ಐದು ತಿಂಗಳ ಹಿಂದೆ ನಾಪತ್ತೆಯಾದ ಖ್ಯಾತ ನಟ – ಕೊನೆಗೂ ಸಿಕ್ಕಿದ್ದು ನಟನ ಅಸ್ಥಿಪಂಜರ..!

ಐದು ತಿಂಗಳ ಹಿಂದೆ ನಾಪತ್ತೆಯಾದ ಖ್ಯಾತ ನಟ – ಕೊನೆಗೂ ಸಿಕ್ಕಿದ್ದು ನಟನ ಅಸ್ಥಿಪಂಜರ..!

ಆಸ್ಕರ್ ವಿಜೇತ ‘ಎ ರೂಮ್ ವಿತ್ ಎ ವ್ಯೂ’ ಚಿತ್ರದ ಪಾತ್ರದ ಮೂಲಕ ಖ್ಯಾತರಾಗಿದ್ದ ಜೂಲಿಯನ್ ಸ್ಯಾಂಡ್ಸ್ ಅವರು ನಾಪತ್ತೆಯಾಗಿ ಐದು ತಿಂಗಳಾಗಿತ್ತು. ನಟನಿಗಾಗಿ ವ್ಯಾಪಕ ಶೋಧ ಕಾರ್ಯ ನಡೆಸಲಾಗಿತ್ತು. ಕೊನೆಗೂ ನಟನ ಅಸ್ಥಿಪಂಜರ ಸಿಕ್ಕಿದ್ದು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಜನವರಿಯಲ್ಲಿ ಅವರು ಅಮೆರಿಕದ ಕ್ಯಾಲಿಫೋರ್ನಿಯಾ ಸಮೀಪದ ಪರ್ವತವೊಂದಕ್ಕೆ ಒಂಟಿಯಾಗಿ ಚಾರಣಕ್ಕೆ ತೆರಳಿದ್ದರು. ಅಂದಿನಿಂದ ನಟ ನಾಪತ್ತೆಯಾಗಿದ್ದರು.

ಇದನ್ನೂ ಓದಿ: ತಂದೆಯಿಂದ ಮಗಳ ಮರ್ಯಾದೆ ಗೇಡು ಹತ್ಯೆ – ಪ್ರೇಯಸಿಯ ಕೊಲೆ ವಿಚಾರ ತಿಳಿದು ಪ್ರಿಯಕರನಿಂದ ಆತ್ಮಹತ್ಯೆ..!

65 ವರ್ಷದ ಜೂಲಿಯನ್ ಅವರ ಶವ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಂಗಳವಾರ ದೃಢಪಡಿಸಿದ್ದಾರೆ. ಅಸ್ಥಿಪಂಜರದ ಭಾಗ ಉಳಿದಿರುವ ಮಾನವ ದೇಹವೊಂದು ಚಾರಣಿಗರಿಗೆ ಜೂನ್ 25ರಂದು ಸಿಕ್ಕಿದೆ. ಜೂಲಿಯನ್ ಸ್ಯಾಂಡ್ಸ್ ಅವರು ಕಣ್ಮರೆಯಾದ ಸ್ಥಳದಲ್ಲಿಯೇ ಅದು ದೊರಕಿದೆ. ಅಸ್ಥಿಪಂಜರದ ಜತೆ ದೊರೆತ ವಸ್ತುಗಳನ್ನು ಪರಿಶೀಲಿಸಿ, ಅದು ಸ್ಯಾಂಡ್ಸ್ ಅವರದ್ದೇ ಶವ ಎಂದು ಖಚಿತವಾಗಿರುವುದಾಗಿ ಸ್ಯಾನ್ ಬರ್ನಾರ್ಡಿನೊ ಕೌಂಟಿ ಅಧಿಕಾರಿಗಳು ತಿಳಿಸಿದ್ದಾರೆ. ಬಹುತೇಕ ದೇಹ ಕೊಳೆತು ಹೋಗಿರುವ ಅಸ್ಥಿಪಂಜರವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅದರ ಫಲಿತಾಂಶದ ಆಧಾರದಲ್ಲಿ ಅವರ ಸಾವು ಹೇಗೆ ಸಂಭವಿಸಿದೆ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ.

