ಜಗತ್ತಿನ ಮುಂದಿದೆ ಕೊವಿಡ್ ರೂಪಾಂತರಿ ತಳಿಗೆ ಕಡಿವಾಣ ಹಾಕುವ ಸವಾಲು – ರೋಗಲಕ್ಷಣಗಳ ಬಗ್ಗೆ ಜನರಿಗೆ ಇರಲಿ ಎಚ್ಚರಿಕೆ
ಲಕ್ಷಾಂತರ ಮಂದಿಯನ್ನು ಬಲಿ ಪಡೆದಿರುವ ಕೊವಿಡ್ ಮಹಾಮಾರಿಗೆ ಅಂತ್ಯವೆಂಬುದೇ ಇಲ್ಲ. 2020ರಿಂದ ಪ್ರಪಂಚದಾದ್ಯಂತ ಕೋಲಾಹಲ ಸೃಷ್ಟಿಸಿರೋ ವೈರಸ್ ಈಗ ಮತ್ತೆ ಭಯ ಹುಟ್ಟಿಸುತ್ತಿದೆ. ಕೊರೊನಾದ ಉಪತಳಿಯಾದ ಜೆಎನ್.1 ಅಮೆರಿಕ, ಬ್ರಿಟನ್, ಚೀನಾ, ಫ್ರಾನ್ಸ್ ದೇಶಗಳಲ್ಲಿ ಭೀತಿ ಸೃಷ್ಟಿಸಿದೆ. ಇದೀಗ ಭಾರತಕ್ಕೂ ವಕ್ಕರಿಸಿದ್ದು, ಭಾರೀ ಆತಂಕಕ್ಕೆ ಕಾರಣವಾಗಿದೆ. ಡಿಸೆಂಬರ್ 8 ರಂದು ಕೇರಳದ ತಿರುವಂತನಪುರಂ ಜಿಲ್ಲೆಯ ಕರಕುಲಂನಲ್ಲಿ ಸೋಂಕು ಪತ್ತೆಯಾಗಿದೆ. ವಯಸ್ಸಾದವರು, ಆರೋಗ್ಯ ಸಮಸ್ಯೆ ಹೊಂದಿರುವ ಜನ ತುಂಬಾನೇ ಕೇರ್ಫುಲ್ ಆಗಿರಬೇಕಿದೆ. ಇದೇ ಕಾರಣಕ್ಕೆ ವಿಶ್ವಸಂಸ್ಥೆ ಕೂಡ ಎಚ್ಚರಿಕೆ ನೀಡಿದೆ. ಕರ್ನಾಟಕದಲ್ಲೂ ವೈರಸ್ ಭೀತಿ ಹೆಚ್ಚಾಗಿದ್ದು, ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಅಲ್ಲದೆ ಮಾಸ್ಕ್ ಕಡ್ಡಾಯ ಸೇರಿದಂತೆ ಹಲವು ನಿಯಮಗಳ ಜಾರಿಗೆ ಸಿದ್ಧತೆ ನಡೆಸುತ್ತಿದೆ.
ಇದನ್ನೂ ಓದಿ : ಭಾರತ ಸೇರಿ 40 ದೇಶಗಳಲ್ಲಿ ವೇಗವಾಗಿ ಹರಡುತ್ತಿದೆ ಕೊರೊನಾ ರೂಪಾಂತರಿ! – ದೇಶದಲ್ಲಿ ಕೋವಿಡ್ ಕಟ್ಟೆಚ್ಚರ!
ವರ್ಷಗಳ ಕಾಲ ಜನರನ್ನ ಹಿಂಡಿ ಹಿಪ್ಪೆ ಮಾಡಿದ್ದ ಕೊರೊನಾ ವೈರಸ್ ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿತ್ತು. ಆದ್ರೀಗ ಮತ್ತೆ ತನ್ನ ಆಟ ಶುರು ಮಾಡಿದ್ದು ಶರವೇಗದಲ್ಲಿ ಸ್ಪ್ರೆಡ್ ಆಗ್ತಿದೆ. ಇದೇ ಕಾರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಉಸಿರಾಟ ಸಂಬಂಧಿ ಕಾಯಿಲೆಗಳ ಉಲ್ಬಣ ಮತ್ತು ಕೊರೊನಾ ವೈರಸ್ನ ಉಪತಳಿ ಜೆಎನ್.1 ಹೆಚ್ಚಳದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಆತಂಕ ಹೊರ ಹಾಕಿದೆ. ಕೊರೊನಾ ವೈರಸ್ ವಿಕಸನಗೊಳ್ಳುತ್ತಿದೆ ಮತ್ತು ಅದರ ಪ್ರಭಾವ ಬದಲಾಗುತ್ತಿದೆ. ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ಸದಸ್ಯ ರಾಷ್ಟ್ರಗಳನ್ನು ಒತ್ತಾಯಿಸಿದೆ. ಈಗಾಗ್ಲೇ ಕೊವಿಡ್ 19, ಫ್ಲೋ, ರೈನೋವೈರಸ್, ಮೈಕೋಪ್ಲಾಸ್ಮಾ ನ್ಯುಮೋನಿಯಾ ಸೇರಿದಂತೆ ಹಲವಾರು ರೋಗಗಳಿಂದಾಗಿ ವಿಶ್ವಾದ್ಯಂತ ಉಸಿರಾಟದ ಸಮಸ್ಯೆಗಳು ಹೆಚ್ಚುತ್ತಿವೆ.
