ಜನವರಿ 1 ರಂದು ಮಾತ್ರ ಹೊಸ ವರ್ಷನಾ? – ಯಾವ ಸಂಸ್ಕೃತಿಗಳಲ್ಲಿ ಯಾವಾಗ ಹೊಸ ವರ್ಷ?
2023ಕ್ಕೆ ಬಾಯ್ ಹೇಳಿ ಈಗ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಪ್ರತಿ ವರ್ಷ ಕ್ಯಾಲೆಂಡರ್‌ನಲ್ಲಿ ಜನವರಿ 1 ಅಂದ್ರೆ ಅದು ಹೊಸವರ್ಷ ಅಂತಾ ಅನೇಕ ದೇಶಗಳು ಪರಿಗಣಿಸುತ್ತವೆ. ಹೀಗಾಗಿ ಇಡೀ ವಿಶ್ವವೇ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿವೆ. ನಾವು ಸಾಮಾನ್ಯವಾಗಿ ಜನವರಿ 1ನ್ನು ಹೊಸ ವರ್ಷ ಹೇಳುತ್ತಿರುತ್ತೇವೆ. ಆದರೆ ಇದು ಎಲ್ಲಾ ದೇಶಗಳ ಸಂಸ್ಕೃತಿಗೂ ಅನ್ವಯಿಸುತ್ತಾ.? ಯಾಕಂದ್ರೆ ಜಗತ್ತಿನ ಹಲವು ರಾಷ್ಟ್ರಗಳ ಹಲವು ಸಂಸ್ಕೃತಿಗಳು ಜನವರಿ 1ನ್ನು ಹೊಸವರ್ಷವೆಂದು ಪರಿಗಣಿಸಲ್ಲ.. ಜನವರಿ 1 ನ್ನು ಯಾಕೆ ಹೊಸ ವರ್ಷ ಅಂತಾ ಕೆಲ ಸಂಸ್ಕೃತಿಗಳು ಆಚರಿಸಲ್ಲ ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಹೊಸವರ್ಷಕ್ಕೆ ಸಿಬ್ಬಂದಿಗೆ ಗುಡ್‌ನ್ಯೂಸ್ ಕೊಟ್ಟ ಬಿಎಂಟಿಸಿ – 6,960 ಕೇಸ್‌ಗಳು ಖುಲಾಸೆ!
ಜನವರಿ 1, ಮಧ್ಯರಾತ್ರಿ 12 ಗಂಟೆಗೆ ವಿಶ್ವದ ಜನರು ಹೊಸ ವರ್ಷವನ್ನು ಸಂಭ್ರಮದಿಂದ ಆಚರಣೆ ಮಾಡಿ ಬರಮಾಡಿಕೊಂಡಿದ್ದಾರೆ. ಅನೇಕ ರಾಷ್ಟ್ರದ ಜನರು ಅದ್ಧೂರಿಯಾಗಿ 2024 ರ ಹೊಸ ವರ್ಷವನ್ನು ಆಚರಿಸಿದ್ದಾರೆ. ಆದ್ರೆ ಹಲವು ಸಂಸ್ಕೃತಿಗಳಿಗೆ ಜನವರಿ 1 ಹೊಸವರ್ಷವಲ್ಲ. ಭಾರತದಲ್ಲೂ ಜನವರಿ 1 ಹೊಸವರ್ಷವಲ್ಲ ಅಂದಾಕ್ಷಣ.. ಹೌದು ನಮ್ಮಲ್ಲಿ ಯುಗಾದಿಗೆ ಹೊಸ ವರ್ಷ ಬರೋದು ಅಂತ ನೀವು ಹೇಳಬಹುದು.. ಅದು ನಿಜ.. ಕನ್ನಡಿಗರು ಹಾಗೂ ತೆಲುಗಿನವರಿಗೆ ಯುಗಾದಿ ಹಬ್ಬವೇ ಹೊಸ ವರ್ಷ. 2024ರ ಹೊಸ ವರ್ಷ ಏಪ್ರಿಲ್ 9ರ ಯುಗಾದಿಯಿಂದ ಆರಂಭವಾಗುತ್ತಿದೆ. ಹಾಗೆಯೇ ಸೌರಮಾನ ಯುಗಾದಿಯನ್ನು ಆಚರಿಸುವ ಭಾರತದ ಬಹುತೇಕ ರಾಜ್ಯಗಳ ಜನರ ಪಾಲಿಗೆ ಏಪ್ರಿಲ್ 14ರಿಂದ ಹೊಸ ವರ್ಷ ಶುರುವಾಗುತ್ತೆ. ಕರ್ನಾಟಕದ ಕರಾವಳಿ ಜಿಲ್ಲೆಗಳು, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಏಪ್ರಿಲ್ 14ರಿಂದ ಹೊಸ ವರ್ಷ ಆರಂಭವಾಗುತ್ತದೆ. ಇದು ನಮ್ಮ ದೇಶದ ಆಚರಣೆಗಳು.. ಇದು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ. ಇನ್ನೂ ಹಲವು ದೇಶಗಳಲ್ಲಿ ಅವರ ಸಂಸ್ಕೃತಿಗೆ ತಕ್ಕಂತೆ ಹೊಸ ವರ್ಷವನ್ನು ಆಚರಿಸಲಾಗುತ್ತದೆ.
