ಬೆಂಗಳೂರಲ್ಲಿ ಆಕಾಶದಿಂದ ಬಿತ್ತು ಹಣದ ಮಳೆ – ನಂಗೆ ನಂಗೆ ಅಂತಾ ಮುಗಿಬಿದ್ದ ಜನ!
ಆಕಾಶದಿಂದ ಮಳೆ ಬರೋದು ಸಾಮಾನ್ಯ. ಆದ್ರೆ ಇವತ್ತು ಬೆಂಗಳೂರಿನಲ್ಲಿ ದುಡ್ಡಿನ ಮಳೆಯಾಗಿದೆ. ಗರಿಗರಿ ನೋಟುಗಳು ಆಗಸದಿಂದ ಉದುರಿದ್ದು, ಆಯ್ದುಕೊಳ್ಳೋಕೆ ಜನ ಮುಗಿ ಬಿದ್ದಿದ್ರು.
ಬೆಳಗ್ಗೆಯ ಸಮಯ. ಜನರೆಲ್ಲಾ ತಮ್ಮ ತಮ್ಮ ಕೆಲಸಗಳಲ್ಲಿ ಮುಳುಗಿದ್ರು. ಕೆಲವರು ವ್ಯಾಪಾರದಲ್ಲಿ ಬ್ಯುಸಿಯಾಗಿದ್ರೆ ಇನ್ನೂ ಕೆಲವರು ಖರೀದಿಯಲ್ಲಿ ತೊಡಗಿದ್ರು. ಮತ್ತೊಂದಷ್ಟು ಜನ ಕೆಲಸಕ್ಕೆ ಹೋಗಲು ಲೇಟ್ ಆಯ್ತು ಅನ್ಕೊಂಡು ವಾಹನಗಳಲ್ಲಿ ವೇಗವಾಗಿ ಹೋಗ್ತಿದ್ರು. ಆದ್ರೆ ಇದೇ ವೇಳೆ ಎಲ್ಲರನ್ನೂ ಬೆರಗುಗೊಳಿಸುವಂತೆ ಆಕಾಶದಿಂದ ಹಣದ ಮಳೆ ಬೀಳತೊಡಗಿತ್ತು. ಅಚ್ಚರಿಗೊಂಡ ಜನ ಮಾಡೋ ಕೆಲಸಗಳನ್ನೆಲ್ಲಾ ಬಿಟ್ಟು ನೋಟುಗಳನ್ನ ಆಯ್ದುಕೊಳ್ಳೋಕೆ ಮುಗಿಬಿದ್ದಿದ್ರು. ಮೇಲಿಂದ ಕಾಸು ಉದುರುತ್ತಿದ್ರೆ ನಂಗೆ ನಂಗೆ ಅಂತಾ ಎದ್ದು ಬಿದ್ದು ತೆಗೆದುಕೊಳ್ಳುತ್ತಿದ್ರು.
ಇದನ್ನೂ ಓದಿ : ಚುನಾವಣೆ ತಯಾರಿ ನಡುವೆಯೇ ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾ ಘೋಷಣೆ
ಬೆಂಗಳೂರಿನ ಹೃದಯಭಾಗದಲ್ಲಿರೋ ಕೆ.ಆರ್ ಮಾರ್ಕೆಟ್ ಫ್ಲೈಓವರ್ ಮೇಲೆಯೇ ಇಂಥಾದ್ದೊಂದು ಅಚ್ಚರಿಯ ಘಟನೆ ನಡೆದಿದೆ. ಅಸಲಿಗೆ ಆಗಿದ್ದೇನಂದ್ರೆ ಯುವಕನೊಬ್ಬ ಫ್ಲೈಓವರ್ ಮೇಲೆ ನಿಂತು ನೋಟುಗಳನ್ನು ಎಸೆಯತೊಡಗಿದ್ದ. ಕೆಳಗಿದ್ದ ಜನರಿಗೆ ನೋಟುಗಳು ಬೀಳೋದು ಕಾಣ್ತಿದ್ದಂತೆ ಆಯ್ದುಕೊಳ್ಳೋಕೆ ಮುಂದಾಗಿದ್ರು. ಇದ್ರಿಂದಾಗಿ ಮೇಲ್ಸೇತುವೆ ಕೆಳಗೆ ಜನಜಾತ್ರೆಯೇ ಉಂಟಾಗಿತ್ತು.
