10 ದಿನದಲ್ಲಿ 7 ಹಸುಗಳ ಮೇಲೆರಗಿದ ಹುಲಿ- ಕೊನೆಗೂ ಸೆರೆಸಿಕ್ಕ ವ್ಯಾಘ್ರ

10 ದಿನದಲ್ಲಿ 7 ಹಸುಗಳ ಮೇಲೆರಗಿದ ಹುಲಿ- ಕೊನೆಗೂ ಸೆರೆಸಿಕ್ಕ ವ್ಯಾಘ್ರ

ಉತ್ತರಕನ್ನಡ :10 ದಿನಗಳಿಂದ ಆ ಊರಲ್ಲಿ ಹುಲಿ ಬಂತು ಹುಲಿ ಅನ್ನೋ ಮಾತು ಪ್ರತಿ ಮನೆ ಮನೆಯಲ್ಲೂ ಕೇಳಿಬರುತ್ತಲೇ ಇತ್ತು. ಜಾನುವಾರುಗಳನ್ನ ನಿತ್ಯ ಲೆಕ್ಕ ಮಾಡಲೇ ಬೇಕಿತ್ತು. ಯಾಕೆಂದರೆ ಆ ಹುಲಿ 10 ದಿನಗಳಲ್ಲಿ 5 ಜಾನುವಾರುಗಳನ್ನ ತಿಂದು ಮುಗಿಸಿತ್ತು. 3 ಹಸುಗಳನ್ನ ಕಚ್ಚಿ ಗಾಯಗೊಳಿಸಿತ್ತು. ಗ್ರಾಮಸ್ಥರಂತೂ ಮನೆಯಿಂದ ಹೊರಗೆ ಹೋಗಲು ಹೆದರುತ್ತಿದ್ದರು. ಕೊನೆಗೂ ಊರ ತುಂಬಾ ರಾಜನಂತೆ ಮೆರೆದಾಡುತ್ತಿದ್ದ ಹುಲಿರಾಯ ಸೆರೆಯಾಗಿದ್ದಾನೆ.

ಇದನ್ನೂ ಓದಿ :  ಕೈಗೆ ಕಚ್ಚಿದ ಮುದ್ದಿನ ಬೆಕ್ಕು – ಚಿಕಿತ್ಸೆ ಪಡೆದರೂ ಬದುಕಲೇ ಇಲ್ಲ ಮಾಲೀಕ..!

ಉತ್ತರ ಕನ್ನಡ ಜಿಲ್ಲೆಯ ಪಣಸೋಲಿ ಮತ್ತು ಗುಂದ ವನ್ಯಜೀವಿ ವಲಯದ ಉಳವಿ, ಗುಂದ, ಚಂದ್ರಾಳಿ, ಚಾಪೆರಾ ಮತ್ತು ಹೆಣಕೊಳ ಸುತ್ತಲಿನ ಜನ ಕಳೆದ 10 ದಿನಗಳಿಂದ ಹುಲಿ ಎಂಬ ಪದ ಬಾಯಲ್ಲಿ ಬಂದ್ರೆ ಬೆಚ್ಚಿ ಬೀಳುತ್ತಿದ್ದರು. ಅಷ್ಟೇ ಅಲ್ಲದೇ ಜೀವನಾಧಾರಕ್ಕೆ ಅಂತಾ ಸಾಕಿಕೊಂಡಿದ್ದ ಜಾನುವಾರುಗಳು ಕೂಡಾ ಹುಲಿ ದಾಳಿಗೆ ಬಲಿಯಾಗಿದ್ದವು. 5 ಜಾನುವಾರು ಸಾವನ್ನಪ್ಪಿದ್ರೆ,  3 ದನಗಳ ಪರಿಸ್ಥಿತಿ ಗಂಭೀರವಾಗಿದೆ. ಕಳೆದ ಭಾನುವಾರ ರಾತ್ರಿಯೂ ಮತ್ತೆರಡು ದನಗಳ ಮೇಲೆ ಹುಲಿ ಎರಗಿದೆ. ಹುಲಿಯ ಭಯದಿಂದ ಜನ ಅರಣ್ಯಾಧಿಕಾರಿಗಳ ಮೊರೆ ಹೋಗಿದ್ದರು. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಚಾಪೇರಾ ಸಮೀಪದ ಮಾಲಿ ಚಂದ್ರಾಳಿಯಲ್ಲಿ ರಾಮಾ ಬಿರಂಗತ ಕೊಟ್ಟಿಗೆಯಲ್ಲಿ ಬೋನು ರೆಡಿ ಮಾಡಿ ಇಟ್ಟಿದ್ದರು. ಸೋಮವಾರ ಬೆಳಗಿನ ಜಾವ 3 ಗಂಟೆಗೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಹುಲಿ ಬಂದು ತಗ್ಲಾಕಿಕೊಂಡಿದೆ. ಸೆರೆ ಸಿಕ್ಕಿದ್ದು ಹೆಣ್ಣು ಹುಲಿಯಾಗಿದ್ದು, 6-7 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಹುಲಿಯನ್ನು ಹಂಪಿ ಮೃಗಾಲಯಕ್ಕೆ ಸಾಗಿಸಲಾಗಿದೆ.. ಇದೇ ಹುಲಿ 4 ವರ್ಷದ ಹಿಂದೆಯೂ ಅಣಶಿಭಾಗದಲ್ಲಿ ಕ್ಯಾಮರಾ ಟ್ರ್ಯಾಪ್ನಲ್ಲಿ ಸೆರೆಯಾಗಿತ್ತು ಎನ್ನಲಾಗುತ್ತಿದೆ. ವಯಸ್ಸಿನ ಕಾರಣವೋ, ಅನಾರೋಗ್ಯವೋ ಈಗ ನಾಡಿನತ್ತ ಮುಖ ಮಾಡಿದೆ. ಕಾಡಿನಲ್ಲಿ ಪ್ರಾಣಿಗಳನ್ನು ಬೇಟೆಯಾಡುವ ಶಕ್ತಿ ಕಳೆದುಕೊಳ್ಳುತ್ತಿರುವ ಈ ಹುಲಿ ಊರೊಳಗೆ ಬಂದು ಮನುಷ್ಯರ ಮೇಲೂ ದಾಳಿ ಮಾಡುವ ಸಂಭವ ಇತ್ತು. ಹೀಗಾಗಿ ಅರಣ್ಯಾಕಾರಿಗಳು ತಕ್ಷಣ ಮೇಲಾಧಿಕಾರಿಗಳಿಂದ ಮಾರ್ಗದರ್ಶನ ಪಡೆದು ಹುಲಿ ಸೆರೆ ಹಿಡಿದಿದ್ದಾರೆ.

suddiyaana