ಬಾವಿಗೆ ಹಾರಿದ ತಂಗಿ, ಕಾಪಾಡಲು ಹೋದ ಅಣ್ಣನೂ ಬದುಕಲಿಲ್ಲ – ಹೇ ವಿಧಿಯೇ ನಿನಗಿದು ಸರಿಯೇ..?

ಬಾವಿಗೆ ಹಾರಿದ ತಂಗಿ, ಕಾಪಾಡಲು ಹೋದ ಅಣ್ಣನೂ ಬದುಕಲಿಲ್ಲ – ಹೇ ವಿಧಿಯೇ ನಿನಗಿದು ಸರಿಯೇ..?

ತಂಗಿಗೆ ಹಠ ಸ್ವಭಾವ. ಅಣ್ಣನಿಗೂ ಸ್ವಲ್ಪ ಸಿಟ್ಟು ಜಾಸ್ತಿ. ಇಬ್ಬರಿಗೂ ಒಬ್ಬರನೊಬ್ಬರನ್ನು ಬಿಟ್ಟಿರಲು ಸಾಧ್ಯವಾಗದ ಅನುಬಂಧ. ಕೊನೆಗೂ ಇದೇ ಅನುಬಂಧ ಸಾವಿನಲ್ಲೂ ಒಂದಾಗಿದೆ. ಕ್ಷಣಮಾತ್ರದ ಸಿಟ್ಟಿಗೆ ಅಣ್ಣ ತಂಗಿ ಶವವಾಗಿದ್ದಾರೆ. ಎದೆಯೆತ್ತರಕ್ಕೆ ಬೆಳೆದ ಮಕ್ಕಳು, ಆಸರೆಯಾಗುವ ವಯಸಿನಲ್ಲಿ ಶವವಾಗಿ ಮಲಗಿದ್ದು ನೋಡಿ ಹೆತ್ತವರ ಆಕ್ರಂದನ ಹೇಳತೀರದಾಗಿದೆ.

ಇದನ್ನೂ ಓದಿ: ಶಾಲೆಯ ಆವರಣದಲ್ಲಿ 27 ಆನೆಗಳು ಹಾಜರ್!‌ – ಹೊಸ ಸ್ಟೂಡೆಂಟ್ಸ್‌ ಎಂಟ್ರಿಗೆ ಶಾಲೆಗೆ ರಜೆ ಘೋಷಣೆ!

