ಅಕ್ಕಿ ಕಳ್ಳ.. ನಂತರ ಸ್ನೇಹಜೀವಿ – ಎಲ್ಲರ ಜೊತೆ ಬೆರೆಯುತ್ತಿರುವಾಗಲೇ ಮಾರ್ತಾಂಡನ ದುರಂತ ಅಂತ್ಯ

ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ದುರಂತ ಅಂತ್ಯ ಕಂಡ ಮಾರ್ತಾಂಡನ ವಿಚಾರದಲ್ಲಿ ನೋವು ಪಟ್ಟವರ ಸಂಖ್ಯೆ ಅದೆಷ್ಟೋ.. ಒಂದು ಕಾಲದಲ್ಲಿ ಅಕ್ಕಿ ಕಳ್ಳ ಎಂದೇ ಫೇಮಸ್ ಆಗಿದ್ದ ಮಾರ್ತಾಂಡ ನಂತರ ಬದಲಾಗಿದ್ದು ರೋಚಕ ಕಥೆ.
ಇದನ್ನೂ ಓದಿ:ಹೇಮಾವತಿ ಸಿಗದ ಸಿಟ್ಟಿಗೆ ರೊಚ್ಚಿಗೆದ್ದ ಕಂಜನ್ – ಹೆಣ್ಣಾನೆಗಾಗಿ ಮಾರ್ತಾಂಡನ ಜೀವ ತೆಗೆದ ಕಂಜನ್
ಪ್ರಸಿದ್ಧ ಅಕ್ಕಿ ಕಳ್ಳ.. ಅಕ್ಕಿ ವ್ಯಾಪಾರಿಗಳ ಪಾಲಿನ ದುಷ್ಮನ್.. ಒಂಟಿ ಮನೆಗಳೇ ಟಾರ್ಗೆಟ್.. ಅಂಗಡಿ ವ್ಯಾಪಾರಿಗಳಿಗೆ ಇವನೇ ವಿಲನ್.. ಹಸಿವೆಯಾಯ್ತೋ ಅಕ್ಕಿಗಾಗಿ ಹುಡುಕಾಟ.. ಈ ಅಕ್ಕಿ ಕಳ್ಳ ಆನೆಯನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅಂದಹಾಗೆ ಈ ಅಕ್ಕಿ ಕಳ್ಳನ ಬಗ್ಗೆ ಹಾಸನ ಜಿಲ್ಲೆ ಸಕಲೇಶಪುರ ಭಾಗದ ಜನರಿಗೆ ಚೆ್ನ್ನಾಗಿಯೇ ಗೊತ್ತು. ಅಕ್ಕಿಗಾಗಿ ಏನೇ ಸಾಹಸ ಬೇಕಾದರೂ ಮಾಡುವ ಒಂಟಿ ಸಲಗ ಅಂದರೆ ಆ ಭಾಗದ ಜನರಿಗೆ ಭೀತಿ. ಜನವಸತಿ ಪ್ರದೇಶಗಳಿಗೆ ನುಗ್ಗಿ, ಅಂಗಡಿಗಳ ಬಾಗಿಲುಗಳನ್ನು ಪುಡಿಪುಡಿ ಮಾಡಿ ಅಕ್ಕಿ ತಿನ್ನುವುದೇ ಈತನ ದಿನಚರಿಯಾಗಿತ್ತು. ಅಕ್ಕಿ ಹುಚ್ಚು ಎಷ್ಟಿತ್ತು ಅಂದರೆ, ಅಕ್ಕಿ ವಾಸನೆ ಬಂದರೆ ಸಾಕು ಆ ಅಂಗಡಿ ಪುಡಿ ಪುಡಿ ಅಂತಾನೇ ಲೆಕ್ಕ. ಮನೆಗಳಿಗೂ ನುಗ್ಗಿದ್ದೂ ಇದೆ. ಇದರಿಂದ ಬೇಸತ್ತ ಅರಣ್ಯ ಇಲಾಖೆ 2021ರಲ್ಲಿ ಮೊದಲ ಬಾರಿಗೆ ಬೃಹತ್ ಕಾರ್ಯಾಚರಣೆ ನಡೆಸಿ ಈತನನ್ನು ಸೆರೆಹಿಡಿದಿತ್ತು. ಬಂಡೀಪುರದಿಂದ ಸಕಲೇಶಪುರಕ್ಕೆ 15 ದಿನಗಳ ಕಾಲ ಪಾದಯಾತ್ರೆ ಮಾರ್ತಾಂಡನನ್ನು ಸೆರೆಹಿಡಿದ ಸಿಬ್ಬಂದಿ ಆತನಿಗೆ ರೇಡಿಯೋ ಕಾಲರ್ ಅಳವಡಿಸಿ, ಕಿಲೋಮೀಟರ್ ಗಳಷ್ಟು ದೂರದ ಬಂಡೀಪುರ ಅರಣ್ಯದಲ್ಲಿ ಬಿಟ್ಟು ಬಂದಿದ್ದರು.
