ಶಿವಾಜಿನಗರದಲ್ಲಿ GBA ಅಧಿಕಾರಿಗಳ ಮೇಲೆ ಮಾರಾಣಾಂತಿಕ ಹಲ್ಲೆ- 7 ಜನ ಅರೆಸ್ಟ್, ಕೃಷ್ಣಭೈರೇಗೌಡ ಆಕ್ರೋಶ

ಶಿವಾಜಿನಗರದಲ್ಲಿ GBA ಅಧಿಕಾರಿಗಳ ಮೇಲೆ ಮಾರಾಣಾಂತಿಕ ಹಲ್ಲೆ-  7 ಜನ ಅರೆಸ್ಟ್, ಕೃಷ್ಣಭೈರೇಗೌಡ ಆಕ್ರೋಶ

ಬೆಂಗಳೂರಿನ ಶಿವಾಜಿನಗರದಲ್ಲಿ ಜಿಬಿಎ ವತಿಯಿಂದ ನಡೆದ ಫುಟ್​ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಮಂಗಳವಾರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಸ್ಥಳೀಯ ಸಂಘಟನೆಗಳ ಸದಸ್ಯರು ಪಾಲಿಕೆ ಸಿಬ್ಬಂದಿ ಮತ್ತು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಜೆಸಿಬಿ ಬಳಸಿ ಫುಟ್​ಪಾತ್ ಅತಿಕ್ರಮಣಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಸಿಬ್ಬಂದಿ ಮುಂದಾದಾಗ, ಸ್ಥಳೀಯ ಸಂಘಟನೆಗಳ ಕಾರ್ಯಕರ್ತರು ಅಡ್ಡಿಪಡಿಸಿದರು. ಈ ವೇಳೆ, ಪಾಲಿಕೆಯ ಇಂಜಿನಿಯರ್‌ಗಳು ಮತ್ತು ಜೆಸಿಬಿ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಗಳು ಕೇಳಿಬಂದಿವೆ. ಒಬ್ಬ ಪಾಲಿಕೆ ಸಿಬ್ಬಂದಿಯ ಮೇಲೆ ಹೆಲ್ಮೆಟ್‌ನಿಂದ ಹಲ್ಲೆ ಮಾಡಲು ಪ್ರಯತ್ನಿಸಲಾಯಿತು ಎಂದು ಪಾಲಿಕೆ ಸಿಬ್ಬಂದಿ ತಿಳಿಸಿದ್ದಾರೆ. ಅಲ್ಲದೆ, ಜೆಸಿಬಿ ಚಾಲಕನ ಮೇಲೆ ಪೆಪ್ಪರ್ ಸ್ಪ್ರೇ ಮಾಡಲಾಯಿತು ಎಂದೂ ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಟಾಕ್ಸಿಕ್ ಸಿನಿಮಾದ ಮತ್ತೊಂದು ಸಾಂಗ್ ರಿಲೀಸ್ – ನಾಯಕಿಯರ ಜೊತೆ ಯಶ್ ರೋಮ್ಯಾನ್ಸ್

ಈ ಬಗ್ಗೆ ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಕೂಡ ಮಾತನಾಡಿದ್ದಾರೆ. ಜೀವನೋಪಯೋಗಕ್ಕಾಗಿ ಕಷ್ಟಪಟ್ಟು ದುಡಿಯುವ ಬಡಜನರಲ್ಲ. ಇವರು ಸಮಾಜಘಾತುಕ ಶಕ್ತಿಗಳು ಎಂದಿದ್ದಾರೆ. ಸರ್ಕಾರಿ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದ ಪ್ರತಿಯೊಬ್ಬರನ್ನೂ ಬಂಧಿಸಲಾಗುವುದು ಈ ಬಗ್ಗೆ ಪೊಲೀಸ್ ಆಯುಕ್ತರು ಮತ್ತು ಜಿಬಿಎ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದವರು ತಿಳಿಸಿದ್ದಾರೆ. ಸಾರ್ವಜನಿಕ ಕರ್ತವ್ಯದಲ್ಲಿರುವ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವ ಯಾರನ್ನೂ ಸಹ ನಾವು ಬಿಡುವುದಿಲ್ಲ. ನಾನು ಜಿಬಿಎ (GBA) ಮತ್ತು ಪೊಲೀಸರೊಂದಿಗೆ ಸತತ ಸಂಪರ್ಕದಲ್ಲಿದ್ದು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇನೆ. ಅಲ್ಲದೆ ನಾವು ಒಟ್ಟಾಗಿ ಮಾದರಿಯಾಗುವಂತಹ ಕಠಿಣ ಕ್ರಮಗಳನ್ನು ಜರುಗಿಸುತ್ತಿದ್ದೇವೆ ಎಂದವರು ತಿಳಿಸಿದ್ದಾರೆ.

ಫುಟ್​ಪಾತ್​ ತೆರವು ವೇಳೆ ಅಧಿಕಾರಿಗಳ ಮೇಲೆ ದಾಳಿ ಸಂಬಂಧ 7 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಆಮ್ಟೆ ತಿಳಿಸಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಹಲ್ಲೆ ನಡೆದಿರುವ ಬಗ್ಗೆ ಎಇಇ ಮಾಧವ ರಾವ್ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಲಾಗಿದೆ. ವಿಶೇಷ ತಂಡ ರಚಿಸಿ ತನಿಖೆ ಮಾಡುತ್ತೇವೆ. ರಕ್ಷಣೆ ಕೋರಿ ಅಧಿಕಾರಿಗಳು ಮನವಿ ಸಲ್ಲಿಸಿದ್ದ ಬಗ್ಗೆ ಪರಿಶೀಲಿಸುತ್ತೇವೆ. ಕಾನೂನು ಕೈಗೆ ತೆಗೆದುಕೊಳ್ಳೋಕೆ ಯಾರಿಗೂ ಹಕ್ಕಿಲ್ಲ. ಯಾರೇ ತಪ್ಪು ಮಾಡಿದರೂ ಅವರನ್ನು ಯಾವುದೇ ಕಾರಣಕ್ಕೂ ಬಿಡಲ್ಲ ಎಂದವರು ತಿಳಿಸಿದ್ದಾರೆ.

Kishor KV