ತಂಗಿ ನಂದಿನಿ. ಇನ್ನೂ 18ರ ಹರೆಯ. ಅಣ್ಣ ಸಂದೀಪ್. ಈತನಿಗೆ 21 ವರ್ಷ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟಪಳ್ಳಿ ಗ್ರಾಮದ ನಿವಾಸಿಗಳು. ತಂಗಿ ನಂದಿನಿಗೆ ಸ್ವಲ್ಪ ಹಠ ಜಾಸ್ತಿ. ಮನೆಯವರ ಮಾತಿಗೆ ಪದೇ ಪದೇ ಪಠ ಮಾಡುತ್ತಿದ್ದಳು. ತಂಗಿಯ ಹಠ ನೋಡಿ ಅಣ್ಣ ಸಿಟ್ಟುಬಂದಾಗ ಬೈಯ್ಯುತ್ತಿದ್ದ. ಇದೇ ರೀತಿ ತಂಗಿ ನಂದಿನಿ ಕಾಲೇಜಿಗೆ ಹೋಗಲ್ಲ ಎಂದು ಹಠ ಮಾಡಿದ್ದಳು. ಆಗ ಅಣ್ಣ ಬೈದು ಬುದ್ದಿ ಹೇಳಿದ್ದಾನೆ. ಜೊತೆಗೆ ನಂದಿನಿಗೆ ಮದುವೆ ಪ್ರಸ್ತಾಪ ಕೂಡಾ ಬಂದಿತ್ತಂತೆ. ಇದು ಕೂಡಾ ನಂದಿನಿ ಮನಸಿಗೆ ನೋವಾಗಿತ್ತಂತೆ. ಅಣ್ಣ ಬೈದಿರುವ ಸಿಟ್ಟೋ, ಇಲ್ಲ ಒಲ್ಲದ ಮದುವೆ ಪ್ರಸ್ತಾಪಕ್ಕೆ ಬೇಜಾರೋ.. ನಂದಿನಿ ಮನೆಯಿಂದ ಹೊರ ಹೋಗಿದ್ದಾಳೆ. ತಂಗಿ ಮನೆಯಿಂದ ಹೊರಗೆ ಹೋದಾಗ ಅಣ್ಣನು ಹಿಂಬಾಲಿಸಿದ್ದಾನೆ. ಆದರೆ, ಅಣ್ಣ ನಂದಿನಿ ನಿಲ್ಲು ಅಂತಾ ಹೇಳ್ತಾ ಓಡಿ ಬರುವಾಗಲೇ ಆಕೆ ಬಾವಿಗೆ ಹಾರಿದ್ದಾಳೆ. ತಂಗಿ ಓಡಿ ಹೋಗಿ ಬಾವಿಗೆ ಜಿಗಿದಿದ್ದು ನೋಡಿ ಅಣ್ಣ ಕೂಡ ಬಾವಿಗೆ ಹಾರಿದ್ದಾನೆ. ತಂಗಿಯನ್ನು ಕಾಪಾಡಲು ಹಿಂದೆ ಮುಂದೆ ಯೋಚಿಸದೇ ತಾನು ಬಾವಿಗೆ ಜಿಗಿದಿದ್ದಾನೆ. ಆದರೆ, ತಂಗಿಯನ್ನೂ ಕಾಪಾಡಿಕೊಳ್ಳಲಾಗದೇ, ತಾನೂ ಕೂಡಾ ಬಾವಿಯೊಳಗೆ ಪ್ರಾಣ ಬಿಟ್ಟಿದ್ದಾನೆ.

ಇಬ್ಬರನ್ನೂ ಹುಡುಕಿಕೊಂಡು ಬಂದ ಹೆತ್ತವರಿಗೆ ಪಾಪ.. ತಮ್ಮ ಮಕ್ಕಳು ಇನ್ನಿಲ್ಲ ಎಂಬ ಸತ್ಯ ಗೊತ್ತಿರಲಿಲ್ಲ. ಅಣ್ಣ ತಂಗಿಯಲ್ವಾ. ಸ್ವಲ್ಪ ಹೊತ್ತು ಜಗಳ ಮಾಡ್ತಾರೆ. ಆಮೇಲೆ ಒಂದಾಗ್ತಾರೆ ಅಂತಾ ಅಂದುಕೊಂಡಿದ್ದರು. ಆದರೆ, ಬಾವಿಯ ದಡದಲ್ಲಿ ನಂದಿನಿ ತಲೆಗೆ ಮುಡಿದುಕೊಂಡಿದ್ದ ಹೂವಿನ ಗೊಂಚಲು ಕಾಣಿಸಿದೆ. ಇದನ್ನು ಗಮನಿಸಿದ ಹೆತ್ತವರು ಅನುಮಾನಗೊಂಡು ಬಾವಿಯೊಳಗೆ ಇಣುಕಿ ನೋಡಿದಾಗ ಕಂಡಿದ್ದು ಅಣ್ಣ ತಂಗಿಯ ತೇಲಾಡುತ್ತಿರುವ ಶವಗಳು. ಯಾವ ತಂದೆ ತಾಯಿಗೂ ಇಂಥಾ ದಿನ ಬರಲೇಬಾರದು. ಅದು ಕೂಡಾ ಮಕ್ಕಳಿಬ್ಬರೂ ಜೊತೆಯಲ್ಲೇ ಶವವಾಗಿ ಇರುವ ದಾರುಣ ಸನ್ನಿವೇಶ ನೋಡಿ ಹೆತ್ತವರ ಆಕ್ರಂದನ ಮುಗಿಲುಮುಟ್ಟಿತ್ತು. ಗ್ರಾಮಕ್ಕೆ ಗ್ರಾಮವೇ ಅಣ್ಣ ತಂಗಿಯ ಸಾವು ಕಂಡು ಕಣ್ಣೀರಿಟ್ಟಿದೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Sulekha