ಆದರೆ ಅಕ್ಕಿಯ ರುಚಿ ಮರೆಯಕ್ಕಾಗುತ್ತಾ.. ಅಕ್ಕಿ ಮೇಲಿನ ಆಸೆ ಮತ್ತಷ್ಟು ಜಾಸ್ತಿಯಾಗುತ್ತಲೇ ಇತ್ತು. ಹೀಗಾಗಿ ಪುನ: ಅದೇ ದಾರಿಯಲ್ಲಿ ಮರಳಿದ್ದ ಅಕ್ಕಿಕಳ್ಳ. ಕಾಡಿನ ಹಾದಿಯಲ್ಲೇ ಬರೋಬ್ಬರಿ 15 ದಿನಗಳ ಕಾಲ ಸತತವಾಗಿ ನಡೆದು ಮರಳಿ ತನ್ನ ಹಳೇ ಅಡ್ಡಾ ಸಕಲೇಶಪುರಕ್ಕೇ ಬಂದು ತಲುಪಿದ್ದ. ಇದನ್ನು ನೋಡಿ ಅರಣ್ಯ ಅಧಿಕಾರಿಗಳೇ ದಂಗಾಗಿದ್ದರು. ಅಧಿಕಾರಿಗಳಿಗೆ ಮತ್ತೆ ಸವಾಲು ಹಾಕಿದ ಮಾರ್ತಾಂಡನನ್ನು ಎರಡನೇ ಬಾರಿ ಅತಿ ಕಷ್ಟದಿಂದ ಸೆರೆಹಿಡಿದು ದುಬಾರೆ ಕ್ಯಾಂಪ್ಗೆ ರವಾನಿಸಲಾಯಿತು. ಅಷ್ಟು ರೌಡಿಯಾಗಿದ್ದ ಅಕ್ಕಿ ಕಳ್ಳ ದುಬಾರೆ ಕ್ಯಾಂಪ್ಗೆ ಬಂದ ಮೇಲೆ ಮಾವುತರ ಮಾತಿಗೆ ಓಗೊಡುವ ಅತ್ಯಂತ ಸೌಮ್ಯ ಆನೆಯಾಗಿ ಬದಲಾಗಿದ್ದ. ಮಾರ್ತಾಂಡ ಎಷ್ಟು ಶಾಂತಸ್ವಭಾವದವನು ಅಂದರೆ ಪ್ರವಾಸಿಗರು ಹತ್ತಿರ ಬಂದು ಏನೇ ಮಾಡಿದರೂ ಶಾಂತಸ್ಥಿತಿಯಲ್ಲೇ ಇರುತ್ತಿದ್ದ. ಆದರೆ, ಮಾರ್ತಾಂಡನ ಆಯುಷ್ಯ ಮಂಗಳವಾರ ಮುಗಿದಿತ್ತು. ದಸರಾ ಆನೆ ಕಂಜನ್ ಸಿಟ್ಟಿಗೆ ಮಾರ್ತಾಂಡ ಬಲಿಯಾಗಿ ಹೋದ. ಅಕ್ಕಿ ಕಳ್ಳ ಎಂದು ಕುಖ್ಯಾತಿ ಪಡೆದು ನಂತರ ಸ್ನೇಹಜೀವಿ ಮಾರ್ತಾಂಡ ಎಂದು ಕರೆಸಿಕೊಂಡ ಮಾರ್ತಾಂಡನ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾನೆ. ಗಜಪ್ರೇಮಿಗಳು ಮಾತ್ರ ಮಾರ್ತಾಂಡನ ಮರೆಯುವುದಿಲ್ಲ..

ನೋಡಿರಿ

