ನಾಲ್ಕನೇ ಡೋಸ್ ಪಡೆಯುವ ಅಗತ್ಯವಿಲ್ಲ – ಗೊಂದಲಕ್ಕೆ ತೆರೆ ಎಳೆದ ಎಸ್‌ಜೆಐಸಿಎಸ್ಆರ್

ನಾಲ್ಕನೇ ಡೋಸ್ ಪಡೆಯುವ ಅಗತ್ಯವಿಲ್ಲ – ಗೊಂದಲಕ್ಕೆ ತೆರೆ ಎಳೆದ ಎಸ್‌ಜೆಐಸಿಎಸ್ಆರ್

ಬೆಂಗಳೂರು : ಚೀನಾ ಸೇರಿದಂತೆ ವಿದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದಂತೆ ಭಾರತದಲ್ಲೂ ಕೋವಿಡ್ ಆತಂಕ ಹೆಚ್ಚಾಗಿದೆ. ಹೀಗಾಗಿ ನಾಲ್ಕನೇ ಡೋಸ್ ಅವಶ್ಯಕತೆ ಇದೆಯಾ ಇಲ್ಲವೇ ಅನ್ನೋ ಗೊಂದಲವೂ ಶುರುವಾಗಿತ್ತು. ಆದರೆ, ಕೊರೊನಾ ವಿರುದ್ಧ ಹೋರಾಡಲು ಕೋವಿಡ್ ಲಸಿಕೆಯ ನಾಲ್ಕನೇ ಡೋಸ್ ಪಡೆಯುವ ಅಗತ್ಯವಿಲ್ಲ ಎಂದು ಬೆಂಗಳೂರಿನ ಹೃದಯರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (SJICSR) ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಆರೋಗ್ಯ ಕಾರ್ಯಕರ್ತರು ಮತ್ತು ಸಾರ್ವಜನಿಕರಿಂದ ಎರಡನೇ ಬೂಸ್ಟರ್ ಡೋಸ್‌ನ ಅಗತ್ಯತೆ ಬಗ್ಗೆ ಗೊಂದಲ ಉಂಟಾಗಿತ್ತು.

ಇದನ್ನೂ ಓದಿ:  ಶಬರಿಮಲೆ ‘ಅರವಣ ಪ್ರಸಾದಮ್’ ವಿತರಣೆಗೆ ಹೈಕೋರ್ಟ್ ತಡೆ – ವ್ಯರ್ಥವಾಯ್ತು 6 ಕೋಟಿ ರೂಪಾಯಿ ಮೌಲ್ಯದ ಪ್ರಸಾದ..!

ಬೂಸ್ಟರ್ ಡೋಸ್ ಅನ್ನು ಪಡೆದ ಶೇ. 99.4 ರಷ್ಟು ಆರೋಗ್ಯ ಕಾರ್ಯಕರ್ತರಲ್ಲಿ ಪ್ರತಿಕಾಯಗಳು ಗಮನಾರ್ಹ ಬೆಳವಣಿಗೆಗಳನ್ನು ತೋರಿಸಿರುವುದು ಅಧ್ಯಯನದಲ್ಲಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಜನವರಿಯಲ್ಲಿ ಎಸ್‌ಜೆಐಸಿಎಸ್‌ಆರ್ ಅಧ್ಯಯನ ನಡೆಸಿದ್ದು, ಅಧ್ಯಯನದಲ್ಲಿ ಬೂಸ್ಟರ್ ಡೋಸ್ ತೆಗೆದುಕೊಂಡ ಒಂದು ವರ್ಷದ ಬಳಿಕವೂ ದೇಹದಲ್ಲಿ ಪ್ರತಿಕಾಯ ಇದೆ ಎಂಬುದನ್ನು ಪತ್ತೆಹಚ್ಚಲಾಗಿದೆ. ದಾದಿಯರು, ತಂತ್ರಜ್ಞರು, ಎಸ್‌ಜೆಐಸಿಎಸ್‌ಆರ್ ವೈದ್ಯರು, ವಾರ್ಡ್ ಸಹಾಯಕರು ಮತ್ತು ಇತರ ಸಿಬ್ಬಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು, ಬೂಸ್ಟರ್ ಡೋಸ್ ನೀಡಿದ ಒಂದು ವರ್ಷದ ನಂತರವೂ ಪ್ರತಿಕಾಯ ಪ್ರಮಾಣ ಇರುವುದನ್ನು ಗಮನಿಸಲಾಗಿದೆ.  ಇದು ಒಳ್ಳೆಯ ಬೆಳವಣಿಗೆ ಎಂದು ಎಸ್‌ಜೆಐಸಿಎಸ್‌ಆರ್ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.

ಜನವರಿ 2022ರಲ್ಲಿ ಕೋವಿಶೀಲ್ಡ್ ಬೂಸ್ಟರ್ ಡೋಸ್ ಪಡೆದಿದ್ದ ಜಯದೇವ ಆಸ್ಪತ್ರೆ ವೈದ್ಯರು, ಶೂಶ್ರೂಷಕರು, ವಾರ್ಡ್ ಸಹಾಯಕರು, ಹಾಗ ಸಿಬ್ಬಂದಿ ಸೇರಿದಂತೆ 350 ಆರೋಗ್ಯ ಕಾರ್ಯಕರ್ತರ ಮೇಲೆ ಅಧ್ಯಯನ ನಡೆಸಲಾಗಿದೆ. ರಕ್ತದಲ್ಲಿನ ಪ್ರತಿಕಾಯಗಳನ್ನು ಅಳೆಯುವ ಕಿಣ್ವ-ಸಂಯೋಜಿತ ಇಮ್ಯುನೊಸಾರ್ಬೆಂಟ್ ಅಸ್ಸೆ ಅಥವಾ ಎಲಿಸಾ ಮಾದರಿಯಂತೆ ಅಧ್ಯಯನಕ್ಕೆ 350 ಸಿಬ್ಬಂದಿಯನ್ನು ಒಳಪಡಿಸಲಾಗಿತ್ತು. ಅಧ್ಯಯನದ ವೇಳೆಯಲ್ಲಿ ಗುಂಪಿನ ಶೇಕಡಾ 99.4ರಷ್ಟು ಆರೋಗ್ಯ ಕಾರ್ಯಕರ್ತರಲ್ಲಿ ಉತ್ತಮ ಪ್ರತಿಕಾಯ ಕಂಡುಬಂದಿದೆ. ಈ ಪೈಕಿ 19ರಿಂದ 90 ವಯಸ್ಸಿನ 148 ಜನ ಪುರುಷರಲ್ಲಿ 42%, 202 ಮಹಿಳೆಯರಲ್ಲಿ 58% ಪ್ರತಿಕಾಯ ವೃದ್ಧಿಯಾಗಿದೆ ಎಂದು ಸಂಸ್ಥೆಯ ನಿರ್ದೇಶಕರಾಗಿದ್ದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.

suddiyaana