ಬೆಂಗಳೂರಲ್ಲಿ ನೀರಿಲ್ಲ, ಆರ್ಸಿಬಿ ಪಂದ್ಯ ನೋಡೋಕೆ ಆಗಲ್ಲ..! – ಜಲಕಂಟಕದಿಂದಾಗಿ ಮ್ಯಾಚ್ ಶಿಫ್ಟ್ ಮಾಡುವಂತೆ ಒತ್ತಾಯ
ಭಾರತದಲ್ಲಿ ಈಗಾಗ್ಲೇ ಐಪಿಎಲ್ ಫೀವರ್ ಜೋರಾಗೇ ಇದೆ. ವುಮೆನ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದೂಟ ಬಡಿಸ್ತಿದೆ. ಇದೀಗ ಮೆನ್ಸ್ ಐಪಿಎಲ್ ಗೆ ಕೌಂಟ್ ಡೌನ್ ಶುರುವಾಗಿದ್ದು ಆರ್ ಸಿಬಿ ಅಬ್ಬರ ನೋಡೋಕೆ ಬೆಂಗಳೂರಿಗರು ತುದಿಗಾಲಲ್ಲಿ ನಿಂತಿದ್ದಾರೆ. ಈ ಸಲ ಕಪ್ ನಮ್ದೇ ಅಂತಾ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊಹ್ಲಿ ಮತ್ತು ಟೀಂಗೆ ಸಪೋರ್ಟ್ ಮಾಡಲು ಕೋಟ್ಯಂತರ ಅಭಿಮಾನಿಗಳು ಕಾಯ್ತಿದ್ದಾರೆ. ಆದ್ರೆ ಈ ಬಾರಿಯ ಐಪಿಎಲ್ ನೋಡೋ ಅದೃಷ್ಟ ಕನ್ನಡಿಗರಿಗೆ ಇಲ್ಲ ಅನ್ಸುತ್ತೆ. ನೀರಿನ ಬರ ಕ್ರಿಕೆಟ್ ಗೂ ತಟ್ಟಿದೆ. ಯಾಕೆಂದರೆ, ಬೆಂಗಳೂರಲ್ಲಿ ಬೇಸಿಗೆಯ ಧಗೆ ಶುರುವಾಗಿದೆ. ಹನಿ ನೀರಿಗೂ ಪರದಾಡುವ ಅನಿವಾರ್ಯತೆ ಎದುರಾಗಿದೆ. ಕುಡಿಯುವ ನೀರಿಗಾಗಿ ಪರಾದಾಡುವ ಸ್ಥಿತಿ ಇರುವಾಗ ಐಪಿಎಲ್ ಪಂದ್ಯಾವಳಿ ನಡೆಸಿದ್ರೆ ಮತ್ತಷ್ಟು ನೀರಿನ ಬವಣೆ ಎದುರಿಸಬೇಕಾಗುತ್ತೆ. ಹೀಗಾಗಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಪಿಎಲ್ ಪಂದ್ಯಗಳನ್ನು ಬೇರೆ ರಾಜ್ಯಕ್ಕೆ ಶಿಫ್ಟ್ ಮಾಡುವಂತೆ ಒತ್ತಾಯ ದಿನೇ ದಿನೇ ಜಾಸ್ತಿಯಾಗುತ್ತಿದೆ.
ಇದನ್ನೂ ಓದಿ: ರಿಷಭ್ ಪಂತ್ ಫಿಟ್ ಅಂಡ್ ಫೈನ್ – ಕೊನೆಗೂ ಹಸಿರು ನಿಶಾನೆ ತೋರಿಸಿದ ಎನ್ಸಿಎ!