ಜೆಎನ್.1 ಮೊದಲ ಬಾರಿಗೆ ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಅಮೆರಿಕದಲ್ಲಿ ಪತ್ತೆಯಾಗಿತ್ತು. ಡಿಸೆಂಬರ್ 15ರಂದು ಚೀನಾದಲ್ಲಿ 7 ಪ್ರಕರಣಗಳು ಕಂಡುಬಂದಿದ್ದವು. ಇದು ವ್ಯಾಪಕವಾಗಿ ಹರಡುವ ಸಾಧ್ಯತೆ ಇದ್ದು, ಆತಂಕಕ್ಕೆ ಕಾರಣವಾಗಿದೆ. ಕೊವಿಡ್ 19 ಹಾಗೂ ಇನ್ಪ್ಲ್ಯುಯೆಂಜಾದ ತಾಜಾ ಪ್ರಕರಣಗಳು ಅಮೆರಿಕದ ಆರೋಗ್ಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು ಎಂದು ಅಲ್ಲಿನ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು ಎಚ್ಚರಿಕೆ ನೀಡಿತ್ತು. ಭಾರತದಲ್ಲೂ ಕೂಡ ಮೊದಲ ಬಾರಿಗೆ ಕೇರಳದಲ್ಲಿ ಜೆಎನ್.1 ರೂಪಾಂತರಿ ಕಾಣಿಸಿತ್ತು. 79 ವರ್ಷದ ಮಹಿಳೆಯೊಬ್ಬರಲ್ಲಿ ಇದು ಮೊದಲು ಕಾಣಿಸಿತ್ತು. ಕೇರಳದಲ್ಲಿ ಈ ಉಪತಳಿಯ ಸೋಂಕು ದಿನೇ ದಿನೇ ವ್ಯಾಪಕವಾಗಿ ಹರಡುತ್ತಿದೆ, ಮಾತ್ರವಲ್ಲ ಸಾವಿನ ಸಂಖ್ಯೆಯು ಏರಿಕೆಯಾಗುತ್ತಿದೆ. ಸದ್ಯ ವರದಿಯಾದ ರೋಗಲಕ್ಷಣಗಳಲ್ಲಿ ಜ್ವರ, ಮೂಗು ಸೋರುವುದು, ಗಂಟಲು ನೋವು, ತಲೆನೋವು, ಕೆಮ್ಮು ಕಾಣಿಸಿಕೊಳ್ತಿದೆ.
ಇನ್ನು ನಮ್ಮ ಮುಂದಿರುವ ಅತಿದೊಡ್ಡ ಸವಾಲು ಅಂದ್ರೆ ಕೊವಿಡ್ ರೂಪಾಂತರಿ ಬಾರದಂತೆ ತಡೆಯುವುದು. ಒಮ್ಮೆ ರೂಪಾಂತರಿ ದಾಳಿಗೆ ಒಳಗಾದರೆ ಅದರಿಂದ ಯಾವೆಲ್ಲಾ ಸಮಸ್ಯೆಗಳು ಎದುರಾಗಬಹುದು ಎಂಬುದು ಊಹಿಸಲು ಆಗುವುದಿಲ್ಲ. ಹೀಗಾಗೇ ನೆರೆ ರಾಜ್ಯ ಕೇರಳದಲ್ಲಿ ಕೊವಿಡ್ ಸಾಂಕ್ರಾಮಿಕ ರೋಗ ಭೀತಿ ಹುಟ್ಟಿಸಿದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದೆ. ಅಯ್ಯಪ್ಪ ಮಾಲಾಧಾರಿಗಳು ಬೃಹತ್ ಸಂಖ್ಯೆಯಲ್ಲಿ ಕೇರಳದ ಶಬರಿಮಲೆಗೆ ವಿವಿಧ ರಾಜ್ಯಗಳಿಂದ ಅದ್ರಲ್ಲೂ ವಿಶೇಷವಾಗಿ ಕರ್ನಾಟಕದಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಾರೆ. ಇದ್ರಿಂದಾಗಿ ಕೊರೊನಾ ಸೋಂಕು ಹರಡುವ ಭೀತಿ ಸೃಷ್ಟಿಯಾಗಿದ್ದು, ಅಯ್ಯಪ್ಪ ಭಕ್ತರ ಮೇಲೆ ಕರ್ನಾಟಕ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ವರ್ಷಾಂತ್ಯಕ್ಕೆ ಕೇರಳ ರಾಜ್ಯದಲ್ಲಿ ಕೊರೊನಾ ಕಂಟಕ ಭೀತಿ ಮತ್ತೆ ಶುರು ಆಗಿರೋದ್ರಿಂದ ಕರುನಾಡಿನಲ್ಲಿ ಫುಲ್ ಅಲರ್ಟ್ ಘೋಷಿಸಲಾಗಿದೆ.