ನಮ್ಮ ನೆರೆಯ ರಾಷ್ಟ್ರ ಚೀನಾದಲ್ಲಿ ಚಂದ್ರನನ್ನು ಆಧರಿಸಿ ಹೊಸ ವರ್ಷಾಚರಣೆ ಮಾಡ್ತಾರೆ. ಇದನ್ನು ಸ್ಪ್ರಿಂಗ್ ಫೆಸ್ಟಿವಲ್ ಅಂತಾ ಕರಿತಾರೆ. ಇದು ಚೀನಾದಲ್ಲಿ ಸುಗ್ಗಿಯ ಋತುವಿನ ಆರಂಭವನ್ನು ಸೂಚಿಸುತ್ತೆ. ಸಾಮಾನ್ಯವಾಗಿ ಜನವರಿ 21ರಿಂದ ಫೆಬ್ರವರಿ 20 ರ ನಡುವೆ ಬರುವ ಹೊಸ ಚಂದ್ರನೇ ಚೀನೀಗಳ ಪಾಲಿಗೆ ಹೊಸ ವರ್ಷ. 2024ರಲ್ಲಿ ಫೆಬ್ರವರಿ 10ರಂದು ಚೀನಾ ಹೊಸ ವರ್ಷ ಆಚರಿಸಲಿದೆ. ಚೀನಾ ಮಾದರಿಯನ್ನೇ ಅನುಸರಿಸುವ ಕೊರಿಯಾ ಮತ್ತು ವಿಯಟ್ನಾಂನಲ್ಲೂ ಫೆಬ್ರವರಿ 10ರಿಂದ ಹೊಸ ವರ್ಷ ಶುರುವಾಗಲಿದೆ. ಇದರ ಜೊತೆಗೆ ಇಸ್ಲಾಂ ಪ್ರಕಾರ ಹಿಜ್ರಿ ವರ್ಷಗಳಲ್ಲಿ ಹೊಸವರ್ಷಾಚರಣೆ ಮಾಡಲಾಗುತ್ತಿದ್ದು ಮೊಹರಂ ಹಬ್ಬದ ದಿನದಿಂದ ಹೊಸ ವರ್ಷ ಆರಂಭವಾಗುತ್ತದೆ.
ಇನ್ನು ನಮ್ಮ ನೆರೆಯ ರಾಷ್ಟ್ರ ಶ್ರೀಲಂಕಾದಲ್ಲೂ ಏಪ್ರಿಲ್ 14ರಂದೇ ಹೊಸ ವರ್ಷ ಆಚರಿಸುತ್ತಾರೆ. ಸಿಂಹಳೀಯರು ಅಲುತ್ ಅವುರುದ್ದ ಹೆಸರಿನಲ್ಲಿ ಹೊಸ ವರ್ಷ ಆಚರಿಸುತ್ತಾರೆ. ಇನ್ನು ಈರಾನ್‌ನಲ್ಲಿ ನೌರುಜ್ ಹೆಸರಿನಲ್ಲಿ ಪರ್ಷಿಯನ್ ಪ್ರಕಾರ ಹೊಸ ವರ್ಷದ ಆಚರಣೆ ಶುರುವಾಗುತ್ತದೆ. ಮಾರ್ಚ್ 20 ಅಥವಾ 21ರಂದು ನೌರುಜ್ ಆಚರಿಸಲಾಗುತ್ತಿದೆ. ಹೀಗೆ ದೇಶ ವಿದೇಶಗಳ ಹಲವು ಸಂಸ್ಕೃತಿಗಳಲ್ಲಿ ಸೂರ್ಯ ಮತ್ತು ಚಂದ್ರನ ಚಲನೆಯ ಆಧಾರದ ಮೇಲೆಯೇ ಹೊಸ ವರ್ಷ ಆಚರಿಸುತ್ತಿರುವುದು ವಿಶೇಷ.. ಹಾಗಿದ್ದರೂ ಜನವರಿ 1 ಎನ್ನುವುದು ಈಗ ಜಾಗತಿಕ ಮಟ್ಟದಲ್ಲಿ ಹೊಸ ವರ್ಷವಾಗಿ ಆಚರಿಸಲಾಗುತ್ತಿದೆ.