ಮಾರ್ಚ್ 22ರಿಂದ ಐಪಿಎಲ್ ಪಂದ್ಯಾವಳಿ ಆರಂಭವಾಗಲಿದೆ. ಮಾರ್ಚ್ 29ರಂದು ಬೆಂಗಳೂರಿನಲ್ಲಿ ಮೊದಲ ಮ್ಯಾಚ್ ನಡೆಯಲಿದೆ. ಈ ಸೀಜನ್ ನಲ್ಲಿ ಬೆಂಗಳೂರಿನಲ್ಲಿ ಸುಮಾರು 9ಕ್ಕೂ ಹೆಚ್ಚು ಮ್ಯಾಚ್ ನಡೆಯಲಿವೆ. ಬೆಂಗಳೂರನ್ನು ಜಲಕಂಟಕ ಕಾಡುತ್ತಿರುವಾಗ ಐಪಿಎಲ್ ಮ್ಯಾಚ್ ನಡೆದರೆ ನೀರಿನ ಅಭಾವ ಇನ್ನೂ ಜಾಸ್ತಿಯಾಗುತ್ತದೆ. ಹೀಗಾಗಿ ಈ ವರ್ಷ ಬೆಂಗಳೂರಿನಲ್ಲಿ ಆಯೋಜನೆ ಆಗಿರುವ ಪಂದ್ಯ ಕ್ಯಾನ್ಸಲ್ ಮಾಡಿ ಎಂಬ ಅಭಿಯಾನ ಶುರುವಾಗಿದೆ.
ಕ್ರಿಕೆಟ್ ಹಬ್ಬ ಐಪಿಎಲ್ ಮಾರ್ಚ್ 22ರಿಂದ ಆರಂಭವಾಗಲಿದೆ. ಮಾರ್ಚ್ 29ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮ್ಯಾಚ್ ನಡೆಯಲಿದೆ. ಐಪಿಎಲ್ನಲ್ಲಿ ಆರ್ಸಿಬಿ ಮ್ಯಾಚ್ ನೋಡುವ ಸಂಭ್ರಮವೇ ಬೇರೆ . ಅದರಲ್ಲೂ ಆರ್ಸಿಬಿ ಮೇಲೆ ಫ್ಯಾನ್ಸ್ಗಿರುವ ಕ್ರೇಜೇ ಬೇರೆ ಲೆವೆಲ್ನಲ್ಲಿದೆ. ಇನ್ನು ಬೆಂಗಳೂರಿನಲ್ಲಿ ಆರ್ಸಿಬಿ ಮ್ಯಾಚ್ ಇದೆ ಅಂದರೆ ಕೇಳ್ಬೇಕಾ. ಸ್ಟೇಡಿಯಂ ಫುಲ್, ಅಭಿಮಾನಿಗಳಂತೂ ಸಖತ್ ಥ್ರಿಲ್.. ಆದರೆ, ಈಗ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ನಡೆಯೋದೇ ಅನುಮಾನ. ಹೈವೋಲ್ಟೆಜ್ ಕದನದ ರೋಚಕತೆಯನ್ನು ಸ್ಟೇಡಿಯಂನಲ್ಲಿ ಕೂತು ಕಣ್ತುಂಬಿಕೊಳ್ಳಲು ಅಭಿಮಾನಿಗಳ ಆಸೆಗೆ ನೀರಿನ ಬರ ಬರೆ ಎಳೆದಿದೆ. ಇದೇ ವೇಳೆ ಟ್ವಿಟರ್ನಲ್ಲಿ ಅಭಿಯಾನವೊಂದು ಶುರುವಾಗಿದೆ. ಬೆಂಗಳೂರಿನಲ್ಲಿ IPL ಮ್ಯಾಚ್ ಕ್ಯಾನ್ಸಲ್ ಮಾಡಲು ಮನವಿ ಮಾಡುತ್ತಿದ್ದಾರೆ. ಜೊತೆಗೆ ಬೇರೆ ಕಡೆ ಮ್ಯಾಚ್ ಶಿಫ್ಟ್ ಮಾಡುವಂತೆ ಅಭಿಯಾನ ಆರಂಭವಾಗಿದೆ. ಈ ಸೀಜನ್ ನಲ್ಲಿ ಬೆಂಗಳೂರಿನಲ್ಲಿ ಸುಮಾರು 9ಕ್ಕೂ ಹೆಚ್ಚು ಮ್ಯಾಚ್ ನಡೆಯುತ್ತದೆ. ಒಂದು ಮ್ಯಾಚ್ ನಡೆಸಲು ಲಕ್ಷಾಂತರ ಲೀಟರ್ ನೀರು ಬೇಕಾಗುತ್ತದೆ. ಅದರಲ್ಲೂ ಪಿಚ್ ನಿರ್ವಹಣೆಗೆ ನಿತ್ಯ 15-20 ಸಾವಿರ ಲೀಟರ್ ನೀರು ಬೇಕಾಗುತ್ತದೆ.