ಸ್ಯಾಂಡ್ಸ್ ಅವರು ಪರ್ವತಾರೋಹಿಯಾಗಿದ್ದರು. ಲಾಸ್ ಏಂಜಲಿಸ್‌ನ ಈಶಾನ್ಯ ಭಾಗದಿಂದ ಸುಮಾರು 50 ಮೈಲು ದೂರದಲ್ಲಿರುವ ಸ್ಯಾನ್ ಗ್ಯಾಬ್ರಿಯಲ್ ಮೌಂಟೇನ್‌ನ ಬಾಲ್ಡಿ ಬೌಲ್ ಪ್ರದೇಶದಲ್ಲಿ ಚಾರಣ ನಡೆಸಲು ಜನವರಿ 13ರಂದು ಏಕಾಂಗಿಯಾಗಿ ತೆರಳಿದ್ದರು. ಆದರೆ ಅಂದಿನಿಂದ ಅವರು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಮೌಂಟ್ ಬಾಲ್ಡಿಯ ಶಿಖರಕ್ಕಿಂತ ಕೆಳಗಿನ ಬೃಹತ್ತಾದ ಹಾಗೂ ಜಾರುವ ಪ್ರದೇಶವು ಸ್ಕೈಯರ್ಗಳು, ಪರ್ವತಾರೋಹಿಗಳು ಮತ್ತು ಚಾರಣಿಗರ ನೆಚ್ಚಿನ ಜಾಗವಾಗಿದೆ. ಆದರೆ ಚಳಿಗಾಲದ ಅವಧಿಯಲ್ಲಿ ಭಾರಿ ಪ್ರಮಾಣದ ಹಿಮ ಬೀಳುವುದರಿಂದ ಇಲ್ಲಿ ಪರ್ವತಾರೋಹಣ ಅಪಾಯಕಾರಿ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಸ್ಯಾಂಡ್ಸ್ ಅವರು ತೆರಳಿದ ವಾರದಂದು ರಾತ್ರಿ ತಾಪಮಾನವು 4 ರಿಂದ -4 ಡಿಗ್ರಿ ಸೆಲ್ಸಿಯಸ್ವರೆಗೆ ಕುಸಿಯುತ್ತಿತ್ತು. ಶೋಧ ತಂಡವನ್ನು ಕಳುಹಿಸಿದರೂ, ಭಾರಿ ಹಿಮಪಾತದ ಅಪಾಯ ಹಾಗೂ ಪ್ರತಿಕೂಲ ವಾತಾವರಣ ಸನ್ನಿವೇಶದ ಕಾರಣ 24 ಗಂಟೆಗಳಲ್ಲಿ ವಾಪಸ್ ಕರೆಸಿಕೊಳ್ಳಲಾಗಿತ್ತು. ಅನೇಕ ಶೋಧನಾ ಕಾರ್ಯಗಳು ವಿಫಲವಾಗಿದ್ದವು. ಸ್ಯಾಂಡ್ಸ್ ಅವರ ಮೃತದೇಹ ಪತ್ತೆಯಾಗುವುದಕ್ಕೂ ಕೆಲವು ದಿನಗಳ ಮುನ್ನ ಹಿಮವನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆ ನಡೆಸಲಾಗಿತ್ತು. ಜನವರಿ 15ರಂದು ಪತ್ತೆಯಾದ ಸೆಲ್ಫೋನ್ ಸಿಗ್ನಲ್ಗಳಿಂದಾಗಿ ಸ್ಯಾಂಡ್ಸ್ ಅವರು ಮೌಂಟ್ ಬಾಲ್ಡಿ ಪರ್ವತ ಶ್ರೇಣಿ ಕಡೆ ಹೊರಟಿರುವುದು ಗೊತ್ತಾಗಿತ್ತು. ಹಾಗೆಯೇ ಅದು ಅವರು ಇನ್ನೂ ಪರ್ವತದಲ್ಲಿ ಸಾಗುತ್ತಿರುವುದರ ಸುಳಿವು ನೀಡಿತ್ತು. ಜೂನ್ 21ರಂದು ಶೋಧ ತಂಡವು ಹುಡುಕಾಟ ನಡೆಸಿದ ನಂತರ ಸ್ಯಾಂಡ್ಸ್ ಅವರ ಕುಟುಂಬವು ಅವರನ್ನು ಮತ್ತೆ ನೋಡುವ ಆಸೆ ಕೈಬಿಟ್ಟಿತ್ತು. ಈ ಎಲ್ಲ ಪ್ರಯತ್ನಗಳಿಗಾಗಿ ಶೋಧ ತಂಡಗಳಿಗೆ ಕೃತಜ್ಞತೆ ಸಲ್ಲಿಸಿತ್ತು. ಇದಾಗಿ ಕೆಲವು ದಿನಗಳ ನಂತರ ಕೊನೆಗೂ ಮೃತದೇಹ ಕೊಳೆತು ಬಹುತೇಕ ಅಸ್ಥಿಪಂಜರದ ರೂಪದಲ್ಲಿ ಪತ್ತೆಯಾಗಿದೆ.

suddiyaana