ರಾಜ್ಯದಲ್ಲಿರುವುದು ಏಕಪಕ್ಷ ಸಮ್ಮಿಶ್ರ ಸರ್ಕಾರ, ಕರ್ನಾಟಕಕ್ಕೆ ಸದಾ ಸಂಚಕಾರ – ಬಿಜೆಪಿ ಕಿಡಿ

ರಾಜ್ಯದಲ್ಲಿರುವುದು ಏಕಪಕ್ಷ ಸಮ್ಮಿಶ್ರ ಸರ್ಕಾರ, ಕರ್ನಾಟಕಕ್ಕೆ ಸದಾ ಸಂಚಕಾರ – ಬಿಜೆಪಿ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಿನ ಟ್ವೀಟ್‌ ವಾರ್‌ ಮುಂದುವರಿದಿದೆ. ಇದೀಗ ರಾಜ್ಯ ಬಿಜೆಪಿ, ಇದು ರಾಜ್ಯ ಕಂಡ ಪ್ರಪ್ರಥಮ ಏಕಪಕ್ಷದ ಸಮ್ಮಿಶ್ರ ಸರ್ಕಾರ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದೆ.

ಈ ಬಗ್ಗೆ ಸರಣಿ ಟೀಟ್‌ ಮಾಡಿರುವ ರಾಜ್ಯ ಬಿಜೆಪಿ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಶುರುವಾದ ಕಲೆಕ್ಷನ್ ದಂಧೆ ಈಗ ತಮ್ಮ ಪಕ್ಷದಲ್ಲೇ ಕದನವನ್ನು ಶುರು ಮಾಡಿದೆ. ಇದರ ಪರಿಣಾಮವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸದ್ಯದಲ್ಲೇ ಸಿಎಂ ಸ್ಥಾನದಿಂದ ಸಿದ್ದರಾಮಯ್ಯರವರನ್ನು ಇಳಿಸಿ ಮುಖ್ಯಮಂತ್ರಿ ಆಗುತ್ತಾರೆ. ಈ ವಿಚಾರವನ್ನು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ.

ಪ್ರಿಯಾಂಕ್ ಖರ್ಗೆಯವರು ತಮ್ಮ ತಂದೆಯವರ ಪ್ರಭಾವ ಬಳಸಿ ಎಲ್ಲೆಲ್ಲೂ ತಮ್ಮ ನಿರ್ಧಾರಗಳೇ ನಡೆಯಲಿ ಎನ್ನುತ್ತಿದ್ದಾರೆ. ಇನ್ನೊಂದೆಡೆ ಮೈಸೂರು ಪ್ರವಾಸದ ಪುಕಾರು ಹಬ್ಬಿಸಿ ಕೆಪಿಸಿಸಿ ಅಧ್ಯಕ್ಷರನ್ನೇ ಸತೀಶ್ ಜಾರಕಿಹೊಳಿಯವರು ಅಲುಗಾಡಿಸಿದ್ದಾರೆ. ಮತ್ತೊಂದು ಕಡೆ, ಕೆಲಸ ಬಿಟ್ಟು ವಿದೇಶಕ್ಕೆ ಹಾರಲು ಇತರ ಸನ್ಮಿತ್ರರು ಸಜ್ಜಾಗಿದ್ದಾರೆ ಎಂದು ಬಿಜೆಪಿ ಲೇವಡಿ ಮಾಡಿದೆ.

ಅವರ ಪಕ್ಷದಲ್ಲಿ ಕತ್ತಲಾದ ಮೇಲಷ್ಟೇ ಚರ್ಚಿಸಬಹುದಾದ ವಿಚಾರ ಮತ್ತು ಲೆಕ್ಕಾಚಾರಗಳ ಮಾತುಕತೆಗೆ `ಆಯ್ದ ಆಮಂತ್ರಿತರ ಡಿನ್ನರ್’ ಆಯೋಜಿಸಲಾಗುತ್ತದೆ. ಹಣಕಾಸಿನ ಲೆಕ್ಕಾಚಾರಗಳಿರುವಾಗ ಈ ರೀತಿ ಭಿನ್ನಾಭಿಪ್ರಾಯಗಳು ಸಹಜವಾಗಿ ಇರುತ್ತದೆ. ಕಲೆಕ್ಷನ್ ವ್ಯವಹಾರ ಬದಿಗಿಟ್ಟು, ಹೊರರಾಜ್ಯಗಳ ಚುನಾವಣೆಗಳಿಗೆ ಫಂಡ್ ಕಳಿಸಲು ಅಸಾಧ್ಯ ಎಂಬುದನ್ನು ಹೈಕಮಾಂಡ್‍ಗೆ ತಿಳಿಸಿದರೆ ರಾಜ್ಯ ಸರ್ಕಾರ ಸುಲಲಿತವಾಗಿ ನಡೆಯುತ್ತದೆ ಎಂದು ಬಿಜೆಪಿ ಹೇಳಿಕೊಂಡಿದೆ.

