ಶ್ರೀಮಂತರ ಮನೆಯಲ್ಲಿ ಕದ್ದು, ಬಡವರಿಗೆ ನೆರವಾಗುತ್ತಿದ್ದ ಕಳ್ಳ

ಶ್ರೀಮಂತರ ಮನೆಯಲ್ಲಿ ಕದ್ದು, ಬಡವರಿಗೆ ನೆರವಾಗುತ್ತಿದ್ದ ಕಳ್ಳ

ಚೆನ್ನೈ: ವ್ಯಕ್ತಿಯೊಬ್ಬ ಶ್ರೀಮಂತರ ಮನೆಗೆ ನುಗ್ಗಿ ಕಳ್ಳತನ ಮಾಡಿ, ಬಡವರಿಗೆ ನೆರವಾಗುತ್ತಿದ್ದ ಕಳ್ಳನೊಬ್ಬ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಆತನಿಂದ ಸುಮಾರು 11 ಪವನ್ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಹಾಲಿ ಕೋಚ್‌ಗೆ ಮಾತಿನಲ್ಲೇ ಚುಚ್ಚಿದ ಮಾಜಿ ಕೋಚ್ -ವಿಶ್ರಾಂತಿ ಬಗ್ಗೆ ಶಾಸ್ತ್ರಿ ಪಾಠ

ಇತ್ತೀಚೆಗೆ, ಚೆನ್ನೈ ಸಮೀಪದ ತಾಂಬರಂ ಎಂಬ ಏರಿಯಾದ 55 ವರ್ಷದ ನಿವಾಸಿ ವರದರಾಜನ್ ಎಂಬುವರು ಅನಾರೋಗ್ಯದ ಕಾರಣ ಎರಡು ದಿನ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಬಳಿಕ ಸುಧಾರಿಸಿಕೊಂಡು, ಅವರು ಮನೆಗೆ ವಾಪಸ್ ಬಂದಿದ್ದಾರೆ. ಈ ವೇಳೆ ಅವರ ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕೂಡಲೇ ವರದರಾಜನ್ ಸಮೀಪದ ಪೊಲೀಸ್ ಠಾಣೆಗೆ ತೆರಳಿ, ದರೋಡೆ ನಡೆದಿರುವ ಬಗ್ಗೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದು, ಘಟನೆ ನಡೆದ ಸ್ಥಳಕ್ಕೆ ತೆರಳಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆ ಸಿಸಿಟಿವಿಯಲ್ಲಿ ಓರ್ವ  ವ್ಯಕ್ತಿ ಚಲನವಲನ ದಾಖಲಾಗಿತ್ತು. ಆತ ಯಾರು ಅಂತ ಪರಿಶೀಲಿಸಿದಾಗ, ಆತ ಎಗ್ಮೋರ್‌ ಎಂಬ ಪ್ರದೇಶದಲ್ಲಿ  ವಾಸಿಸುವ 33 ವರ್ಷದ ಅನ್ಬುರಾಜ್ ಎಂಬುದು ತಿಳಿದು ಬಂದಿದೆ. ಆದರೆ ಅಷ್ಟರಲ್ಲಾಗಲೇ ಅನ್ಬುರಾಜ್ ತಲೆಮರೆಸಿಕೊಂಡಿದ್ದ. ಕೊನೆಗೆ ಎಗ್ಮೋರ್ ರೈಲು ನಿಲ್ದಾಣ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹತ್ತು ದಿನಗಳಿಗೂ ಹೆಚ್ಚು ಕಾಲ ಶೋಧ ನಡೆಸಿದ ಅಪರಾಧ ವಿಭಾಗದ ಪೊಲೀಸರು, ಕೊನೆಗೂ ಅನ್ಬುರಾಜ್‌ನನ್ನು ಬಂಧಿಸಿದ್ದಾರೆ.

ತನಿಖೆಯಲ್ಲಿ ಸ್ಫೋಟಕ ಮಾಹಿತಿ

ಅನ್ಬುರಾಜ್ ಸಾದಾ ಸೀದ ಕಳ್ಳನಲ್ಲ. ಈತ ಕಳೆದ ನಾಲ್ಕು ತಿಂಗಳಲ್ಲಿ ಪೆರುಂಗಲತ್ತೂರ್ ಪ್ರದೇಶದಲ್ಲಿ ಮಾತ್ರ ಪ್ರತಿ ತಿಂಗಳು ಒಂದು ಮನೆಯನ್ನು ಲೂಟಿ ಮಾಡುತ್ತಿದ್ದ ತಿಂಗಳಿಗೊಮ್ಮೆ ರೈಲಿನಲ್ಲಿ ಬರುವ ಅನ್ಬುರಾಜ್, ತಾಂಬರಂ ಮತ್ತು ಪೆರುಂಗಲತ್ತೂರ್ ಎಂಬ ಪ್ರದೇಶಗಳ ಸುತ್ತಮುತ್ತ ಮನೆ ಲೂಟಿ ಮಾಡುತ್ತಿದ್ದ. ಆರೋಪಿ ಅನ್ಬುರಾಜ್ ಕದ್ದ ಒಡವೆಗಳನ್ನು ಮಾರಿ, ಹಣ ತಂದು. ಆ ಹಣದಿಂದ ರಸ್ತೆ ಬದಿ ಮತ್ತು ರೈಲ್ವೆ ನಿಲ್ದಾಣದ ಪಕ್ಕದಲ್ಲಿ ಬೀಡುಬಿಟ್ಟಿರುವ ನಿರಾಶ್ರಿತರಿಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಕೊಡಿಸುತ್ತಿದ್ದ ಎಂದು ಪೊಲೀಸರ ಎದುರು ಬಾಯಿ ಬಿಟ್ಟಿದ್ದಾನೆ.

ವಿಚಾರಣೆ ಬಳಿಕ ಆರೋಪಿ ಅನ್ಬುರಾಜ್‌ನನ್ನು ತಾಂಬರಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ವೇಳೆ ತಾನು ಕದ್ದ ಹಣದಿಂದ ಅಗತ್ಯವಿರುವವರಿಗೆ ಆಹಾರ, ಬಟ್ಟೆ ಮತ್ತು ಇತರ ವಸ್ತುಗಳನ್ನು ನೀಡಿದ್ದೇನೆ. ಈ ತೃಪ್ತಿ ನನಗಿದೆ ಅಂತ ಹೇಳಿದ್ದಾನೆ. ಸದ್ಯ ಆತನ್ನು ಜೈಲಿಗೆ ಕಳುಹಿಸಲಾಗಿದೆ.

suddiyaana