ಅಷ್ಟಕ್ಕೂ ಫ್ಲೈಓವರ್ ಮೇಲೆ ನಿಂತು ಹೀಗೆ ಹಣದ ಮಳೆ ಸುರಿಸಿದ ಯುವಕನ ಹೆಸರು ಅರುಣ್. ‘ವಿ ಡಾಟ್ 9 ಇವೆಂಟ್ ಮ್ಯಾನೇಜ್ಮೆಂಟ್’ ನಿರೂಪಕನಾಗಿರುವ ಅರುಣ್ ಫ್ಲೈಓವರ್ ಮೇಲೆ ನಿಂತು ಹಣ ಎಸೆದಿದ್ದಾನೆ. ಕೊರಳಿಗೆ ದೊಡ್ಡ ಗಡಿಯಾರ ಹಾಕಿಕೊಂಡು ಆಕ್ಟೀವಾದಲ್ಲಿ ಬಂದಿದ್ದ ಅರುಣ್ ಫ್ಲೈಓವರ್ ಮೇಲೆ ಗಾಡಿ ನಿಲ್ಲಿಸಿದ್ದಾನೆ. ಬಳಿಕ ಮೇಲ್ಸೇತುವೆಯ ಬದಿಗೆ ಬಂದು ತಾನು ತಂದಿದ್ದ ಬ್ಯಾಗ್ನಲ್ಲಿದ್ದ ಹಣವನ್ನ ಹೊರತೆಗೆದಿದ್ದಾನೆ. 10 ರೂಪಾಯಿ ಮುಖಬೆಲೆಯ ಕಂತೆ ಕಂತೆ ನೋಟುಗಳನ್ನ ಕೆಳಗೆ ಚೆಲ್ಲಿದ್ದಾನೆ. ಈ ವೇಳೆ ಫ್ಲೈಓವರ್ ಮೇಲಿಂದ ಹಣ ಮಳೆಯಂತೆ ಬೀಳತೊಡಗಿದೆ. ಕೆಳಗಿದ್ದ ಜನರಿಗೆ ಹಣ ಬೀಳೋದು ಕಾಣ್ತಿದ್ದಂತೆ ತೆಗೆದುಕೊಳ್ಳೋಕೆ ಮುಗಿಬಿದ್ದಿದ್ದಾರೆ. ಕೆಲ ಸವಾರರು ಯಾಕೆ ಈ ರೀತಿ ಹಣ ಎಸೆಯುತ್ತಿದ್ದೀರಿ ಎಂದು ಅರುಣ್ನನ್ನ ಪ್ರಶ್ನಿಸಿದಾಗ ಜೀವನದಲ್ಲಿ ಜಿಗುಪ್ಸೆಗೊಂಡು ಈ ರೀತಿ ಮಾಡುತ್ತಿರೋದಾಗಿ ಹೇಳಿದ್ದಾನೆ. ಹಣ ಎಸೆದು ಬಳಿಕ ಅರುಣ್ ಅಲ್ಲಿಂದ ಪರಾರಿಯಾಗಿದ್ದಾನೆ.
ಹಣ ಮೇಲಿಂದ ಬೀಳೋದು ಕಾಣ್ತಿದ್ದಂತೆಜನ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಹಣ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಮಾಡುತ್ತಿದ್ದ ಕೆಲಸಗಳನ್ನೇ ಬಿಟ್ಟು ಓಡಿ ಹೋಗಿದ್ದಾರೆ. ಇನ್ನೂ ಅಕ್ಕಪಕ್ಕದ ರಸ್ತೆಯಲ್ಲಿದ್ದವರೂ ಕೂಡ ವಾಹನಗಳ ಸಂಚಾರವನ್ನೂ ಲೆಕ್ಕಿಸದೆ ಹಣ ಬೀಳುತ್ತಿದ್ದ ಕಡೆಗೆ ಓಡಿದ್ದಾರೆ. ಇದ್ರಿಂದಾಗಿ ವಾಹನ ಚಾಲನೆ ಮಾಡ್ತಿದ್ದ ಸವಾರರು ಗಾಬರಿಗೊಂಡಿದ್ದಾರೆ. ಜನಜಂಗುಳಿ ಹೆಚ್ಚಾಗಿದ್ದರಿಂದ ರಸ್ತೆಯಲ್ಲಿ ಕೆಲ ಹೊತ್ತು ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು. ಸದ್ಯ ಹಣ ಎಸೆಯುವ ಮತ್ತು ಜನ ಆಯ್ದುಕೊಳ್ಳುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಸುದ್ದಿ ತಿಳಿದ ಇನ್ನೊಂದಷ್ಟು ಜನ ನಮ್ಮ ಏರಿಯಾದಲ್ಲೂ ಯಾರಾದ್ರೂ ಹಣ ಎಸೆದ್ರೆ ಎಷ್ಟು ಚಂದ ಅಂತಾ ಮನಸ್ಸಲ್ಲೇ ಮಾತನಾಡಿಕೊಳ್ತಿದ್ದಾರೆ.