ಇದನ್ನೂ ಓದಿ: ಉದ್ಯಮಿ ಮುಕೇಶ್ ಅಂಬಾನಿಗೆ ಮತ್ತೆ ಜೀವ ಬೆದರಿಕೆ – 400 ಕೋಟಿ ರೂ.ಗೆ ಬೇಡಿಕೆ ಇಟ್ಟ ದುಷ್ಕರ್ಮಿಗಳು!

ಇನ್ನು ಮತ್ತೊಂದು ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ತಾಯಿ, ಮಕ್ಕಳಿಗೆ ಲಕ್ಷ್ಮೀ ಕಂಟಕ ಎಂದು ಪತ್ರಿಕೆ ಬರಹವೊಂದನ್ನು ಪೋಸ್ಟ್‌ ಮಾಡಿದೆ. ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಕಳಪೆ‌ ಮೊಟ್ಟೆ ವಿತರಣೆ ಮಾಡಿ ಮಾರ್ಯದೆ ಕಳೆದುಕೊಂಡಿದ್ದ ಎಟಿಎಂ ಸರ್ಕಾರ, ಇದೀಗ ಅನುದಾನವಿಲ್ಲದೆ ಮೊಟ್ಟೆ ವಿತರಣೆಯನ್ನೇ ಸ್ಥಗಿತ ಮಾಡಿ ರಾಜ್ಯದಲ್ಲಿ ಅಪೌಷ್ಟಿಕತೆಗೆ ನಾಂದಿ ಹಾಡಿದೆ. ಲೂಟಿಯೊಂದನ್ನೇ ಅಜೆಂಡಾವಾಗಿರಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ  ಅವರು ರಾಜ್ಯದ ಬೊಕ್ಕಸವನ್ನು ಬರಿದು ಮಾಡಿ ಜನರಿಗೆ ಬರೆ ಹಾಕುತ್ತಿದ್ದಾರೆ ಎಂದು ಕಿಡಿಕಾರಿದೆ.

ನಾಡದ್ರೋಹಿ ಕಾಂಗ್ರೆಸ್ ಸರ್ಕಾರ – ಕರ್ನಾಟಕಕ್ಕೆ ಸದಾ ಸಂಚಕಾರ ಎಂದು ಬಿಜೆಪಿ ಮತ್ತೊಂದು ಟ್ವೀಟ್‌ ಮಾಡಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಸಿಎಂ ಸಿದ್ದರಾಮಯ್ಯ ಅವರು ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್‌ ಅವರ ಸ್ಟಾಲಿನ್ ಸರ್ಕಾರದ ಪ್ರೇಮ, ಕರ್ನಾಟಕಕ್ಕೆ ಮರಣಶಾಸನವಾಗುತ್ತಿದೆ. ನ್ಯಾಯಾಲಯದಲ್ಲಿ ಕಾವೇರಿ ಕೊಳ್ಳದ ರೈತರ ಪರ ಸಮರ್ಥ ವಾದ ಮಂಡಿಸದೆ ಕಾಂಗ್ರೆಸ್ ಸರ್ಕಾರ ಕಳ್ಳಾಟವಾಡುತ್ತಿದ್ದು, ಕಾವೇರಿ ನೀರು ಸರಾಗವಾಗಿ ಹರಿಯುತ್ತಿದೆ. ನಾಡದ್ರೋಹಿ ಕಾಂಗ್ರೆಸ್‌ಗೆ ಮತ ನೀಡಿದ ಪರಿಣಾಮ, ಕರ್ನಾಟಕದ ಜನತೆ ಕುಡಿಯುವ ಹನಿ ನೀರಿಗೂ ತತ್ವಾರ ಪಡುವ ದಿನ ಅತಿ ಶೀಘ್ರದಲ್ಲಿದೆ ಎಂದು ಆಕ್ರೋಶ ಹೊರಹಾಕಿದೆ.

Shwetha M