ಕಾರಿನಲ್ಲಿತ್ತು 10 ಅಡಿ ಉದ್ದದ ಕಾಳಿಂಗ ಸರ್ಪ! – ನೂರಾರು ಕಿ.ಮೀ  ಪ್ರಯಾಣಿಸಿದ್ರು ಗೊತ್ತೇ ಆಗಲಿಲ್ಲ!

ಕಾರಿನಲ್ಲಿತ್ತು 10 ಅಡಿ ಉದ್ದದ ಕಾಳಿಂಗ ಸರ್ಪ! – ನೂರಾರು ಕಿ.ಮೀ  ಪ್ರಯಾಣಿಸಿದ್ರು ಗೊತ್ತೇ ಆಗಲಿಲ್ಲ!

ಅದೊಂದು ಕುಟುಂಬ ಸಂಬಂಧಿಕರ ಮನೆಗೆ ಕಾರಿನಲ್ಲಿ ಹೊರಟಿದ್ದರು. ಕಾರಿನಲ್ಲಿ ನಾಲ್ವರು ನೂರಾರು ಕಿ.ಮೀ ಪ್ರಯಾಣ ಮಾಡಿದ್ದಾರೆ. ಅವರ ಯೋಜನೆಯಂತೆ ಸರಿಯಾದ ಸಮಯಕ್ಕೆ ಸಂಬಂಧಿಕರ ಮನೆಗೆ ಬಂದಿದ್ದಾರೆ. ಆದರೆ ಕಾರಿನಿಂದ ಇಳಿಯುತ್ತಿದ್ದಂತೆ ಆ ಕುಟುಂಬಕ್ಕೆ ದೊಡ್ಡ ಶಾಕ್‌ ಎದುರಾಗಿತ್ತು. ತಾವು ಮಾತ್ರ ಈ ಕಾರಿನಲ್ಲಿ ಪ್ರಯಾಣಿಸುತ್ತಿದ್ದೇವೆ ಅಂತಾ ಅಂದುಕೊಂಡಿದ್ದ ಕುಟುಂಬಕ್ಕೆ ಕಾರಿನಲ್ಲಿ ಮತ್ತೊಬ್ಬರು ಇರುವುದು ಕಂಡು ಜೀವ ಬಾಯಿಗೆ ಬಂದಂತಾಗಿದೆ.

ಏನಿದು ಘಟನೆ?

ರಾಮನಗರದ ಕುಟುಂಬವೊಂದು ಕಾರವಾರದ ಕುಂಬಾರವಾಡದಲ್ಲಿರುವ ಸಂಬಂಧಿಕರ ಮನೆಗೆ ಪ್ರಯಾಣ ಬೆಳೆಸಿದೆ. ಈ ಕಾರಿನಲ್ಲಿ ಬರೋಬ್ಬರಿ 10 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದ್ದು, ಕಾರಿನಲ್ಲಿ ಪ್ರಯಾಣಿಸಿದ ನಾಲ್ವರು ಪವಾಡ ಸದೃಶ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಸಂಬಂಧಿಕರ ಮನೆಯಲ್ಲಿ ವಾಹನ ನಿಲ್ಲಿಸಿದ ಬಳಿಕವಷ್ಟೇ ಕಾರಿನಲ್ಲಿ ಹಾವಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಬದುಕಿನ ಪಯಣ ಮುಗಿಸಿದ ಮಾಜಿ ವಿಶ್ವಸುಂದರಿ ಸ್ಪರ್ಧಿ – ‘ಎಂದೆಂದಿಗೂ ಮೇಲಕ್ಕೆ ಹಾರು ನನ್ನ ಪುಟ್ಟ ತಂಗಿ’ ಎಂದು ಸಹೋದರನ ಕಂಬನಿ

ಹಾವು ಇರುವುದು ಗೊತ್ತಾಗಿದ್ದು ಹೇಗೆ?

ಸಂಬಂಧಿಕರ ಮನೆಗೆ ಬಂದ ಕೂಡಲೇ ನಾಲ್ವರು ಕಾರಿನಿಂದ ಇಳಿದಿದ್ದಾರೆ. ಕಾರಿನಿಂದ ಇಳಿದು ಸಂಬಂಧಿಕರೊಂದಿಗೆ ಮಾತಿನಲ್ಲಿ ಬ್ಯೂಸಿಯಾಗಿದ್ದಾರೆ. ಆಗ ಮನೆಯಲ್ಲಿದ್ದ ಬೆಕ್ಕು ವಿಚಿತ್ರವಾಗಿ ವರ್ತಿಸಲು ಶುರುಮಾಡಿದೆ. ಆಡುತ್ತಾ ಆಡುತ್ತಾ ಕಾರನ್ನು ಪರಿಶೀಲಿಸಲಾರಂಭಿಸಿದೆ. ಇದನ್ನು ಕಂಡ ಕುಟುಂಬ ಏನಾಗಿರಬಹುದೆಂದು ಕಾರನ್ನು ಪರಿಶೀಲಿಸಲು ಮುಂದಾಗಿದೆ. ಈ ವೇಳೆ ಕಾರಿನಿಂದ ದೊಡ್ಡ ಶಬ್ದವೊಂದು ಕೇಳಿಸಿದೆ. ಆಗ ಕಾರಿನೊಳಗೆ ದೊಡ್ಡ ಕಾಳಿಂಗ ಸರ್ಪವೊಂದು ಇರುವುದು ಕಂಡುಬಂದಿದೆ. ಇದನ್ನು ಕಂಡು ಆಘಾತಕ್ಕೊಳಗಾದ ಕುಟುಂಬದವರು, ತಕ್ಷಣವೇ ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಹಾವು ರಕ್ಷಕರನ್ನು ಕರೆಸಿದ್ದಾರೆ. ಸುದೀರ್ಘ ಕಾರ್ಯಾಚರಣೆ ಬಳಿಕ ಹಾವನ್ನು ರಕ್ಷಿಸಿ, ಕಾಡಿಗೆ ಬಿಡಲಾಗಿದೆ. ಇದೀಗ ಈ ಕುಟುಂಬ ಬದುಕಿದೆಯಾ ಬಡ ಜೀವವೇ ಅಂತಾ ನಿಟ್ಟುಸಿರು ಬಿಟ್ಟಿದ್ದಾರೆ.

Shwetha M