ಕರೆಂಟ್ ಬಿಲ್ ಏರಿಕೆ ಬೆನ್ನಲ್ಲೇ ಸಿಡಿದೆದ್ದ ವ್ಯಾಪಾರಿಗಳು – ಬಳ್ಳಾರಿಯಲ್ಲಿ ಅಂಗಡಿಗಳನ್ನ ಮುಚ್ಚಿ ಆಕ್ರೋಶ

ಕರೆಂಟ್ ಬಿಲ್ ಏರಿಕೆ ಬೆನ್ನಲ್ಲೇ ಸಿಡಿದೆದ್ದ ವ್ಯಾಪಾರಿಗಳು – ಬಳ್ಳಾರಿಯಲ್ಲಿ ಅಂಗಡಿಗಳನ್ನ ಮುಚ್ಚಿ ಆಕ್ರೋಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ 5 ಗ್ಯಾರಂಟಿಗಳ ಜಾರಿಗೆ ಮುಹೂರ್ತ ಫಿಕ್ಸ್ ಮಾಡಿತ್ತು. ಅದರಂತೆ ಈಗಾಗಲೇ ಬಹುಮಹತ್ವಾಕಾಂಕ್ಷಿ ಶಕ್ತಿ ಯೋಜನೆಗೆ ಜೂನ್ 11ರಂದು ಸಿಎಂ ಸಿದ್ದರಾಮಯ್ಯ ಚಾಲನೆ ಕೂಡ ನೀಡಿದ್ರು. ಮಹಿಳೆಯರು ತಮ್ಮ ವಾಸಸ್ಥಳ ದೃಢೀಕರಣ ಪತ್ರ ತೋರಿಸಿ ಸಂಚಾರ ಮಾಡುತ್ತಿದ್ದಾರೆ. ಆದರೆ ಈ ಫ್ರೀ ಭಾಗ್ಯಗಳ ನಡುವೆಯೇ ಕರೆಂಟ್ ಬಿಲ್ ಈ ತಿಂಗಳು ದುಪ್ಪಟ್ಟು ಬಂದಿದೆ. ಹೀಗಾಗಿ ವ್ಯಾಪಾರ ಬಂದ್ ಮಾಡಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದಾರೆ.

ರಾಜ್ಯ ಸರ್ಕಾರದಿಂದ ಷರತ್ತುಗಳೊಂದಿಗೆ 200 ಯೂನಿಟ್‌ ಉಚಿತ ವಿದ್ಯುತ್‌ ಘೋಷಣೆಯಾದ ಬೆನ್ನಲ್ಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಕಳೆದ ಮೇ 12 ರಂದು ವಿದ್ಯುತ್ ದರವನ್ನು ಪ್ರತಿ ಯೂನಿಟ್ ಗೆ 70 ಪೈಸೆ ಏರಿಕೆ ಮಾಡಿದೆ. ಇದರಿಂದ ರೊಚ್ಚಿಗೆದ್ದ ವರ್ತಕರು ಬೇಕಾಬಿಟ್ಟಿ ದರ ಏರಿಕೆ ಖಂಡಿಸಿ ಅಘೋಷಿತ ಬಂದ್‌ಗೆ ಮುಂದಾಗಿದ್ದಾರೆ. ಬಳ್ಳಾರಿಯ ಕಾಳಂಮ್ಮಾ ಸ್ಟ್ರೀಟ್‌ ಸಂಪೂರ್ಣವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿ ವರ್ತಕರು ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ : ಲಗೇಜ್ ಟಿಕೆಟ್ ಪಡೆಯಲು ಮಹಿಳೆಯರ ತಕರಾರು –  ಬಸ್‌ನಿಂದ ಕೆಳಗಿಳಿಸಿ ಹೊರಟ ಕಂಡಕ್ಟರ್

ಒಂದು ಕಡೆ ಉಚಿತ ವಿದ್ಯುತ್ ಮತ್ತೊಂದು ಕಡೆ ಕರೆಂಟ್ ಬಿಲ್ ಹೆಚ್ಚಳದಿಂದ ರಾಜ್ಯದ ಜನರು ಮತ್ತು ವ್ಯಾಪಾರಿಗಳು ತತ್ತರಿಸಿದ್ದಾರೆ. ಹೀಗಾಗಿ ಬಳ್ಳಾರಿ ಜಿಲ್ಲೆಯ ಕಾಳಮ್ಮ ಬೀದಿಯಲ್ಲಿ ವ್ಯಾಪಾರಿಗಳು ಮಾರುಕಟ್ಟೆಯನ್ನು ಸಂಪೂರ್ಣ ಬಂದ್ ಮಾಡಿ ಆಕ್ರೋಶ ಹೊರ ಹಾಕಿದ್ರು. ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಅಧಿಕ ಕರೆಂಟ್ ಬಿಲ್​ ದರ ಹಿನ್ನೆಲೆ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ವ್ಯಾಪಾರಿಗಳು ಮಾರುಕಟ್ಟೆ ಬಂದ್ ಮಾಡಿದ್ದರು. ದಿನಬೆಳಗಾದ್ರೆ ಜನರಿಂದ ತುಂಬಿರುತ್ತಿದ್ದ ಕಾಳಮ್ಮ ಬೀದಿ ಇವತ್ತು ಬಂದ್ ಕಾರಣದಿಂದಾಗಿ ಬಿಕೋ ಎನ್ನುತ್ತಿತ್ತು. ಬೇಕಾಬಿಟ್ಟಿಯಾಗಿ ಬೆಲೆ ಏರಿಕೆ ಮಾಡಿದ್ದಾರೆ ಎಂದು ಅಘೋಷಿತ ಬಂದ್ ಗೆ ಕರೆ ನೀಡಿದ್ದರು.

ವಿದ್ಯುತ್‌ ಬಿಲ್‌ ಏರಿಕೆ ಸಂಬಂಧ ಬೆಸ್ಕಾಂ ಸ್ಪಷ್ಟನೆ ನೀಡಿತ್ತು. ವಿದ್ಯುತ್ ದರ ಪರಿಷ್ಕರಣೆ ಆದೇಶ ಏಪ್ರಿಲ್ ನಿಂದ ಪೂರ್ವನ್ವಯವಾಗುವುದರಿಂದ ಬಿಲ್ ನಲ್ಲಿ ಏಪ್ರಿಲ್ ತಿಂಗಳ ಹಿಂಬಾಕಿಯನ್ನು ನೀಡಲಾಗಿದೆ. ಹಾಗೆಯೇ ಕೆಇಆರ್‌ಸಿ ಆದೇಶದ ಪ್ರಕಾರ ಎರಡು ಶ್ರೇಣಿಗಳಲ್ಲಿ ವಿದ್ಯುತ್ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ. ಗ್ರಾಹಕರು ಬಳಸುವ ಮೊದಲ 100 ಯೂನಿಟ್‌ ವಿದ್ಯುತ್‌ಗೆ ಪ್ರತಿ ಯೂನಿಟ್‌ ದರ 4.75 ರೂ. ವಿಧಿಸಲಾಗಿದೆ. 100 ಯೂನಿಟ್ ಮೀರಿದರೆ ಬಳಸಿದ ಅಷ್ಟೂ ಯೂನಿಟ್‌ಗೆ 2ನೇ ಶ್ರೇಣಿ ದರ ಪ್ರತಿ ಯೂನಿಟ್‌ಗೆ 7 ರೂ. ಅನ್ವಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

suddiyaana