ಹಿಂದೂ ವಿದ್ಯಾರ್ಥಿನಿಯರ ಮೇಲೆ ನಡೆದ ಮಾನಹರಣದ ಸಾಕ್ಷ್ಯಗಳನ್ನು ತುಘಲಕ್ ಸರ್ಕಾರ ತಿರುಚುತ್ತಿದೆ – ಬಿಜೆಪಿ ಆರೋಪ

ಹಿಂದೂ ವಿದ್ಯಾರ್ಥಿನಿಯರ ಮೇಲೆ ನಡೆದ ಮಾನಹರಣದ ಸಾಕ್ಷ್ಯಗಳನ್ನು ತುಘಲಕ್ ಸರ್ಕಾರ ತಿರುಚುತ್ತಿದೆ – ಬಿಜೆಪಿ ಆರೋಪ

ಬೆಂಗಳೂರು: ಉಡುಪಿಯ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಯುವತಿಯರ ವಿಡಿಯೋ ಚಿತ್ರೀಕರಿಸಿದ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಭಾರಿ ವಿವಾದ ಎಬ್ಬಿಸಿದೆ. ಈ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಇದೀಗ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ. ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಕೆಲಸ ಮಾಡಿದ್ದ ಉಡುಪಿ ಕಾಲೇಜಿನ ಘಟನೆಯ ಬಗ್ಗೆ ಸಮಗ್ರ ತನಿಖೆಯನ್ನು ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿರುವುದು ಪ್ರಶಂಸನೀಯ ವಿಚಾರ. ರಾಜ್ಯದ ತುಘಲಕ್ ಸರ್ಕಾರ ಇನ್ನಾದರೂ ತನ್ನ ಓಲೈಕೆ ರಾಜಕಾರಣಕ್ಕೆ ತಿಲಾಂಜಲಿ ಹಾಡಿ, ತಪ್ಪಿತಸ್ಥರಿಗೆ ಶಿಕ್ಷೆಯಾಗುವತ್ತ ಗಮನಹರಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ದೇಶವೇ ತಲೆ ತಗ್ಗಿಸುವಂತಹ ಉಡುಪಿಯ ಅಮಾನುಷ ಘಟನೆಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮುಚ್ಚಿ ಹಾಕಲು ಎಲ್ಲಾ ರೀತಿಯ ಸಕಲ ಪ್ರಯತ್ನ ನಡೆಸುತ್ತಿದೆ. ತನ್ನ ಒಲೈಕೆ ರಾಜಕಾರಣಕ್ಕಾಗಿ ಹಿಂದೂ ವಿದ್ಯಾರ್ಥಿನಿಯರ ಮೇಲೆ ನಡೆದ ಮಾನಹರಣದ ಸಾಕ್ಷ್ಯಗಳನ್ನು ಪೊಲೀಸರ ಮೇಲೆ ಒತ್ತಡ ಹೇರಿ ತುಘಲಕ್ ಸರ್ಕಾರ ತಿರುಚುತ್ತಿದೆ ಎಂದು ಆರೋಪಿಸಿದೆ.

ಇದನ್ನೂ ಓದಿ: ಕಾಲೇಜು ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ – ಮೂವರು ವಿದ್ಯಾರ್ಥಿನಿಯರ ಮೇಲೆ ಎಫ್‌ಐಆರ್‌

ಜಿಹಾದಿ ಮನಸ್ಥಿತಿಯ ಮೂವರು ವಿದ್ಯಾರ್ಥಿನಿಯರ ದುರ್ವರ್ತನೆ ಬಗ್ಗೆ ಕಾಲೇಜು ಆಡಳಿತ ಮಂಡಳಿ ಮತ್ತು ಪೊಲೀಸರು ಈ ಮೊದಲೇ ಒಪ್ಪಿಕೊಂಡು, ಅಮಾನತು ಮಾಡಲಾಗಿತ್ತು. ಆದರೆ, 24 ಗಂಟೆಗಳ ನಂತರ ಪ್ರಕರಣಕ್ಕೆ ಹೊಸ ತಿರುವನ್ನೇ ಕೊಡಲಾಗಿದ್ದು, ಈಗ ಈ ವಿಡಿಯೋಗಳು ಎಲ್ಲಿಯೂ ಹರಿದಾಡಿಯೇ ಇಲ್ಲ ಎಂದು, ವಿಡಿಯೋ ಮಾಡಿದ್ದು “ಮಕ್ಕಳಾಟ”ಕ್ಕಾಗಿ ಎಂದು ಈ ಕೇಸ್‌ ಅನ್ನು ತರಾತುರಿಯಲ್ಲಿ ಮುಚ್ಚಿ ಹಾಕಲಾಗುತ್ತಿದೆ. 24 ಗಂಟೆಯಲ್ಲೇ ಪೊಲೀಸರು ಎರಡೆರಡು ಹೇಳಿಕೆ ನೀಡಲು ಅಧಿಕಾರಿಗಳ ಮೇಲೆ ಒತ್ತಡ ಹಾಕಿದ ಕಾಣದ ಕೈಗಳು ಯಾವುವು..? ಎಂದು ಪ್ರಶ್ನಿಸಿದೆ.

ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ಆಗಿಲ್ಲ ಹೀಗಾಗಿ ಇದು ಅಪರಾಧವಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಪೊಲೀಸರ ಮೇಲೆ ಒತ್ತಡ ಹಾಕಿ ಈ ಪ್ರಕರಣಕ್ಕೆ ತಿಲಾಂಜಲಿ ಇಡುತ್ತಿದೆ. ಹಿಂದೂ ಯುವತಿಯರು ಶೌಚಾಲಯದಲ್ಲಿರುವಾಗ ವಿಡಿಯೋ ಮಾಡುವುದು ಅಪರಾಧ ಅಲ್ಲವೇ..? ಚಿತ್ರೀಕರಿಸಿರುವ ವಿಡಿಯೋ ಇಲ್ಲವೇ ಇಲ್ಲ ಎಂದು ಮೊಬೈಲ್‌ಗಳನ್ನು ಫೋರೆನ್ಸಿಕ್ ಲ್ಯಾಬ್‌ಗೆ ಏಕೆ ಒಳಪಡಿಸಲಿಲ್ಲ.? ಎಂದು ಪ್ರಶ್ನಿಸಿದೆ.

ಪ್ರಕರಣದ ನಿಜವಾದ ಅಪರಾಧಿಗಳನ್ನು ಬಂಧಿಸಿ ಸಮಗ್ರ ತನಿಖೆ ಮಾಡಿ ಇದರ ಹಿಂದೆ ಇರುವ ಕಾಣದ ಕೈಗಳು ಯಾವುವು ಎನ್ನುವುದನ್ನು ಪೊಲೀಸರಿಂದ ಪತ್ತೆ ಮಾಡಿಸುವುದರಲ್ಲಿ ಸರ್ಕಾರ ವೈಫಲ್ಯವೆಸಗಿದೆ. ಆ ವಿಡಿಯೋ ಸಮಾಜಘಾತುಕರ ಕೈಗೆ ಸಿಕ್ಕಿ ಮುಂದೆ ನಡೆಯಬಹುದಾದ ಅನಾಹುತಗಳನ್ನು ತಡೆಯುವುದರಲ್ಲೂ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ರಾಜಕೀಯಕ್ಕಾಗಿ, ಜಿಹಾದಿ ಮನಸ್ಥಿತಿಗಳನ್ನು ರಕ್ಷಣೆ ಮಾಡುವುದಕ್ಕಾಗಿ ಈ ಪ್ರಕರಣವನ್ನು ಜಗತ್ತಿಗೆ ಬಯಲು ಮಾಡಿದ ಹಿಂದೂ ಯುವತಿಯ ಮನೆಗೆ ರಾತ್ರೋ ರಾತ್ರಿ ಪೊಲೀಸರನ್ನು ನುಗ್ಗಿಸಿ ಕಿರುಕುಳ ನೀಡುವ ಕೆಲಸ ಮಾಡಿದೆ. ರಾಜ್ಯ ಸರ್ಕಾರ ಸಂಪೂರ್ಣವಾಗಿ ಪ್ರಕರಣವನ್ನು ಹಳ್ಳ ಹಿಡಿಸುವ ಕೆಲಸಕ್ಕೆ ಕೈ ಹಾಕಿರುವುದರಿಂದ ಈಗ ರಾಷ್ಟ್ರೀಯ ಮಹಿಳಾ ಆಯೋಗ ಖುದ್ದು ತನಿಖೆಗೆ ಇಳಿದಿದೆ‌ ಎಂದು ಆಕ್ರೋಶ ಹೊರಹಾಕಿದೆ.

ರಾಜ್ಯದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಪುಂಖಾನುಪುಂಖವಾಗಿ ಪುಂಗಿ ಊದುವ ಸಿದ್ದರಾಮಯ್ಯನವರ  ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎರಚುವ ಕೆಲಸ ಮಾಡುತ್ತಿದೆ. ಒಂದು ಕಡೆ ಹಿಂದೂ ಯುವತಿಯರ ಮೇಲೆ ನಡೆದ ದೌರ್ಜನ್ಯಗಳನ್ನು ಮುಚ್ಚಿಹಾಕುವ ಕೆಲಸ ಮಾಡುತ್ತಿದ್ದರೆ, ಮತ್ತೊಂದಡೆ ಜಿಹಾದಿ ಮನಸ್ಥಿತಿಯ ಸಮಾಜಘಾತುಕರನ್ನು ರಕ್ಷಣೆ ಮಾಡಿ ಪ್ರೋತ್ಸಾಹ ನೀಡುತ್ತಿರುವುದು ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬಹುದೊಡ್ಡ ಅಪಾಯ..! ಎಂದು ಕಿಡಿಕಾರಿದೆ.

suddiyaana