ಇನ್ನು ಭೀಕರ ಬರದಿಂದ ಕ್ರಿಕೆಟ್ ಪಂದ್ಯಾವಳಿಗಳು ಬೇರೆ ಕಡೆ ಶಿಫ್ಟ್ ಆಗಿರುವುದು ನಮ್ಮ ಮುಂದೆಯೇ ಎಕ್ಸಾಂಪಲ್ ಇದೆ. 2016ರಲ್ಲಿ ಮಹಾರಾಷ್ಟ್ರದಲ್ಲಿ ಭೀಕರ ಬರಗಾಲ ಎದುರಾಗಿತ್ತು. ಆಗ ಅಲ್ಲಿ ಆಯೋಜನೆಗೊಂಡಿದ್ದ ಮ್ಯಾಚ್ ಬೆಂಗಳೂರಿಗೆ ಶಿಫ್ಟ್ ಆಗಿತ್ತು.
2016ರಲ್ಲಿ ಮಹಾರಾಷ್ಟ್ರದಲ್ಲಿ ಬೀಕರ ಬರಗಾಲ ಕಾಣಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಆಯೋಜನೆಗೊಂಡಿದ್ದ ಐಪಿಎಲ್ ಪಂದ್ಯಗಳನ್ನು ಮಹಾರಾಷ್ಟ್ರ ಹೈಕೋರ್ಟ್ ಬೇರೆಡೆಗೆ ಶಿಫ್ಟ್ ಮಾಡುವಂತೆ ಆದೇಶ ಹೊರಡಿಸಿತ್ತು. ಹೀಗಾಗಿ 7 ಪಂದ್ಯಗಳು ಬೆಂಗಳೂರಿಗೆ ಶಿಫ್ಟ್ ಆಗಿದ್ದವು. ಇದೀಗ ಬೆಂಗಳೂರಿನ ಪಂದ್ಯಗಳು ಕೂಡ ಇದೇ ರೀತಿ ಬೇರೆ ರಾಜ್ಯಕ್ಕೆ ಶಿಫ್ಟ್ ಮಾಡಿ ಎಂಬ ಅಭಿಯಾನ ಶುರುವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಹ್ಯಾಶ್ ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ. ಜೊತೆಗೆ ಗೃಹ ಸಚಿವರಿಗೆ ಟ್ಯಾಗ್ ಮಾಡಿ ಈ ಮನವಿ ಮಾಡಲಾಗಿದೆ. ಅಲ್ಲದೆ ಹೈಕೋರ್ಟ್ಗೆ ಪಿಎಎಲ್ ಸಲ್ಲಿಕೆಗೂ ಸಿದ್ದತೆ ನಡೆದಿದೆ. ಸರ್ಕಾರ ಈ ಮನವಿಯನ್ನು ಹಾಗೂ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದೇ ಆದಲ್ಲಿ, ರಾಜಧಾನಿ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ನೋಡಬೇಕು ಎಂಬ ಲಕ್ಷಾಂತರ ಅಭಿಮಾನಿಗಳಿಗೆ ನಿರಾಸೆ ಕಟ್ಟಿಟ್ಟ ಬುತ್ತಿ.