ದುನಿಯಾ ಮತ್ತಷ್ಟು ದುಬಾರಿ – ಹಾಲು, ತರಕಾರಿ, ಹೋಟೆಲ್​ ತಿನಿಸು ಎಲ್ಲವೂ ತುಟ್ಟಿ

ದುನಿಯಾ ಮತ್ತಷ್ಟು ದುಬಾರಿ – ಹಾಲು, ತರಕಾರಿ, ಹೋಟೆಲ್​ ತಿನಿಸು ಎಲ್ಲವೂ ತುಟ್ಟಿ

ಬೆಂಗಳೂರು: ಇನ್ಮುಂದೆ ನಿತ್ಯವೂ ಕಿಸೆಯನ್ನ ಇನ್ನಷ್ಟು ಗಟ್ಟಿಮಾಡಿಕೊಂಡೇ ಮನೆಯ ಹೊಸ್ತಿಲು ದಾಟಬೇಕು. ಯಾಕಂದ್ರೆ ರಾಜ್ಯದ ಜನರ ಮೇಲೆ ಮತ್ತೆ ಬೆಲೆ ಏರಿಕೆ ಬರೆ ಎಳೆಯಲಾಗಿದೆ. ದರ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಸಾಮಾನ್ಯ ಜನತೆಗೆ ಮತ್ತೆ ಹಲವು ರೂಪಗಳಲ್ಲಿ ಹೊರೆ ಬೀಳಲಿದೆ. ಜೊತೆಗೆ ಒಂದಿಷ್ಟು ರೂಲ್ಸ್ ಅಂಡ್ ರೆಗ್ಯುಲೆಷನ್ಸ್ ಕೂಡ ಬದಲಾಗಿದೆ. ಜೊತೆಗೆ ಒಂದಿಷ್ಟು ರಿಲೀಫ್‍ಗಳು ಕೂಡ ಇರಲಿವೆ. ಮಂಗಳವಾರದಿಂದ ನಂದಿನಿ ಹಾಲು, ಮೊಸರಿನ ಬೆಲೆ ಹೆಚ್ಚಳ ಮಾಡಲಾಗಿದೆ. ಎಲ್ಲಾ ಮಾದರಿಯ ನಂದಿನಿ ಹಾಲಿನ ಬೆಲೆ ಲೀಟರ್ ಗೆ 3 ರೂ. ಹೆಚ್ಚಳವಾಗಲಿದೆ.

ಇದನ್ನೂ ಓದಿ: ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಪ್ರಿಪೇಯ್ಡ್ ಆಟೋ ಸೇವೆ?

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಏರುತ್ತಿದ್ದಂತೆ ಕೆಎಂಎಫ್‌ ನಂದಿನಿ ಹಾಲಿನ ದರ ಹೆಚ್ಚಳ ಮಾಡಬೇಕೆಂದು ಪಟ್ಟು ಹಿಡಿದಿತ್ತು. ಈ ಬಗ್ಗೆ ಚರ್ಚೆ ನಡೆಸಿದ ರಾಜ್ಯ ಸರ್ಕಾರ ಪ್ರತಿ ಲೀಟರ್‌ ಹಾಲಿನ ಬೆಲೆ 3ರೂ. ಗೆ ಹೆಚ್ಚಳ ಮಾಡಲು ಒಪ್ಪಿಗೆ ಸೂಚಿಸಿದೆ. ಮಂಗಳವಾರದಿಂದ ಪರಿಷ್ಕೃತ ಬೆಲೆ ಜಾರಿಗೆ ಬರಲಿದೆ. ನಂದಿನಿ ಹಾಲಿನ ಜೊತೆ ಮೊಸರಿನ ಬೆಲೆ 3 ರೂ., ನಂದಿನಿ ಮಜ್ಜಿಗೆ (200 ಎಂಎಲ್) ಬೆಲೆಯಲ್ಲಿ 1 ರೂ. ಹೆಚ್ಚಳವಾಗಿದೆ.

