ಕನ್ನಡಿಗರ ಭಾವೈಕ್ಯತೆಯ ಸಂಕೇತ ನಮ್ಮ ಹೆಮ್ಮೆಯ ಬಾವುಟ..!
ನಮ್ಮ ನಾಡು ಕರ್ನಾಟಕದ ಸಂಕೇತವಾಗಿ ಹಳದಿ ಹಾಗೂ ಕೆಂಪು ಬಣ್ಣದ ಬಾವುಟವಿದೆ. ಕನ್ನಡದ ಬಾವುಟ ಕೇವಲ ಬಣ್ಣದ ಬಾವುಟವಲ್ಲ, ಅದು ಕನ್ನಡಿಗರ ಭಾವೈಕ್ಯತೆಯ ಸಂಕೇತವೂ ಹೌದು. ಕನ್ನಡ ಬಾವುಟವನ್ನು ಹುಟ್ಟುಹಾಕಿದ ಮಹಾನುಭಾವರನ್ನು ನೆನೆಯಲೇಬೇಕು.
ಇದನ್ನೂ ಓದಿ: ಧಾರವಾಡದಲ್ಲಿ ಮೊಳಗಿತ್ತು ಕನ್ನಡದ ಕಹಳೆ – ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪನೆಯೊಂದಿಗೆ ಏಕೀಕರಣ ಚಳುವಳಿ
ನಮ್ಮ ಹಿರಿಯರು ಮಾಡಿಕೊಟ್ಟ ಹಳದಿ ಕೆಂಪು ಧ್ವಜ ಏಕತೆಯ ಸಂಕೇತವೂ ಹೌದು. ರಾಜ್ಯೋತ್ಸವ ಸಂದರ್ಭಗಳಲ್ಲಿ ಕನ್ನಡ ಬಾವುಟ ಹಾರಿಸಿ, ಸಂಭ್ರಮಿಸುವ ನಾವು, ಕನ್ನಡ ಬಾವುಟವನ್ನು ಹುಟ್ಟುಹಾಕಿದ ಮಹಾನುಭಾವರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಸ್ವಾತಂತ್ರ್ಯ ನಂತರ ಬೆಂಗಳೂರಿನಲ್ಲಿ ಅನ್ಯ ಭಾಷಿಕರ ಪ್ರಾಭಲ್ಯ ಬಲಿಷ್ಠವಾಗಿತ್ತು. ಅಂತಹ ಸ್ಥಿತಿಯಲ್ಲಿ ಕನ್ನಡಿಗರ ಸ್ವಾಭಿಮಾನ ಎತ್ತಿ ಹಿಡಿಯಲು ಕನ್ನಡ ಬಾವುಟವನ್ನು ರಚಿಸಿದವರು ಮ. ರಾಮಮೂರ್ತಿ. ಬೆಂಗಳೂರು ಮೂಲದ ಬರಹಗಾರ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಮತ್ತು ಕನ್ನಡ ಹೋರಾಟಗಾರ ಮ. ರಾಮಮೂರ್ತಿಯವರು ಈ ಹಳದಿ -ಕೆಂಪು ಬಾವುಟವನ್ನು ಪ್ರಥಮ ಬಾರಿಗೆ ತಯಾರಿಸಿ, ಬಳಸಿದ್ದರು. ಎಂ ರಾಮಮೂರ್ತಿ ಅವರು ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಸೀತಾರಾಮ ಶಾಸ್ತ್ರಿ ಅವರ ಪುತ್ರ.
1965 ರಲ್ಲಿ ಶ್ರೀ ಮ.ರಾಮಮೂರ್ತಿಯವರು ಪ್ರಾರಂಭಿಸಿದ ರಾಜಕೀಯ ಪಕ್ಷ ಕನ್ನಡ ಪಕ್ಷಕ್ಕೆ ಬಾವುಟವಾಗಿ ಹುಟ್ಟು ಹಾಕಲಾಯಿತು. ಇದೇ ಕರ್ನಾಟಕದ ಬಾವುಟವಾಯ್ತು. ಧ್ವಜದಲ್ಲಿನ ಹಳದಿ ಮತ್ತು ಕೆಂಪು ಬಣ್ಣಗಳು ಅರಿಶಿನ ಮತ್ತು ಕುಂಕುಮವನ್ನು ಪ್ರತಿನಿಧಿಸುತ್ತವೆ, ಇದು ರಾಜ್ಯದ ಮಂಗಳಕರ ಮತ್ತು ಯೋಗಕ್ಷೇಮವನ್ನು ಸಂಕೇತಿಸುತ್ತದೆ. ಸಾಮಾನ್ಯವಾಗಿ, ಹಳದಿ ಮತ್ತು ಕೆಂಪು ಬಣ್ಣಗಳು ಕ್ರಮವಾಗಿ ಸಕಾರಾತ್ಮಕತೆ ಮತ್ತು ಧೈರ್ಯವನ್ನು ಸೂಚಿಸುತ್ತವೆ. ಇತಿಹಾಸದ ವಿಷಯಕ್ಕೆ ಬಂದರೆ ಅನೇಕ ರಾಜವಂಶಗಳು ಈ 2 ಬಣ್ಣಗಳು ಇರುವ ಚಿಹ್ನೆಗಳನ್ನು ಹೊಂದಿದ್ದವು. ಇಂದಿಗೂ ಸರ್ಕಾರಿ ಲಾಂಛನಗಳು ಅದನ್ನು ಹೊಂದಿವೆ. ಆದರೆ ಈ ವಿಷಯವಾಗಿ ಯಾವುದೇ ಗಮನಾರ್ಹ ಐತಿಹಾಸಿಕ ಮಹತ್ವ ಇಲ್ಲ ಎಂಬ ಕಾರಣಕ್ಕಾಗಿ ವಾದ- ವಿವಾದ ನಡೆಯುತ್ತಿದೆ. ಕೇಂದ್ರ ಸರ್ಕಾರದಿಂದಲೂ ಕೂಡ ಮಾನ್ಯತೆ ದೊರೆತಿಲ್ಲದಿರುವುದು ಕನ್ನಡಿಗರಿಗೆ ಬೇಸರದ ಸಂಗತಿಯಾಗಿದೆ. ಕರ್ನಾಟಕಕ್ಕೆ ಅಧಿಕೃತ ರಾಜ್ಯ ಧ್ವಜ ಬೇಕು ಎಂಬುದು ಕನ್ನಡ ಪರ ಹೋರಾಟಗಾರರ ಬಹುಕಾಲದ ಬೇಡಿಕೆಯಾಗಿದೆ.