ಬಿಸಿಲಿನಲ್ಲಿ ಬೇಯುತ್ತಿರುವ ಜನರಿಗೆ ಮತ್ತೊಂದು ಶಾಕ್ – ಮತ್ತಷ್ಟು  ಹೆಚ್ಚಾಗುತ್ತೆ ತಾಪಮಾನ!  

ಬಿಸಿಲಿನಲ್ಲಿ ಬೇಯುತ್ತಿರುವ ಜನರಿಗೆ ಮತ್ತೊಂದು ಶಾಕ್ – ಮತ್ತಷ್ಟು  ಹೆಚ್ಚಾಗುತ್ತೆ ತಾಪಮಾನ!  

ಬೆಂಗಳೂರು: ರಾಜ್ಯದ ಹಲವೆಡೆ ಬಿಸಿಲಿನ ಬೇಗೆಯಿಂದ ಕೊತ ಕೊತ ಕುದಿಯುತ್ತಿವೆ. ಹೆಚ್ಚುತ್ತಿರುವ ತಾಪದಿಂದಾಗಿ ಜನರು ಸೆಖೆಯಿಂದ ತತ್ತರಿಸಿದ್ದಾರೆ. ಮನೆಯಿಂದ ಹೊರಗೆ ಬರಲು ಪರದಾಡುತ್ತಿದ್ದಾರೆ. ಇದೀಗ ಮುಂದಿನ ಒಂದೆರಡು ದಿನ ಗರಿಷ್ಠ ಉಷ್ಣಾಂಶದಲ್ಲಿ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ ನಷ್ಟು ಬಿಸಿಲಿನ ತಾಪ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: ದೇಶದಲ್ಲಿ ಹವಾಮಾನ ಬದಲಾವಣೆ – ಈ ಬಾರಿ ಎಲ್ಲೆಲ್ಲಿ ಮಳೆ ಕಡಿಮೆ?

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಕ್ಷೀಣಿಸುತ್ತಿರುವ ಸೂಚನೆ ಬೆನ್ನಲ್ಲೇ ಬಿಸಿಲ ತಾಪ ಹೆಚ್ಚಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಹೆಚ್ಚಳ ಕಂಡು ಬಂದಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ 2 ರಿಂದ 3 ಡಿಗ್ರಿ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 2 ಸೆಲ್ಸಿಯಸ್‌ ಡಿಗ್ರಿವರೆಗೆ ಹೆಚ್ಚಾಗುವ ಸಾಧ್ಯತೆ ಇದೆ.

ಇನ್ನು ಕರಾವಳಿ ಪ್ರದೇಶದ ಜನರು ಕೂಡ ಬಿಸಿಲಿನ ತಾಪಕ್ಕೆ ಬೆಂದು ಹೋಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉರಿ ಬಿಸಿಲು ವಾತಾವರಣವಿದೆ. ದಿನದಲ್ಲಿ 34 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ದಾಖಲಾಗುತ್ತಿದೆ. ಅಷ್ಟೇ ಅಲ್ಲದೇ ರಸ್ತೆ ಬದಿಯಲ್ಲಿ ಹಣ್ಣು ಹಂಪಲು ಮಾರಾಟ ಮಾಡುತ್ತಿದ್ದ ಮುಹಮ್ಮದ್ ರಫೀಕ್ ಎಂಬುವವರಿಗೆ ಬಿಸಿಲಿನ ತಾಪದಿಂದ ಸುಟ್ಟ ಗಾಯಗಳಾಗಿವೆ ಅಂತಾ ವರದಿಯಾಗಿದೆ.

ಕಳೆದ ವಾರದ ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ದಾಖಲಾಗಿತ್ತು. ಮತ್ತೆ ಮಳೆ ವಾತಾವರಣ ಕಂಡು ಬಂದ ಹಿನ್ನೆಲೆಯಲ್ಲಿ ಇಳಿಕೆ ಆಗಿತ್ತು. ಸೋಮವಾರ 40.1 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಮುಂದಿನ ಒಂದೆರಡು ದಿನ ಹಾಸನ, ಕೊಡಗು, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

suddiyaana