ಹೋಟೆಲ್‌ ತಿನಿಸುಗಳ ಬೆಲೆ ಏರಿಕೆ

ಹಾಲಿನ ಬೆಲೆ, ಅಕ್ಕಿ ಧಾನ್ಯಗಳ ಬೆಲೆ ಹೆಚ್ಚಳವಾದ ಹಿನ್ನೆಲೆ ಇತ್ತ ಹೋಟೆಲ್ ಮಾಲೀಕರು ಹೋಟೆಲ್‌ ತಿನಿಸಿನ ಬೆಲೆಯಲ್ಲಿಯೂ  ಏರಿಕೆ ಮಾಡಿದ್ದಾರೆ. ಮಂಗಳವಾರದಿಂದ ಕಾಫಿ-ಟೀ ಬೆಲೆ 3 ರೂ. ಹಾಗೂ ಬೆಲೆಯಲ್ಲಿ 10ರೂ.ವರೆಗೂ ಹೆಚ್ಚಳವಾಗಿದೆ.

ದಶಪಥ ಸವಾರರೇ ಗಮನಿಸಿ

ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಮಂಗಳವಾರದಿಂದ ದ್ವಿಚಕ್ರ ವಾಹನ ಸಂಚಾರಕ್ಕೂ ಅವಕಾಶವಿಲ್ಲ. ಆಟೋ, ಟ್ರ್ಯಾಕ್ಟರ್, ಹೈಡ್ರಾಲಿಕ್ ಟ್ರಾಲಿಗೂ ನಿರ್ಬಂಧ ಹೇರಲಾಗಿದೆ. ನಿಧಾನಗತಿಯ ವಾಹನಗಳ ಸಂಚಾರಕ್ಕೆ ನಿಷೇಧಿಸಲಾಗಿದೆ. ಹೆದ್ದಾರಿಯಲ್ಲಿ ಅಪಘಾತ ಹೆಚ್ಚಳವಾದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.

ಆಗಸ್ಟ್ ನಲ್ಲಿಯೇ ಗ್ಯಾರಂಟಿ ಭಾಗ್ಯ

ರಾಜ್ಯದ ಜನತೆಗೆ ಗೃಹಜ್ಯೋತಿ ಯೋಜನೆ ಸಿಗಲಿದೆ. 200 ಯೂನಿಟ್ ಒಳಗೆ ಕರೆಂಟ್ ಬಳಸುವವರಿಗೆ ಜೀರೋ ಬಿಲ್ ನೀಡಲಾಗುವುದು. ಕಳೆದ ವರ್ಷದ ಸರಾಸರಿ ಬಳಕೆಯನ್ನು ಇದು ಆಧರಿಸಿರುತ್ತದೆ. ಇದೇ ತಿಂಗಳು ಮನೆಯೊಡತಿ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ಹಾಕಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಇತರ ತರಕಾರಿಗಳ ಬೆಲೆಯೂ ಏರಿಕೆ

ಟೊಮ್ಯಾಟೊ ಹೊರತುಪಡಿಸಿ, ಇತರ ತರಕಾರಿಗಳ ಬೆಲೆಗಳಲ್ಲಿಯೂ ತೀವ್ರ ಏರಿಕೆ ಕಂಡುಬಂದಿದೆ. ಹಸಿರು ಬಟಾಣಿ, ಹಸಿರು ಮೆಣಸಿನಕಾಯಿ, ಶುಂಠಿ, ಕ್ಯಾರೆಟ್ ಮತ್ತು ಬೀನ್ಸ್‌ಗಳು ಕಳೆದ ಕೆಲವು ವಾರಗಳಲ್ಲಿ ಸುಮಾರು 100 ಪ್ರತಿಶತದಷ್ಟು ಏರಿಕೆಯಾಗಿದೆ. ಇನ್ನು ಹಬ್ಬಹರಿದಿನಗಳ ಸಮಯವಾಗಿದ್ದು ಮುಂದಿನ ದಿನಗಳಲ್ಲಿ ಈ ತರಕಾರಿಗಳು ಮತ್ತು ಇತರ ಅಡುಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

