ಹುಲಿ ಬೇಟೆಗೆ 17 ದಿನಗಳ ಸತತ ಕಾರ್ಯಾಚರಣೆ – ಕೊನೆಗೂ ಹೆತ್ತವರ ಕಣ್ಮುಂದೆ ಬಾಲಕನ ಬಲಿ ಪಡೆದ ಹುಲಿ ಸೆರೆ

ಹುಲಿ ಬೇಟೆಗೆ  17 ದಿನಗಳ ಸತತ ಕಾರ್ಯಾಚರಣೆ – ಕೊನೆಗೂ ಹೆತ್ತವರ ಕಣ್ಮುಂದೆ ಬಾಲಕನ ಬಲಿ ಪಡೆದ ಹುಲಿ ಸೆರೆ

ಶಾಲೆಯಿಂದ ಬಂದ ಮಗ ಅಂದು ಅಪ್ಪ ಅಮ್ಮನನ್ನು ನೋಡಲು ಜಮೀನಿನ ಬಳಿ ಓಡೋಡಿ ಬಂದಿದ್ದ. ಹೆತ್ತವರ ಕೆಲಸ ಮುಗಿದಿಲ್ಲ ಎಂದು ಮರದ ಬಳಿ ಕುಳಿತು ಕಾಯುತ್ತಿದ್ದ. ಹೆತ್ತವರು ಕೂಡಾ ಮಗನಿಗಾಗಿ ಬೇಗ ಬೇಗ ಕೆಲಸ ಮುಗಿಸುತ್ತಿದ್ದರು. ಕಣ್ಣೆದುರೇ ಇರುವ ಮರದ ಬಳಿ ಮಗ ಕೂತಿದ್ದಾಗ ಹೆತ್ತವರು ಕೂಡಾ ನಿಶ್ಚಿಂತೆಯಲ್ಲೇ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಆದರೆ, ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯುವುದು ಎಂಬಂತೆ ಹುಲಿ ರೂಪದಲ್ಲಿ ಬಂದ ಯಮ ಹೆತ್ತವರು ಓಡೋಡಿ ಬರುವುದರೊಳಗೆ ಮಗನನ್ನು ಬಲಿ ಪಡೆದಿತ್ತು. ಈ ಘೋರ ಘಟನೆಯನ್ನು ಅರಣ್ಯ ಇಲಾಖೆ ಕೂಡಾ ಗಂಭೀರವಾಗಿ ಪರಿಗಣಿಸಿತ್ತು. ಕ್ರೂರ ವ್ಯಾಘ್ರನ ಸೆರೆ ಹಿಡಿಯಲು ಇನ್ನಿಲ್ಲದ ಕಸರತ್ತು ನಡೆಸಿತ್ತು. ಇದೀಗ ಹುಲಿ ತಾನಾಗೇ ಬಂದು ಸೆರೆಯಾಗಿದೆ.

ಇದನ್ನೂ ಓದಿ: ಬಾಲಕನನ್ನು ಬಲಿ ಪಡೆದ ಹುಲಿ – ಅರಣ್ಯ ಇಲಾಖೆಯಿಂದ 15 ಲಕ್ಷ ರೂಪಾಯಿ ಪರಿಹಾರದ ಚೆಕ್

ಎಚ್.ಡಿ.ಕೋಟೆ ತಾಲೂಕಿನ ಕಲ್ಲಹಟ್ಟಿ ಗ್ರಾಮದ ರೈತ ಕೃಷ್ಣನಾಯಕ ಮತ್ತು ಮಾದೇವಿ ಬಾಯಿ ಎಂಬುವರ 9 ವರ್ಷದ ಪುತ್ರ ಚರಣ್ ನಾಯಕ್ ನನ್ನ ಹುಲಿ ಬಲಿ ಪಡೆದಿತ್ತು. ಸೆಪ್ಟಂಬರ್ 4 ರ ಸೋಮವಾರ ಶಾಲೆ ಮುಗಿಸಿಕೊಂಡು ಅಪ್ಪ-ಅಮ್ಮ ಕೆಲಸ ಮಾಡ್ತಿದ್ದ ಜಮೀನಿಗೆ ಬಾಲಕ ಹೋಗಿದ್ದನು. ಈ ವೇಳೆ ಹುಲಿ ದಾಳಿ ನಡೆಸಿ ಹೆತ್ತವರ ಕಣ್ಣೆದುರೇ ಕಂದನ ಬಲಿ ಪಡೆದಿತ್ತು. ಬಾಲಕನ ಬಹುಪಾಲು ದೇಹವನ್ನ ಹುಲಿ ತಿಂದು ಹೋಗಿತ್ತು. ಈ ಘಟನೆ ನಡೆದ ನಂತರ ಪ್ರತಿನಿತ್ಯ ನರಭಕ್ಷಕ ಹುಲಿ ಸೆರೆಗೆ ನಿರಂತರ ಕಾರ್ಯಾಚರಣೆ ನಡೆಸಲಾಗಿತ್ತು. ಸತತ 16-17 ದಿನದಿಂದಲೂ ಕಲ್ಲಹಟ್ಟಿ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಹುಲಿಗಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು. ಡ್ರೋಣ್ ಮೂಲಕ ಹುಡುಕಿದಾಗ ಹುಲಿಯ ಬಗ್ಗೆ ಮಾಹಿತಿ ಸಿಕ್ಕಿತ್ತು. ಹುಲಿಯ ಚಲನವಲನಗಳನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿಯು ಅದು ಮುಂದೆ ಓಡಾಡಬಹುದಾದ ವಲಯಗಳನ್ನು ಊಹೆ ಮಾಡಿದ್ದರು. ಮಂಗಳವಾರ ರಾತ್ರಿ ಕಲ್ಲಟಿ ಗ್ರಾಮದ ತಾವರೆ ನಾಯಕ ಎಂಬುವರ ಜಮೀನಿನ ಬಳಿ ಅರವಳಿಕೆ ವೈದ್ಯರಾದ ರಮೇಶ್ ರಂಜನ್ ಹಾಗೂ ಅರಣ್ಯ ಅಧಿಕಾರಿಗಳು ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲು ಯಶಸ್ವಿಯಾಗಿದ್ದಾರೆ. ಸದ್ಯ ಹುಲಿಗೆ ನಾಗರಹೊಳೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರ್ಯಾಚರಣೆಯಲ್ಲಿ ಎಸಿಎಫ್ ರಂಗಸ್ವಾಮಿ, ದಯಾನಂದ್, ಅಂತರಸಂತೆ ವಲಯ ಅರಣ್ಯ ಅಧಿಕಾರಿ ಭರತ್, ಅರವಳಿಕೆ ವೈದ್ಯರಾದ ರಮೇಶ್ ರಂಜನ್ ಅರಣ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.

 

Sulekha