದಿಗೆ ಇಲ್ಲ ಎಂಬ ಯಾವ ಕೊರಗು ಬಾರದಿರಲಿ ಎಂದು ಮುದ್ದಾಗಿ ಸಾಕಿದ್ದರು. ಆದರೆ ಈ ದತ್ತು ಮಗ ಮೂರು ಹೊತ್ತು ಅನ್ನ ಹಾಕಿದವರ ಕತೆಯನ್ನೇ ಮುಗಿಸಿದ್ದಾನೆ.
ಏನಿದು ಘಟನೆ?
ಅಮೆರಿಕದ ಫ್ಲೋರಿಡಾದ ಉತ್ತರ ಬಂದರಿನಲ್ಲಿ ಈ ಘಟನೆ ನಡೆದಿದೆ. ರಿಯಲ್ ಎಸ್ಟೇಟ್ ಏಜೆಂಟ್ ರಾಬಿ ಮತ್ತು ಜೆನ್ನಿಫರ್ ಟವರ್ ದಂಪತಿಗೆ ಮಕ್ಕಳಿಲ್ಲ. ಹೀಗಾಗಿ ಈ “ಕೇರಿಂಗ್” ದಂಪತಿ ಸುಮಾರು 7 ವರ್ಷಗಳ ಹಿಂದೆ ಉಕ್ರೇನಿಯನ್ ಅನಾಥಾಶ್ರಮದಿಂದ 21 ವರ್ಷದ ಡಿಮಾ ಎಂಬ ಹುಡುಗನನ್ನು ದತ್ತು ಪಡೆದಿದ್ದಾರೆ. ಆತನನ್ನು ಸ್ವಂತ ಮಗನಂತೆ ಸಾಕಿ ಬೆಳೆಸಿದ್ದಾರೆ. ತಂದೆ ತಾಯಿ ಇಲ್ಲ ಎಂಬ ಕೊರಗು ಬಾರದಿರಲಿ ಎಂದು ಮುದ್ದಾಗಿ ಸಾಕಿದ್ದಾರೆ. ಆದರೆ ದತ್ತು ಪುತ್ರ ಸಾಕಿ ಸಲಹಿದವರನ್ನೇ ಕೊಲೆ ಮಾಡಿದ್ದಾನೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಮೇಲೆ ಹರಿದ ಖಾಸಗಿ ಬಸ್ – ನಾಲ್ಕು ವಿದ್ಯಾರ್ಥಿಗಳಿಗೆ ಗಂಭೀರ ಗಾಯ, ಬದುಕಿ ಬರಲಿಲ್ಲ ತುಳಸಿ..!
ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಮನೆಯಲ್ಲಿ ಜೋರಾಗಿ ಜಗಳ ನಡೆಯುತ್ತಿದೆ ಎಂದು ಪೊಲೀಸರು ಕರೆ ಸ್ವೀಕರಿಸಿದ್ದಾರೆ. ಕರೆ ಬಂದ ಬೆನ್ನಲ್ಲೇ ಪೊಲೀಸರು ಘಟನಾ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆಗಾಗಲೇ ರಾಬಿ ಮತ್ತು ಜೆನ್ನಿಫರ್ ಚೂರಿ ಇರಿತಕ್ಕೊಳಗಾಗಿಸಾವಿಗೀಡಾಗಿದ್ದರು. ಇಡೀ ಕೋಣೆ ರಕ್ತಮಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ದಂಪತಿಗಳನ್ನು ಕೊಂದ ನಂತರ, ಡಿಮಾ ಕಾರಿನಲ್ಲಿ ತಪ್ಪಿಸಿಕೊಂಡು ಅಲ್ಲಿಂದ ತೆರಳಿದ್ದಾರೆ. ನಂತರ ಆತ ಕಾಲ್ನಡಿಗೆಯಲ್ಲೇ, ದಟ್ಟವಾದ ಕಾಡಿಗೆ ಪ್ರವೇಶಿಸಿದ್ದ. ಸುಮಾರು ಎಂಟು ಗಂಟೆಗಳ ಶೋಧದ ನಂತರ ಪೊಲೀಸರು ಅವನನ್ನು ವಶಕ್ಕೆ ಪಡೆದಿದ್ದಾರೆ.
ಸಂಬಂಧಿಕರು ಹೇಳೋದೇನು?
ಮೃತ ರಾಬಿ ಟವರ್ ಅವರ ಚಿಕ್ಕಪ್ಪ ವಾರೆನ್ ರೈನ್ಸ್ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಇವರಿಬ್ಬರು ನಿಜಕ್ಕೂ ಒಳ್ಳೆಯ ಜನರಾಗಿದ್ದರು. ಡಿಮಾನ ಜೀವನದಲ್ಲಿ ಆ ದಂಪತಿ ತುಂಬಾ ಸಹಾಯ ಮಾಡಿದ್ದರು. ಡಿಮಾ ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡಿದ್ದಾನೆ. ಕುಡುಕ ತಂದೆ ಅವನನ್ನು ತ್ಯಜಿಸಿದ್ದರು. ನಂತರ ಡಿಮಾ ಅನಾಥಾಶ್ರಮದಲ್ಲಿ ಆಶ್ರಯ ಪಡೆದಿದ್ದ. ಆತನ್ನು ಈ ದಂಪತಿ ದತ್ತು ಪಡೆದು ಸಾಕಿದ್ದರು. ಅವರು ಆತನನ್ನು ತಮ್ಮ ಮಗನಂತೆ ಪರಿಗಣಿಸಿದ್ದರು. ಆದರೆ ಡಿಮಾ ಇವರಿಬ್ಬರ ಮೇಲೆ ತುಂಬಾ ದ್ವೇಷ ಸಾಧಿಸುತ್ತಿದ್ದ. ಪ್ರತಿ ಬಾರಿಯೂ ಜಗಳವಾಡುತ್ತಿದ್ದ ಎಂದು ಹೇಳಿದ್ದಾರೆ.