ಮದ್ಯಅಬಕಾರಿ ಸುಂಕ ಹೆಚ್ಚಳ

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ  ಅಬಕಾರಿ ಸುಂಕದಲ್ಲಿ ಹೆಚ್ಚಳ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರದಿಂದ ಬಿಯರ್ ಸೇರಿದಂತೆ ಮದ್ಯದ ಬೆಲೆಗಳು ಹೆಚ್ಚಾಗಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರತದಲ್ಲಿ ನಿರ್ಮಿತವಾಗಿರುವ ವಿದೇಶಿ ಮದ್ಯದ (ಐಎಂಎಫ್‌ಎಲ್) ಮೇಲಿನ ಸುಂಕವನ್ನು ಎಲ್ಲಾ ಸ್ಲ್ಯಾಬ್‌ಗಳಲ್ಲಿ ಶೇಕಡಾ 20 ರಷ್ಟು ಏರಿಕೆ ಮಾಡಿದ್ದಾರೆ. ಬಿಯರ್‌ ಮೇಲಿನ ಸುಂಕವನ್ನು ಶೇಕಡಾ ಹತ್ತರಷ್ಟು ಏರಿಕೆ ಮಾಡಿದ್ದಾರೆ.

ಆಸ್ತಿಯ ಮಾರ್ಗದರ್ಶನ ಮೌಲ್ಯ ಹೆಚ್ಚಳ

ಇತ್ತೀಚಿನ ರಾಜ್ಯ ಬಜೆಟ್ ನಲ್ಲಿ ಸ್ಥಿರಾಸ್ತಿಗಳ ಮಾರ್ಗದರ್ಶಿ ಮೌಲ್ಯದಲ್ಲಿ ಶೇಕಡಾ 14 ರಷ್ಟು ಹೆಚ್ಚಳ ಮಾಡಿದೆ. ಇದು ಮಂಗಳವಾರ ಜಾರಿಗೆ ಬರಲಿದೆ. ಮಾರ್ಗದರ್ಶನ ಮೌಲ್ಯವು ಆಸ್ತಿಯನ್ನು ನೋಂದಾಯಿಸುವ ಕನಿಷ್ಠ ಮೌಲ್ಯವಾಗಿದೆ.

ಕೆಎಸ್ಆರ್ಟಿಸಿ ಗುತ್ತಿಗೆ ದರಗಳಲ್ಲಿ ಹೆಚ್ಚಳ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಥವಾ ಕೆಎಸ್‌ಆರ್‌ಟಿಸಿ ವಿಧಿಸುವ ಗುತ್ತಿಗೆ ದರಗಳು ಈಗ ದುಬಾರಿಯಾಗಲಿವೆ. ಸರ್ಕಾರವು ಸಾಂದರ್ಭಿಕ ಗುತ್ತಿಗೆ ಬಸ್‌ಗಳ ದರವನ್ನು ಆಗಸ್ಟ್ 1 ರಿಂದ ಜಾರಿಗೆ ತಂದಿದೆ. ಈ ಹೆಚ್ಚಳವು ಪ್ರತಿ ಕಿ.ಮೀಗೆ 2 ರೂಪಾಯಿಗಳಿಂದ 5 ರೂಪಾಯಿ ನಡುವೆ ಇರುತ್ತದೆ.

ಇತರೆ ವಸ್ತುಗಳೂ ದುಬಾರಿ

ಆಗಸ್ಟ್ 1 ರಿಂದ ಇತರ ವಸ್ತುಗಳು ದುಬಾರಿಯಾಗಲಿವೆ. ಇವುಗಳಲ್ಲಿ ಗಣಿಗಾರಿಕೆಯ ಮೇಲೆ ಪಾವತಿಸಬೇಕಾದ ರಾಯಲ್ಟಿ ಸೇರಿರುವುದರಿಂದ ಜಲ್ಲಿ ಮತ್ತು ಮರಳಿನಂತಹ ಕಟ್ಟಡ ಸಾಮಗ್ರಿಗಳು ದುಬಾರಿಯಾಗುತ್ತವೆ.

ಶಾಲಾ/ಕಾಲೇಜು ವಾಹನಗಳು, ಕ್ಯಾಬ್‌ಗಳು ಮತ್ತು ಟ್ರಕ್‌ಗಳ ಮೇಲೆ ಪಾವತಿಸಬೇಕಾದ ಇತರ ಮೋಟಾರು ವಾಹನ ತೆರಿಗೆಯು ಆಗಸ್ಟ್ 1 ರಂದು ದುಬಾರಿಯಾಗಲಿದೆ.

suddiyaana