ಮಾರ್ಚ್‌ ನಲ್ಲಿ H3N2 ಸೋಂಕು ಕಡಿಮೆಯಾಗುತ್ತಾ? – ಆರೋಗ್ಯ ಸಚಿವಾಲಯ ಹೇಳಿದ್ದೇನು?

ಮಾರ್ಚ್‌ ನಲ್ಲಿ H3N2 ಸೋಂಕು ಕಡಿಮೆಯಾಗುತ್ತಾ? – ಆರೋಗ್ಯ ಸಚಿವಾಲಯ ಹೇಳಿದ್ದೇನು?

ನವದೆಹಲಿ: ಕಳೆದ ಕೆಲವು ದಿನಗಳಿಂದ ಭೀತಿ ಹುಟ್ಟಿಸುತ್ತಿರುವ H3N2 ವೈರಸ್ ಗೆ ದೇಶದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಅಲ್ಲದೇ ಸೋಂಕು ವೇಗವಾಗಿ ಹರಡುತ್ತಿರುವುದರಿಂದ ಸಹಜವಾಗಿಯೇ ಜನರಲ್ಲಿ ಆತಂಕ ಮೂಡಿಸಿದೆ. ಇದೀಗ ಕೇಂದ್ರ ಆರೋಗ್ಯ ಸಚಿವಾಲಯ H3N2 ವೈರಸ್ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದೆ.

ಜನರಲ್ಲಿ ಭೀತಿ ಹುಟ್ಟಿಸುತ್ತಿರುವ H3N2 ವೈರಸ್ ಮಾರ್ಚ್ ಅಂತ್ಯದ ವೇಳೆಗೆ ಇಳಿಕೆಯಾಗಲಿದೆ ಅಂತಾ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇಂಟಿಗ್ರೇಟೆಡ್ ಡಿಸೀಸ್ ಸರ್ವೆಲೆನ್ಸ್ ಪ್ರೋಗ್ರಾಂ ನೆಟ್‌ವರ್ಕ್‌ ಮೂಲಕ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ H3N2 ವೈರಸ್‌ ಪರಿಸ್ಥಿತಿಯನ್ನು ಅವಲೋಕಿಸಿ ಈ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ:ಬಿಜೆಪಿಗೆ ಬೆಂಬಲವಷ್ಟೇ.. ಅಧಿಕೃತ ಸೇರ್ಪಡೆ ಇಲ್ಲ – ‘ಕಮಲ’ ಮುಡಿಯಲು ಸುಮಲತಾಗಿರುವ ಸವಾಲುಗಳೇನು..?

15 ವರ್ಷದ ಕೆಳಗಿನ ಮಕ್ಕಳು ಮತ್ತು 65 ವರ್ಷ ದಾಟಿದ ವೃದ್ಧರಿಗೆ ಈ ಸೋಂಕು ಸುಲಭವಾಗಿ ತಗುಲುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಈ ವಯೋಮಾನದವರೆಲ್ಲ ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಹಾಸನದ ಹಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 83 ವರ್ಷದ ವೃದ್ದ ಮಾ.1ರಂದು ಮೃತಪಟ್ಟಿದ್ದು, ಅವರ ಮಾದರಿಯನ್ನು ಇನ್‌ಫ್ಲೂಯೆಂಜಾ ಪರೀಕ್ಷೆಗೆ ಕಳುಹಿಸಿದ್ದಾಗ H3N2 ಸೋಂಕು ದೃಢಪಟ್ಟಿದೆ. ಇದು H3N2 ಗೆ ರಾಜ್ಯದ ಮೊದಲ ಬಲಿಯಾಗಿದೆ. ಹರಿಯಾಣದಲ್ಲಿ ಫೆ.8ರಂದು ಮೃತಪಟ್ಟ 56 ವರ್ಷದ ವ್ಯಕ್ತಿಯು ಶ್ವಾಸಕೋಶದ ಕ್ಯಾನ್ಸರ್‌ ರೋಗಿಯಾಗಿದ್ದು, ಈತನಿಗೆ H3N2 ವೈರಸ್‌ ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಹೀಗಾಗಿ ರಾಜ್ಯದ ಪ್ರಕರಣವನ್ನು H3N2 ಗೆ ದೇಶದ 2ನೇ ಬಲಿ ಎಂದು ಪರಿಗಣಿಸಲಾಗಿದೆ.

H3N2 ವೈರಸ್‌ನಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳಲ್ಲಿ ಶೇ.92 ಮಂದಿಯಲ್ಲಿ ಜ್ವರ ಕಂಡು ಬಂದಿದ್ದು, ಶೇ.86 ಮಂದಿ ಕೆಮ್ಮು, ಶೇ.27 ಉಸಿರಾಟದ ತೊಂದರೆ, ಶೇ.16 ಉಬ್ಬಸ, ಶೇ.16 ನ್ಯುಮೋನಿಯಾ ಮತ್ತು ಶೇ.6 ಬಳಲಿಕೆಯನ್ನು ಹೊಂದಿದವರಾಗಿದ್ದಾರೆ. ಉಸಿರಾಟದ ತೊಂದರೆ ಹೊಂದಿರುವವರಲ್ಲಿ ಶೇ.10 ಮಂದಿಗೆ ಆಮ್ಲಜನಕದ ಅಗತ್ಯ ಹಾಗೂ ಶೇ.7 ಮಂದಿಗೆ ತೀವ್ರ ನಿಗಾ ಘಟಕದ ಆರೈಕೆಯ ಅಗತ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ.

ಈ ವರ್ಷ ಜ.2ರಿಂದ ಮಾ.9ರವರೆಗೆ ದೇಶದಲ್ಲಿ H3N2 ವೈರಸ್‌ ಸೇರಿದಂತೆ ಇನ್ನಿತರ ಮಾದರಿಯ 5, 451 ಇನ್‌ಫ್ಲುಯೆಂಜಾ ವೈರಸ್‌ ಪ್ರಕರಣಗಳು ದೃಢಪಟ್ಟಿವೆ ಅಂತಾ ಆರೋಗ್ಯ ಸಚಿವಾಲಯ ತಿಳಿಸಿದೆ.

H3N2 ಸೋಂಕಿನ ರೋಗ ಲಕ್ಷಣಗಳು

ಮೈ ಕೈ ನೋವು, ತೀವ್ರಶೀತ, ಜ್ವರ ಮತ್ತು ಕೆಮ್ಮು, ಉಸಿರಾಟದ ಸಮಸ್ಯೆ ಕಾಡಬಹುದು, ಜ್ವರ, ಕೆಮ್ಮು ಕಾಣಿಸಿಕೊಂಡ ಎರಡು ಮೂರು ದಿನಗಳ ಬಳಿಕ ಕಡಿಮೆಯಾಗಲಿದೆ. ಕೆಮ್ಮು ಮತ್ತು ಕಫ ಎರಡು ವಾರಗಳವರೆಗೂ ಇರಲಿದೆ. ಈ ವೈರಾಣು ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮ ವಹಿಸುವುದು ಅಗತ್ಯ ಎಂದು ತಜ್ಞರು ತಿಳಿಸಿದ್ದಾರೆ.

suddiyaana